* ಶ್ರೀರಾಮ ಸೇನೆಯಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ
* ನಬೀಸಾಬ್ ಕುಟುಂಬಕ್ಕೆ ಮಾಜಿ ಸಿಎಂ ಎಚ್‌ಡಿಕೆ ನೆರವು
* ತಮ್ಮ ಆಪ್ತರ ಮೂಲಕ ಹತ್ತು ಸಾವಿರ ರೂ. ನೆರವು
ಧಾರವಾಡ, (ಏ.10) : ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗಡಿ ಮಾಲೀಕ ನಬಿಸಾಬ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿದ್ದಾರೆ. ತಮ್ಮ ಆಪ್ತರ ಮೂಲಕ ಹತ್ತು ಸಾವಿರ ರೂ. ನೆರವು ನೀಡಿದ್ದಾರೆ.
ಧಾರವಾಡ ತಾಲೂಕಿನ ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ಹಿಂದೂಯೇತರ ಅಂಗಡಿ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿನ್ನೆ ದಾಳಿ ನಡೆಸಿದ್ದರು. ನಿನ್ನೆ (ಶನಿವಾರ) ನಡೆದ ಗಲಾಟೆಯಲ್ಲಿ ವ್ಯಾಪಾರಿ ನಬೀಸಾಬ್ ಅವರ 5 ರಿಂದ 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ಹಾನಿಯಾಗಿತ್ತು. ಇದರಿಂದ ವ್ಯಾಪಾರಿ ನಬೀಸಾಬ್ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರಕ್ರಿಯಿಸಿದ್ದು, ತಿನ್ನುವ ಅನ್ನವನ್ನು ಕಿತ್ತುಕೊಂಡು ಏನ್ ಮಾಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಧಾರವಾಡದಲ್ಲಿ ಮುಸ್ಲಿಂ ಅಂಗಡಿ ತೆರವು: ನನ್ನನ್ನು ಕೊಂದು ಬಿಡಿ ಎಂದು ಅಂಗಡಿ ಮಾಲಿಕ ಕಣ್ಣೀರು
ಕಳೆದ 15 ದಿನಗಳ ಹಿಂದೆ ಶ್ರೀರಾಮಸೇನಾ ಕಾರ್ಯಕರ್ತರು ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಮನವಿ ನೀಡಿದ್ದರು. ಮನವಿ ಸ್ವೀಕರಿಸಿದ್ದ ದೇವಸ್ಥಾನದ ಆಡಳಿತ ಮಂಡಳಿ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಭರವಸೆ ನೀಡಿತ್ತು.
ಆದರೆ, ಈ ಕುರಿತು ದೇವಸ್ಥಾನ ಸಮಿತಿ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನಿನ್ನೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಿಕೇರಿಗೆ ಬಂದು ಹಿಂದೂಯೇತರ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಕುಮಾರಸ್ವಾಮಿ ಹೇಳಿದ್ದೇನು?
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವುದು ಹೇಯ & ಪರಮ ಕಿರಾತಕ ಕೃತ್ಯ. ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುವ ಭಯೋತ್ಪಾದಕರಿಗೂ, ಶಾಂತಿ-ಸೌಹಾರ್ದತೆಗೆ ಕಿಚ್ಚಿಡುತ್ತಿರುವ ಈ ಕಿರಾತಕರಿಗೂ ವ್ಯತ್ಯಾಸವೇ ಇಲ್ಲ.
ತಿನ್ನುವ ಅನ್ನಕ್ಕೆ ಮಣ್ಣುಹಾಕಿ ಬದುಕಿಗೆ ಬೆಂಕಿ ಇಡುವ ಇಂಥ ಪ್ರವೃತ್ತಿ ಅನಾಗರಿಕ-ಅಸಹ್ಯ. ಕರ್ನಾಟಕವನ್ನು ಈ ದುಷ್ಟರು, ಶಿಲಾಯುಗದತ್ತ ಹಿಮ್ಮೆಟ್ಟಿಸುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ರಕ್ಕಸರು ಕಲ್ಲಂಗಡಿಯನ್ನು ರಸ್ತೆಗೆಸೆದು ನಾಶ ಮಾಡಿದ ಪರಿಯನ್ನು ಗಮಿನಿಸಿದರೆ ಸಾಕು; ಇವರ ರಾಕ್ಷಸ ಪ್ರವೃತ್ತಿ ಉಗ್ರರಿಗಿಂತ ಕಮ್ಮಿಯೇನಲ್ಲ. ಅನ್ನವನ್ನೇ ಹಾಳುಗೆಡವಿದ ಈ ನೀಚರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.