ಹೈಕೋರ್ಟ್ ತೀರ್ಪಿನಿಂದ ಬಿಜೆಪಿಗೆ ಮುಖಭಂಗ

Published : Oct 01, 2022, 10:45 AM ISTUpdated : Oct 01, 2022, 10:47 AM IST
ಹೈಕೋರ್ಟ್ ತೀರ್ಪಿನಿಂದ ಬಿಜೆಪಿಗೆ ಮುಖಭಂಗ

ಸಾರಾಂಶ

ಹೈಕೋರ್ಟ್ ತೀರ್ಪಿನಿಂದ ಬಿಜೆಪಿಗೆ ಮುಖಭಂಗ  ಪಾಲಿಕೆ 4ನೇ ಅವಧಿ ಮೇಯರ್‌ ಸ್ಥಾನ ಎಸ್‌ಟಿಗೆ ಮೀಸಲು: ಮಂಜು ಗಡಿಗುಡಾಳ್‌ ಎಸ್ಟಿಗೆ ಅನ್ಯಾಯವೆಂದು ಕೋರ್ಟ್ ಮೆಟ್ಟಿಲೇರಿದ್ದ ಸವಿತಾ ಹುಲ್ಮನಿಗೆ ಜಯ

ದಾವಣಗೆರೆ (ಅ.1) : ಪಾಲಿಕೆ 4ನೇ ಅವಧಿಯ ಮೇಯರ್‌ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿದ್ದ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯದಲ್ಲಿ ಮುಖಭಂಗವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆಂಬುದಕ್ಕೆ ಮೇಯರ್‌ ಸ್ಥಾನವನ್ನು ಎಸ್‌ಟಿಗೆ ಮೀಸಲಾತಿ ನೀಡಿರುವುದೇ ಸಾಕ್ಷಿ ಎಂದು ಪಾಲಿಕೆ ವಿಪಕ್ಷ ನಾಯಕ ಜಿ.ಎಸ್‌.ಮಂಜುನಾಥ ಗಡಿಗುಡಾಳ ಹೇಳಿದರು.

ದಾವಣಗೆರೆ: ಅ.5ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವದಿಂದ ಬೃಹತ್ ಶೋಭಾಯಾತ್ರೆ

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ದಾವಣಗೆರೆ ಪಾಲಿಕೆಯ 4ನೇ ಅವಧಿಯ ಮೇಯರ್‌ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಿತ್ತು. ಅದರ ವಿರುದ್ಧ ಕಾಂಗ್ರೆಸ್‌ ಸದಸ್ಯೆ ಪರಿಶಿಷ್ಟಪಂಗಡದ ಸವಿತಾ ಗಣೇಶ ಹುಲ್ಮನಿ ಹೈಕೋರ್ಚ್‌ನಲ್ಲಿ ಪ್ರಶ್ನಿಸಿದ್ದರಿಂದ ಇದೀಗ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದ್ದು, ಮೇಯರ್‌ ಸ್ಥಾನ ಎಸ್‌ಟಿಗೆ ಮೀಸಲಾಗಿದೆ ಎಂದರು.

ಹೋರಾಟಕ್ಕೆ ಜಯ:

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆದ್ದು, ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ, ವಾಮಮಾರ್ಗದಲ್ಲಿ ಬಿಜೆಪಿಯವರು ದಾವಣಗೆರೆ ವಾಸಿಗಳೇ ಅಲ್ಲದ, ಇಲ್ಲಿನ ಮತದಾರರೂ ಆಗಿರದ ತೇಜಸ್ವಿನಿ ರಮೇಶ್‌ ಸೇರಿ ಅನೇಕ ಎಂಎಲ್‌ಸಿಗಳ ಹೆಸರನ್ನು ಮೋಸದಿಂದ ಸೇರಿಸಿ, ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ನಾಲ್ಕನೇ ಅವಧಿ ಮೀಸಲಾತಿ ನಿಯಮಾನುಸಾರ ಎಸ್ಟಿಗೆ ಮೀಸಲಾಗಬೇಕಿತ್ತು. ಆದರೆ, ಸ್ಥಳೀಯ ಬಿಜೆಪಿ ಮುಖಂಡರು ಸಾಮಾನ್ಯ ಮಹಿಳೆಗೆ ಮೀಸಲಾತಿ ಮಾಡಿಸಿದ್ದರು. ತಮ್ಮ ಪಕ್ಷಕ್ಕೆ ಅನುಕೂಲ ಮಾಡಲು ಅಧಿಕಾರ ದುರುಪಯೋಗಪಡಿಸಿಕೊಂಡ ರಾಜ್ಯ ಸರ್ಕಾರಕ್ಕೆ ಈಗ ಮುಖಭಂಗವಾಗಿದೆ. ಕಾಂಗ್ರೆಸ್‌ ಸದಸ್ಯೆ ಸವಿತಾ ಗಣೇಶ ಹುಲ್ಮನಿ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ತಿಳಿಸಿದರು.

ಹೈಕೋರ್ಚ್‌ ಮೊರೆ:

ಸರ್ಕಾರವು ಕಾನೂನು, ನಿಯಮದ ಪ್ರಕಾರ ದಾವಣಗೆರೆ ಮೇಯರ್‌ ಸ್ಥಾನ ಎಸ್‌ಟಿಗೆ ನೀಡಬೇಕಿತ್ತು. 2 ಸಲ ಸಾಮಾನ್ಯ, 3ನೇ ಅವಧಿಗೆ ಎಸ್‌ಟಿ ಮಹಿಳಾ ಮೀಸಲಾತಿ ಆಗಿತ್ತು. 4ನೇ ಅವಧಿಗೆ ಎಸ್‌ಟಿಗೆ ಮೀಸಲಾಗಬೇಕಿತ್ತು. ಆದರೆ, ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಪಡಿಸಿ, ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ಸಿನ ಸದಸ್ಯೆ ಸವಿತಾ ಗಣೇಶ, ಕಾಂಗ್ರೆಸ್‌ ಮುಖಂಡ ಗಣೇಶ ಹುಲ್ಮನಿ ಹೈಕೋರ್ಚ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕಾನೂನು ಪ್ರಕಾರ ಎಸ್‌ಟಿಗೆ ಮೀಸಲಾತಿ ನಿಗದಿಪಡಿಸಿ, ತೀರ್ಪು ನೀಡಿದೆ. ಇದರಿಂದ ಎಚ್ಚೆತ್ತ ಸರ್ಕಾರ ಈಗ ಅಧಿಸೂಚನೆ ಹೊರಡಿಸಿ, ಮೇಯರ್‌ ಸ್ಥಾನವನ್ನು ಎಸ್‌ಟಿಗೆ ನಿಗಿದಪಡಿಸಿ, ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಕುತಂತ್ರ ರಾಜಕಾರಣ ಇದರಿಂದಲೇ ಬಯಲಾಗಿದೆ ಎಂದು ವ್ಯಂಗ್ಯವಾಡಿದರು.

ತೀರ್ಪಿನಿಂದ ಉತ್ತರ:

ಕಾಂಗ್ರೆಸ್‌ ಮುಖಂಡ ಗಣೇಶ ಹುಲ್ಮನಿ ಮಾತನಾಡಿ, ನಮಗೆ ಸಿಕ್ಕಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ವಾಮಮಾರ್ಗದ ಬಿಜೆಪಿಗೆ ಹೈಕೋರ್ಚ್‌ ತೀರ್ಪು ಛೀಮಾರಿ ಹಾಕಿದಂತಿದೆ. ಎಸ್‌ಟಿಗೆ ಮೇಯರ್‌ ಸ್ಥಾನ ಮೀಸಲಾಗಿದ್ದು, ಖುಷಿ ತಂದಿದೆ. ಬೆಂಗಳೂರಿನಿಂದ ಎಂಎಲ್‌ಸಿಗಳನ್ನು ಕರೆ ತಂದು, ಮೋಸದಿಂದ ಅಧಿಕಾರದ ಗದ್ದುಗೆಯೇರುವುದು ಬಿಜೆಪಿ ಗುಣ. ಏನು ಬೇಕಾದರೂ ಮಾಡಬಹುದೆಂಬ ಅಹಂಕಾರಕ್ಕೆ ತೀರ್ಪಿನಿಂದ ತಕ್ಕ ಉತ್ತರ ಸಿಕ್ಕಿದೆ. ಕಾನೂನು ಎಲ್ಲರಿಗೂ ಒಂದೇ. ಬಿಜೆಪಿಯಲ್ಲಿ ಎಸ್‌ಟಿ ಸಮುದಾಯದ ಯಾರೊಬ್ಬರೂ ಸದಸ್ಯರಿಲ್ಲ ಎಂದು ಗಣೇಶ ಹುಲ್ಮನಿ ತಿಳಿಸಿದರು.

ಪಾಲಿಕೆ ಸದಸ್ಯರಾದ ಕೆ.ಚಮನ್‌ ಸಾಬ್‌, ಪಾಮೇನಹಳ್ಳಿ ನಾಗರಾಜ, ವಿನಾಯಕ ಪೈಲ್ವಾನ್‌, ಕಲ್ಲಳ್ಳಿ ನಾಗರಾಜ, ಜಗದೀಶ, ರವಿ, ತಿಮ್ಮೇಶ, ಸತೀಶ, ವಿನಯ್‌, ಮಂಜುನಾಥ ಇಟ್ಟಿಗುಡಿ, ಉಮೇಶ, ಜಗದೀಶ, ಗಣೇಶ ಇತರರಿದ್ದರು.

ಮಧ್ಯವರ್ತಿಗಳ ಆವಾಸ ಸ್ಥಾನ ದಾವಣಗೆರೆ ತಾಲೂಕು ಕಚೇರಿ!

2023-23ನೇ ಅವಧಿಗೆ ಮೇಯರ್‌ ಸ್ಥಾನ ಎಸ್‌ಟಿಗೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಒಬ್ಬರೇ ಒಬ್ಬ ಸದಸ್ಯರೂ ಪರಿಶಿಷ್ಟಪಂಗಡದವರಿಲ್ಲ. ಇರುವ ಐವರು ಸದಸ್ಯರೂ ಕಾಂಗ್ರೆಸ್ಸಿನಲ್ಲಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ ನಾಯಕರ ಭ್ರಮನಿರಸನಗೊಳಿಸಿದೆ. ವಿಜಯಪುರ ಪಾಲಿಕೆಗೆ ಸಾಮಾನ್ಯ ಮಹಿಳೆ, ದಾವಣಗೆರೆ ಪಾಲಿಕೆ ಎಸ್‌ಟಿಗೆ ಮೀಸಲಾಗಬೇಕಿತ್ತು. ಆದರೆ, ಸರ್ಕಾರ ಇದನ್ನು ಪಾಲಿಸಿರಲಿಲ್ಲ. ಹೈಕೋರ್ಚ್‌ ಆದೇಶದ ನಂತರ ದಾವಣಗೆರೆ ಮೇಯರ್‌ ಸ್ಥಾನ ಎಸ್‌ಟಿಗೆ ಮೀಸಲಿಡುವುದು ಅನಿವಾರ್ಯ.

ಗಣೇಶ ಹುಲ್ಮನಿ, ಕಾಂಗ್ರೆಸ್‌ ಯುವ ಮುಖಂಡ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ