ರಾಜ್ಯಕ್ಕೆ ಮೂರು ಉಪಮುಖ್ಯಮಂತ್ರಿ ಹುದ್ದೆ ಅಗತ್ಯವಿದೆಯೇ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಇದೀಗ ಕೇವಲ ಸಚಿವ ಕೆ.ಎನ್.ರಾಜಣ್ಣ ಇಂಥ ಬೇಡಿಕೆ ಮುಂದಿಟ್ಟಿದ್ದಾರೆ ಅಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ (ಸೆ.19): ರಾಜ್ಯಕ್ಕೆ ಮೂರು ಉಪಮುಖ್ಯಮಂತ್ರಿ ಹುದ್ದೆ ಅಗತ್ಯವಿದೆಯೇ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಇದೀಗ ಕೇವಲ ಸಚಿವ ಕೆ.ಎನ್.ರಾಜಣ್ಣ ಇಂಥ ಬೇಡಿಕೆ ಮುಂದಿಟ್ಟಿದ್ದಾರೆ ಅಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ಉಪ ಮುಖ್ಯಮಂತ್ರಿ(ಡಿಸಿಎಂ) ಹುದ್ದೆ ಸೃಷ್ಟಿಸುವಂತೆ ಹೈಕಮಾಂಡ್‌ಗೆ ಕೆ.ಎನ್.ರಾಜಣ್ಣ ಅವರು ಪತ್ರಬರೆದಿರುವ ವಿಚಾರ ತಿಳಿದಿದೆ. ರಾಜಣ್ಣ ಹೇಳಿದ ಮೇಲೆ ಚರ್ಚೆ ಶುರುವಾಗಬಹುದು.
ಡಿಸಿಎಂ ಹುದ್ದೆ ಅಗತ್ಯ ಇದೆಯೋ, ಇಲ್ವೋ ಎನ್ನುವುದನ್ನು ಪಕ್ಷ ತೀರ್ಮಾನ ಮಾಡಬೇಕು. ಉಪಮುಖ್ಯಮಂತ್ರಿ ಸ್ಥಾನ ಬೇಕೆಂದು ಬಹಳಷ್ಟು ಜನ ಹೇಳಿದ್ದಾರೆ. ಅವರವರ ಸಾಮರ್ಥ್ಯ ನೋಡಿ ಪಕ್ಷ ಆ ಸ್ಥಾನ ನೀಡುತ್ತದೆ. ಆದರೆ, ನಾನಂತೂ ಡಿಸಿಎಂ ಹುದ್ದೆ ಆಕಾಂಕ್ಷಿಯಲ್ಲ ಎಂದು ಹೇಳಿದರು. ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್ ಅವರ ಮನೆಗೆ ಹೋಗಿರುವುದು ನಿಜ ಎಂದಿರುವ ಸತೀಶ್ ಜಾರಕಿಹೊಳಿ, ಹರಿಪ್ರಸಾದ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಭೇಟಿಯಾಗಿ ಪಕ್ಷದ ವಿಚಾರವಾಗಿ ಚರ್ಚೆ ನಡೆಸಿದ್ದೇವೆಂದರು.
3 ಡಿಸಿಎಂ ಹೈಕಮಾಂಡ್‌ಗೆ ಬಿಟ್ಟದ್ದು: ರಾಜ್ಯದಲ್ಲಿ ಮೂವರು ಡಿಸಿಎಂಗಳನ್ನು ಮಾಡಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಆದರೆ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕಲ್ವೇ? ಈ ವಿಚಾರದಲ್ಲಿ ನನಗೇನಿಲ್ಲ. ಹೈಕಮಾಂಡ್ ಏನು ಹೇಳುತ್ತೋ ಅದನ್ನು ಮಾಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಹಣೆಗೆ ತಿಲಕ ಹಾಕಿಸಿಕೊಳ್ಳಲು ಸಿದ್ದರಾಮಯ್ಯ ನಕಾರ: ಹೊಸ ವಿವಾದದಲ್ಲಿ ಸಿಎಂ!
ರಾಜ್ಯದಲ್ಲಿ ಮೂರು ಡಿಸಿಎಂಗಳು ಬೇಕೆಂದು ಸಹಕಾರ ಸಚಿವ ರಾಜಣ್ಣ ಅವರು ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆಯುವುದಾಗಿ ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಸಂಪುಟದಲ್ಲಿ ಈಗಾಗಲೇ ಒಬ್ಬರು ಡಿಸಿಎಂ ಇದ್ದಾರೆ. ಆದರೆ, ಮೂವರು ಡಿಸಿಎಂಗಳನ್ನು ಮಾಡಬೇಕು ಎಂದು ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುತ್ತೀನಿ ಅಂತಲೂ ಹೇಳಿದ್ದಾರೆ. ಅವರು ಮಾತನಾಡಲಿ. ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕಲ್ವೆ? ಈ ವಿಚಾರದಲ್ಲಿ ನನಗೇನಿಲ್ಲ. ಹೈಕಮಾಂಡ್ ಏನು ಹೇಳುತ್ತೋ ಅದನ್ನು ಮಾಡುತ್ತೇನೆ ಎಂದರು.