ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಇಲ್ಲವೇ ಇಲ್ಲ. ತಮ್ಮ ಗ್ಯಾರಂಟಿ ಯೋಜನೆ ವೈಫಲ್ಯವಾಗದಂತೆ ನೋಡಿಕೊಳ್ಳಲು ರೈತಪರ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ. ಇದೊಂದು ನಿರುಪಯುಕ್ತ ಸರ್ಕಾರವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ನರಗುಂದ (ಸೆ.19): ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಇಲ್ಲವೇ ಇಲ್ಲ. ತಮ್ಮ ಗ್ಯಾರಂಟಿ ಯೋಜನೆ ವೈಫಲ್ಯವಾಗದಂತೆ ನೋಡಿಕೊಳ್ಳಲು ರೈತಪರ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ. ಇದೊಂದು ನಿರುಪಯುಕ್ತ ಸರ್ಕಾರವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಗಿಡ ನೆಟ್ಟು ಮಾತನಾಡಿದ ಅವರು, ಬರಗಾಲ ಕಾಮಗಾರಿ ನಡೆಯುತ್ತಿಲ್ಲ. ಸಂಪುಟ ಸಚಿವರಲ್ಲಿ ಹೊಂದಾಣಿಕೆ ಇಲ್ಲ.
ಕಾಂಗ್ರೆಸ್ಸಿಗರು ಅಧಿಕಾರಿಗಳ ವರ್ಗಾವಣೆ ದಂಧೆಯ ಮೂಲಕ ಕೋಟ್ಯಂತರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಸರ್ಕಾರ ಗುಜರಾತಿನಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ಪುತ್ಥಳಿ ನಿರ್ಮಾಣ ಮಾಡಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಮಾಜಿ ಪ್ರಧಾನಿ ರಾಜೀವ ಗಾಂಧಿ ಪುತ್ಥಳಿ ನಿರ್ಮಾಣ ಮಾಡಲು ಹೊರಟಿದೆ. ಇದರಿಂದ ರಾಷ್ಟ್ರಕ್ಕೆ ಯಾವುದೇ ಪ್ರಯೋಜನವಿಲ್ಲ. ಪ್ರವಾಸಿ ತಾಣವನ್ನಾಗಿ ಮಾಡಿದರೂ ಯಾರು ನೋಡುವುದಿಲ್ಲ, ಇದೆಲ್ಲವು ನಿರುಪಯುಕ್ತ ಎಂದರು.
ಜನವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ಸಿಗರಿಂದಲೇ ಪತನ: ಶಾಸಕ ಯತ್ನಾಳ ಭವಿಷ್ಯ
ಐಎನ್‌ಡಿಐಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಗೊತ್ತಿಲ್ಲ. ಇವರೇನೂ ಮಾಡಲು ಹೊರಟಿದ್ದಾರೆಂಬುದು ತಿಳಿಯದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿಗರನ್ನು ಆಪರೇಷನ್ ಹಸ್ತ ಮಾಡಲು ಹೊರಟಿದ್ದಾರೆ. ಸ್ವತಂತ್ರವಾಗಿ ಚುನಾವಣೆಯಲ್ಲಿ ಗೆಲ್ಲೋಕೆ ನಿಮಗೆ ಶಕ್ತಿ ಇಲ್ಲವೇ? 2024 ರ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವಗುರು ಒಪ್ಪಿದ ವಿದೇಶಿಗರು: ಜಿ 20 ಶೃಂಗಸಭೆಯಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳು ಭಾರತವನ್ನು ವಿಶ್ವಗುರು ಎಂದು ಒಪ್ಪಿಕೊಂಡಿದ್ದು, ಸೌದಿ ಅರೇಬಿಯಾ, ಗಲ್ಫ್ ರಾಷ್ಟ್ರಗಳು ಮತ್ತು ರಷ್ಯಾ ದೇಶ ಭಾರತದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಭಾರತ ಜಗತ್ತಿನ ಬೃಹತ್ 5ನೇ ಆರ್ಥಿಕ ಶಕ್ತಿ ರಾಷ್ಟ್ರವಾಗಿದೆ. 2024ಕ್ಕೆ ಮೋದಿ ಮತ್ತೆ ಪ್ರಧಾನಿಯಾದರೆ ಭಾರತ ಜಗತ್ತಿನ 3ನೇ ಆರ್ಥಿಕ ಶಕ್ತಿ ರಾಷ್ಟ್ರವಾಗಲಿದೆ. ಚೀನಾ ದೇಶ ಆರ್ಥಿಕವಾಗಿ ಕುಸಿಯುತ್ತಿದೆ. ಜನಧನ್ ಯೋಜನೆಯಿಂದ ದೇಶದಲ್ಲಿ 60 ಕೋಟಿ ಖಾತೆಗಳು ಜನತೆಯ ಆರ್ಥಿಕತೆ ಏಳ್ಗೆ ಕಂಡಿದೆ. ಭಯೋತ್ಪಾದನೆ ನಿರ್ಮೂಲನೆಗೊಂಡಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದಾರೆ ಎಂದರು.
ರೋಗಗಳಿಂದ ಅಂತ್ಯ: ಸನಾತನ ಧರ್ಮಕ್ಕೆ ಆದಿ ಅಂತ್ಯ ಎಂಬುದೇ ಗೊತ್ತಿಲ್ಲ. ನಾಶ ಮಾಡುವುದು ದೂರದ ಮಾತಾಗಿದೆ. ಸ್ವಾರ್ಥಕ್ಕಾಗಿ ವಿರೋಧಿಸುವ ವ್ಯಕ್ತಿಗಳೇ ರೋಗಗಳಿಂದ ಅಂತ್ಯ ಕಾಣುತ್ತಾರೆ. ಭಾರತದಲ್ಲಿ ನೂರಾರು ವರ್ಷ ಆಳ್ವಿಕೆ ನಡೆಸಿದ ಮೊಗಲರು, ಬ್ರಿಟಿಷರಿಂದಲೇ ಏನು ಮಾಡಲಿಕ್ಕೆ ಆಗಿಲ್ಲ. ಇನ್ನು ಇವರು ಯಾವ ಲೆಕ್ಕ. ಸನಾತನ ಧರ್ಮ ಮತ್ತು ಸಂವಿಧಾನ ಇವೆರಡೂ ಶಾಶ್ವತ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಟ್ವಿಟರ್ ಮೂಲಕ ಮನುಸ್ಮೃತಿ, ತಮ್ಮ ಪಕ್ಷದ ಯೋಜನೆಗಳ ಬಗ್ಗೆ ಮಾತನಾಡುವುದು ತಪ್ಪು ಎಂದರು.
ಸನಾತನ ಧರ್ಮಕ್ಕೆ ಬೈಯ್ದವರ ಕುಟುಂಬಕ್ಕೆ ಏಡ್ಸ್, ಕುಷ್ಟ ರೋಗ ಬರುತ್ತೆ: ಶಾಸಕ ಯತ್ನಾಳ್
ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ರಾಷ್ಟ್ರದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮತ್ತೋಮ್ಮೆ ಭಾರತದ ಪ್ರಧಾನಮಂತ್ರಿ ಆಗಬೇಕು. ಅವರ ಆಡಳಿತದಿಂದ ಭಾರತದ ಗೌರವ ಹೆಚ್ಚಲಿದೆ ಎಂದರು. ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ಅಜ್ಜುಗೌಡ ಪಾಟೀಲ, ಉಮೇಶಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷೆ ಭಾವನಾ ಪಾಟೀಲ, ಮಹೇಶ ಹಟ್ಟಿ, ಹನುಮಂತ ಹವಾಲ್ದಾರ, ದೇವಣ್ಣ ಕಲಾಲ, ಚಂದ್ರಗೌಡ ಪಾಟೀಲ, ಅನೀಲ ಧರಿಯಣ್ಣವರ, ಎಲ್. ಎಂ. ಪಾಟೀಲ, ಕಿರಣ ಮುಧೋಳೆ, ಬಸವರಾಜ ಪವಾರ, ಸಿದ್ದಪ್ಪ ಯಲಿಗಾರ, ಬಸವರಾಜ ನೆಗಳೂರ, ಪ್ರವೀಣ ವಡ್ಡರ, ಸಂಗನಗೌಡ ಪಾಟೀಲ, ಕಾರ್ತಿಕ ಚೌದರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.