ಕಲ್ಯಾಣ ರಾಜ್ಯ ಸಂಕಲ್ಪ ಸಾಕಾರಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Sep 19, 2023, 4:00 AM IST

ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಹೀಗೆ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ‘ಕಲ್ಯಾಣ ರಾಜ್ಯ’ ಸಂಕಲ್ಪ ಸಾಕಾರಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. 


ಕಲಬುರಗಿ (ಸೆ.19): ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಹೀಗೆ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ‘ಕಲ್ಯಾಣ ರಾಜ್ಯ’ ಸಂಕಲ್ಪ ಸಾಕಾರಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ (ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ)ಗೆ ಈ ಬಾರಿಯ ಬಜೆಟ್‌ನಲ್ಲಿ ದಾಖಲೆಯ 5,000 ಕೋಟಿ ರು. ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಲಬುರಗಿ ನಗರದ ಡಿಎಆರ್‌ ಪೊಲೀಸ್ ಪೆರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ಮಾಡಿದ ನಂತರ ಪೊಲೀಸ್‌ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಕೇಂದ್ರಗಳ ನಿರ್ಮಾಣದ ಮಾದರಿಯನ್ನು ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್ ಅನ್ವಯ ನಿಗದಿಪಡಿಸಲು ಕೆಕೆಆರ್‌ಡಿಬಿ ಮತ್ತು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಆರೋಗ್ಯ ಸೇವೆ ಮತ್ತಷ್ಟು ಉತ್ತಮಗೊಳ್ಳುವ ವಿಶ್ವಾಸ ಹೊಂದಿರುವೆ ಎಂದರು.

Tap to resize

Latest Videos

ಹಣೆಗೆ ತಿಲಕ ಹಾಕಿಸಿಕೊಳ್ಳಲು ಸಿದ್ದರಾಮಯ್ಯ ನಕಾರ: ಹೊಸ ವಿವಾದದಲ್ಲಿ ಸಿಎಂ!

ಕಲಬುರಗಿಯಲ್ಲಿ ನೈಸ್ ಅಕಾಡೆಮಿ, ನಾಗಾವಿ ಸೆಂಟರ್ ಫಾರ್ ಎಕ್ಸಲೆನ್ಸ್‌ ಫಾರ್ ಕೆರಿಯರ್‌ ಡೆವಲಪ್‌ಮೆಂಟ್‌ ಸಂಸ್ಥೆ ಮುಂದಿನ ಆರ್ಥಿಕ ವರ್ಷದಿಂದ ಆರಂಭವಾಗಲಿದೆ. ಕೆಕೆಆರ್‌ಡಿಬಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸಂಸ್ಥೆಗೆ ಪ್ರತಿ ವರ್ಷ 10 ಕೋಟಿ ರು. ನೀಡುವ ಮೂಲಕ ಪ್ರತಿ ವರ್ಷ ಸುಮಾರು 2,000 ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ರಾಜ್ಯ, ರಾಷ್ಟ್ರದಲ್ಲಿ ಪ್ರಮುಖ ಹುದ್ದೆಯಲ್ಲಿ ಈ ಭಾಗದ ಜನ ಉದ್ಯೋಗ ಪಡೆಯಲು ಸಹಾಯವಾಗಲಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಘೋಷಿಸಿರುವ ಅನುದಾನ ಸಮರ್ಪಕ ಬಳಕೆಗೆ ಶಾಸಕ ಡಾ.ಅಜಯ್ ಸಿಂಗ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ರಚಿಸಲಾಗಿದೆ. ಡಾ.ಅಜಯ್ ಸಿಂಗ್ ಅವರು ಈಗಾಗಲೇ ಮಂಡಳಿಯ ಪ್ರಥಮ ಸಭೆ ನಡೆಸಿ ಪ್ರಸಕ್ತ ಸಾಲಿಗೆ 3,000 ಕೋಟಿ ರು. ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶೇ.25ರಷ್ಟು ಅನುದಾನ ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಈ ಭಾಗದಲ್ಲಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಲಿದೆ ಎಂದರು.

ನಾನು ನಾನೇ, ದೇವರಾಜ ಅರಸು ಆಗಲು ಅಸಾಧ್ಯ: ಸಿಎಂ ಸಿದ್ದರಾಮಯ್ಯ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕೆಕೆಆರ್‌ಡಿಬಿ ಮಂಡಳಿಯು ‘ಅಕ್ಷರ ಆವಿಷ್ಕಾರ’ ಯೋಜನೆ ರೂಪಿಸಿದೆ. ಇದರ ಭಾಗವಾಗಿ ಪ್ರದೇಶದಲ್ಲಿ ಖಾಲಿ ಇರುವ 2,618 ಶಿಕ್ಷಕರ ಹುದ್ದೆಗಳ ಭರ್ತಿಗೆ ಈಗಾಗಲೇ ಮಂಜೂರಾತಿ ನೀಡಿ 18.34 ಕೋಟಿ ರು. ಅನುದಾನ ನೀಡಿದೆ. ಇದು ಈ ಸರ್ಕಾರ ಈ ಪ್ರದೇಶದಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ನೀಡುತ್ತಿರುವ ಆದ್ಯತೆಗೆ ಸಾಕ್ಷಿ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಬಿ.ಆರ್.ಪಾಟೀಲ, ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ ಇತರರು ಇದ್ದರು.

click me!