ಕೋಲಾರದಲ್ಲಿ ಸ್ಪರ್ಧಿಸಬೇಡಿ ಎಂದು ಹೈಕಮಾಂಡ್ ನನಗೆ ಹೇಳಿಲ್ಲ, ಸ್ಪರ್ಧಿಸುವುದಿಲ್ಲ ಎಂದು ನಾನೂ ಹೇಳಿಲ್ಲ. ಆದರೆ, ಆ ಕ್ಷೇತ್ರದಲ್ಲಿ ನಿಮ್ಮನ್ನು ಕಟ್ಟಿಹಾಕಲು ಪ್ರಯತ್ನ ನಡೆಯುತ್ತಿದೆ.
ಬೆಂಗಳೂರು (ಮಾ.22): ‘ಕೋಲಾರದಲ್ಲಿ ಸ್ಪರ್ಧಿಸಬೇಡಿ ಎಂದು ಹೈಕಮಾಂಡ್ ನನಗೆ ಹೇಳಿಲ್ಲ, ಸ್ಪರ್ಧಿಸುವುದಿಲ್ಲ ಎಂದು ನಾನೂ ಹೇಳಿಲ್ಲ. ಆದರೆ, ಆ ಕ್ಷೇತ್ರದಲ್ಲಿ ನಿಮ್ಮನ್ನು ಕಟ್ಟಿಹಾಕಲು ಪ್ರಯತ್ನ ನಡೆಯುತ್ತಿದೆ. ನೀವು ರಾಜ್ಯಾದ್ಯಂತ ಚುನಾವಣಾ ಪ್ರಚಾರ ನಡೆಸಬೇಕಿರುವುದರಿಂದ ಕ್ಷೇತ್ರದ ಕಡೆ ಗಮನ ಕೊಡಲಾಗುವುದಿಲ್ಲ. ಹಾಗಾಗಿ ನೀವು ಒಂದು ಪರ್ಸೆಂಟ್ ಕೂಡ ರಿಸ್ಕ್ ತೆಗೆದುಕೊಳ್ಳಬಾರದು ಎಂದು ಹೈಕಮಾಂಡ್ ಹೇಳಿದೆ. ಹೀಗಾಗಿ ನನ್ನ ಕುಟುಂಬದೊಂದಿಗೆ ಚರ್ಚಿಸಿ, ಒಂದೆರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆ’
ಇದು, ಒಳೇಟಿನ ಕಾರಣದಿಂದ ಕೋಲಾರದಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಬದಲಿಸುತ್ತಾರೆ ಎಂದು ಕೇಳಿಬರುತ್ತಿರುವ ಸುದ್ದಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಮಾತುಗಳಿವು. ನಗರದ ತಮ್ಮ ನಿವಾಸದ ಮುಂದೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಪಟ್ಟು ಹಿಡಿದು ಧರಣಿ ನಡೆಸಿದ ಬೆಂಬಲಿಗರು, ಕಾರ್ಯಕರ್ತರನ್ನು ಸಮಾಧಾನಪಡಿಸುವ ವೇಳೆ ಈ ವಿಚಾರ ಬಹಿರಂಗಪಡಿಸಿದ ಅವರು, ‘ದೆಹಲಿಯಲ್ಲಿ ಕೋಲಾರ ಮತಕ್ಷೇತ್ರದ ಬಗ್ಗೆ ಚರ್ಚೆಯಾಗಿಲ್ಲ. ಹೈಕಮಾಂಡ್ ನನಗೆ ನೀವು ಚುನಾವಣಾ ಪ್ರಚಾರಕ್ಕಾಗಿ ಇಡೀ ರಾಜ್ಯಾದ್ಯಂತ ಓಡಾಡಬೇಕಾಗುತ್ತದೆ.
ಸಿದ್ದು ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಬಾರುಕೋಲಲ್ಲಿ ಹೊಡೆದುಕೊಂಡು ಧರಣಿ!
ಹಾಗಾಗಿ ಕೋಲಾರಕ್ಕೆ ಸಮಯ ಕೊಡಲು ಆಗೋದಿಲ್ಲ. ಅಲ್ಲದೆ, ಕೋಲಾರದಲ್ಲಿ ನಿಮ್ಮನ್ನು ಕಟ್ಟಿಹಾಕಲು ಕೂಡ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಒಂದು ಪರ್ಸೆಂಟ್ ಕೂಡ ರಿಸ್ಕ್ ತೆಗೆದುಕೊಳ್ಳಬಾರದು ಎಂದು ಹೇಳಿದೆ. ಅದಕ್ಕೆ ನಾನು ಕೋಲಾರ ಸ್ಪರ್ಧೆ ವಿಚಾರವನ್ನು ಪೆಂಡಿಂಗ್‌ನಲ್ಲಿಡಿ ಎಂದು ಹೇಳಿದ್ದೇನೆ’ ಎಂದರು. ‘ಅಷ್ಟು ಬಿಟ್ಟು ದೆಹಲಿಯಲ್ಲಿ ಕೋಲಾರದ ಬಗ್ಗೆ ಇನ್ಯಾವುದೇ ಚರ್ಚೆ ಆಗಿಲ್ಲ. ಕೋಲಾರದಿಂದ ಸ್ಪರ್ಧೆ ಬೇಡ ಎಂದು ರಾಹುಲ್ ಗಾಂಧಿಯಾಗಲಿ, ಮಲ್ಲಿಕಾರ್ಜುನ ಖರ್ಗೆ ಅವರಾಗಲಿ ಯಾರೂ ಹೇಳಿಲ್ಲ. ನಾನೂ ಸ್ಪರ್ಧಿಸುವುದಿಲ್ಲ ಎಂದಿಲ್ಲ. ಅದನ್ನು ನಿಮ್ಮ ತೀರ್ಮಾನಕ್ಕೆ ಬಿಡುತ್ತೇವೆ ಎಂದು ದೆಹಲಿ ನಾಯಕರು ಹೇಳಿದ್ದಾರೆ. ನಾನು ಪಾಸಿಟಿವ್ ಆಗಿಯೇ ಇದ್ದೇನೆ. ನನ್ನ ಮಗ ಹಾಗೂ ಕುಟುಂಬದೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ’ ಎಂದು ಹೇಳಿದರು.
‘ನನ್ನ ಬೆಂಬಲಿಗರು, ಸ್ನೇಹಿತರು, ಪಕ್ಷದ ಕಾರ್ಯಕರ್ತರು ಹೇಳಿದ ಮೇಲೆ ಕೋಲಾರದಿಂದ ಸ್ಪರ್ಧೆಯ ತೀರ್ಮಾನ ಮಾಡಿದ್ದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೆ.ಎಸ್.ಮುನಿಯಪ್ಪ ಸೇರಿದಂತೆ ಹಲವರೊಂದಿಗೆ ಚರ್ಚಿಸಿದ್ದೆ. ಜಿಲ್ಲೆಯ ದೇವಾಲಯಗಳು, ಚರ್ಚ್, ಮಸೀದಿ, ಮಂದಿರಗಳಿಗೆ ಭೇಟಿ ನೀಡಿದ್ದೆ. ನಾನು ಮಾನಸಿಕವಾಗಿ ರೆಡಿಯಾಗಿದ್ದೆ, ಆದರೆ, ಈಗ ಡೆವಲಪ್‌ಮೆಂಟ್ ಆಗಿದೆ. ನಾನು ನನ್ನ ಕುಟುಂಬದ ಜತೆ ಚರ್ಚೆ ಮಾಡುತ್ತೇನೆ. ನನ್ನ ಮಗ ಈಗ ಇಲ್ಲಿ ಇಲ್ಲ. ಮೈಸೂರಿಗೆ ಹೋಗ್ತಾ ಇದ್ದೀನಿ. ರಾತ್ರಿ ನನ್ನ ಪತ್ನಿ ಮತ್ತು ಪುತ್ರನ ಜೊತೆ ಚರ್ಚೆ ಮಾಡಿ ತಿಳಿಸುತ್ತೇನೆ. ಇದನ್ನು ರಮೇಶ್ ಕುಮಾರ್ ಅವರಿಗೂ ತಿಳಿಸಿದ್ದೇನೆ’ ಎಂದರು.
ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ: ಮನದಾಸೆ ವ್ಯಕ್ತಪಡಿಸಿದ ಬೊಮ್ಮಾಯಿ
‘ನಾನು ಸೋಲುತ್ತೇನೆ ಎಂಬ ಭಯ ನನಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇರುತ್ತದೆ. ಅದಕ್ಕೆ ಎಂದೂ ಭಯಪಟ್ಟವನು ನಾನಲ್ಲ. ಜನ ಆಶೀರ್ವಾದ ಮಾಡಿದ್ರೆ ಸೋಲಿಸಲು ಯಾವನಿಗೂ ಆಗಲ್ಲ. ಮತಗಳೇನು ಅವರ ಜೇಬಿನಲ್ಲಿ ಇರುವುದಿಲ್ಲ. ವಿಪಕ್ಷಗಳ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತಿಲ್ಲ. ಅನೇಕ ಚುನಾವಣೆಗಳನ್ನು ಸೋಲು ಕಂಡಿದ್ದೇನೆ, ಗೆಲುವು ಕಂಡಿದ್ದೇನೆ’ ಎಂದರು.