
ಧಾರವಾಡ (ಫೆ.8) : ಯಾರಿಗೂ ಅಧಿಕಾರ ಶಾಶ್ವತವಲ್ಲ. ಈ ಸತ್ಯ ಅರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕುರಿತಾಗಿ ಮಾತನಾಡಬೇಕಿತ್ತು. ಅಷ್ಟಕ್ಕೂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬ್ರಾಹ್ಮಣ ಸಮುದಾಯದ ವಿರುದ್ಧವಲ್ಲ. ಅದು ಬಿಜೆಪಿ ಅದರಲ್ಲೂ ಪ್ರಹ್ಲಾದ ಜೋಶಿ ಕುರಿತಾದ ರಾಜಕೀಯ ಹೇಳಿಕೆ ಎಂದು ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಉದ್ದೇಶ ಪೂರ್ವಕ ಮಾತನಾಡಿಲ್ಲ. ಜೋಶಿ ಜೆಡಿಎಸ್ ಪಂಚರತ್ನ ಯಾತ್ರೆಯ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ ಕಾರಣ ಪ್ರತಿಕ್ರಿಯಿಸಿದ್ದಾರೆ. ನಾಲ್ಕು ಬಾರಿ ಸಂಸದರು ಆಗಿರುವ ಜೋಶಿ ಸಹ ಮಾತನಾಡುವಾಗ ಎಚ್ಚರ ವಹಿಸಲಿ. ಮತ್ತೊಬ್ಬರನ್ನು ಹಿಯಾಳಿಸುವ, ಅವಹೇಳನ ಮಾಡುವುದು ತಪ್ಪು. ಅಧಿಕಾರದ ಮದದಲ್ಲಿ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡಿದ್ದು ಜೋಶಿ ಅವರು ಸ್ವಯಂ ಅವನತಿಯನ್ನು ಆಹ್ವಾನ ಮಾಡಿಕೊಂಡಂತಾಗಿದೆ ಎಂದು ಕಿಡಿಕಾರಿದರು.
ಬ್ರಾಹ್ಮಣರು ಮುಖ್ಯಮಂತ್ರಿಯಾದರೆ ತಪ್ಪೇನು?: ಸುಭುದೇಂದ್ರತೀರ್ಥ ಶ್ರೀ ಪ್ರಶ್ನೆ
ಕುಮಾರಸ್ವಾಮಿಗೆ ಯಾವುದೇ ಸಮಾಜವನ್ನು ಹಿಯಾಳಿಸಿ ಮಾತನಾಡುವ ಪ್ರವೃತ್ತಿ ಇಲ್ಲ. ದೇವೇಗೌಡ ಕುಟುಂಬ ಬಗ್ಗೆ ಮಾತನಾಡುವುದನ್ನು ಜೋಶಿ ನಿಲ್ಲಿಸಲಿ. ಅವರಿಗೆ ತಾಕತ್ತಿದ್ದರೆ ಕುಟುಂಬಸ್ಥರು, ಅಪ್ಪ ಮಕ್ಕಳಿಗೆ ಟಿಕೆಟ್ ನೀಡದೆ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಲಿ ಎಂದು ಜೋಶಿಗೆ ಹುಣಸಿಮರದ ಸವಾಲು ಹಾಕಿದರು.
ಮತ ಬೇಕೆಂದಾಗ ಮಾತ್ರ ಪ್ರಹ್ಲಾದ ಜೋಶಿ ಹಿಂದು ಎನ್ನುತ್ತಾರೆ. ಬೇಡ ಜಂಗಮರು, ಲಿಂಗಾಯತರು, ಕುರುಬರು, ಮರಾಠರು ಮೀಸಲಾತಿ ಕೇಳಿದಾಗ ಜೋಶಿ ಸ್ಪಂದಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಟ್ಟಿಬೆಳೆಸಿದವರ ಮೇಲೆ ಪ್ರಹ್ಲಾದ ಜೋಶಿ ಸಿಬಿಐ ತನಿಖೆ ಮಾಡಿಸುತ್ತಿದ್ದಾರೆ. ಇವರಿಗೆ ಬೇರೆ ಇಲಾಖೆಗಳಲ್ಲಿನ ಅವ್ಯವಹಾರ ಕಾಣುತ್ತಿಲ್ಲವೇ? ಕೆಐಎಡಿಬಿಯಲ್ಲಿ . 80 ಕೋಟಿ ಹಗರಣವಾಗಿದೆ. ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿರುವ ಕುಡಿಯುವ ನೀರಿನ ಅವ್ಯವಹಾರವನ್ನು ಜೋಶಿ ಸಿಬಿಐಗೆ ನೀಡಲಿ ಎಂದು ಸವಾಲು ಹಾಕಿದರು.
ಬಡಮಕ್ಕಳ ಬಿಎಂಎಸ್ ಟ್ರಸ್ಟ್ ಖಾಸಗೀಕರಣ ಮಾಡಿದ ಅಶ್ವತ್ಥನಾರಾಯಣ: ಕುಮಾರಸ್ವಾಮಿ ಆರೋಪ
ಸುದ್ದಿಗೋಷ್ಠಿಯಲ್ಲಿ ಚಿದಂಬರ ನಾಡಗೌಡ, ಬಸವರಾಜ ಭಜಂತ್ರಿ, ಮಂಜುನಾಥ ಹಗೇದಾರ, ಶಾಂತವೀರ ಬೆಟಗೇರಿ, ನಾಗರಾಜ ಗುಡದರಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.