ಸ್ವರೂಪ್ ಮಾತ್ರ ಟಿಕೆಟ್ ನೀಡಬಾರದು ಎಂದು ಹಟ, ಕಾಂಗ್ರೆಸ್‌ನಿಂದ ಎಚ್.ಕೆ.ಮಹೇಶ್ ಸೆಳೆಯಲು ಯತ್ನ.
ಬೆಂಗಳೂರು(ಏ.01): ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಾಸನ ಕ್ಷೇತ್ರವೇ ದಳಪತಿಗಳಿಗೆ ಭಾರೀ ತಲೆನೋವಾಗಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣ ಹೊಸ ರಾಜಕೀಯ ಪಟ್ಟು ಹಾಕಿದ್ದಾರೆ. ಪತ್ನಿ ಭವಾನಿ ಮತ್ತು ಪ್ರಬಲ ಟಿಕೆಟ್ ಆಕಾಂಕ್ಷಿ ಸ್ವರೂಪ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೇವಣ್ಣ ಅವರು ಕಾಂಗ್ರೆಸ್‌ನ ಎಚ್.ಕೆ.ಮಹೇಶ್ ಅವರನ್ನು ಪಕ್ಷಕ್ಕೆ ಸೆಳೆದು ಕಣಕ್ಕಿಳಿಸುವ ಬಗ್ಗೆ ತಂತ್ರ ರೂಪಿಸುತ್ತಿದ್ದಾರೆ. ತನ್ಮೂಲಕ ತಾವು ಹೇಳಿದವರಿಗೇ ಹಾಸನ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಹಾಸನ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಸ್ವರೂಪ್‌ಗೆ ಟಿಕೆಟ್ ಕೊಡಬಾರದು ಎಂಬುದು ರೇವಣ್ಣ ಕುಟುಂಬದ ಹಟವಾಗಿದೆ. ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತ್ರ ಸ್ವರೂಪ್ ಅವರನ್ನೇ ಕಣಕ್ಕಿಳಿಸಬೇಕು ಎಂಬ ಸ್ಪಷ್ಟಅಭಿಪ್ರಾಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಹೇಶ್ ಅವರನ್ನು ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರ ಬಳಿ ಕರೆದುಕೊಯ್ದು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಹಾಸನ ಫೈಟ್‌ಗೆ ಬಿಗ್ ಟ್ವಿಸ್ಟ್: ಸ್ವರೂಪ್ ಯಾರು? ಗೊತ್ತಿಲ್ಲಪ್ಪ ಎಂದ ರೇವಣ್ಣ
2013, 2018ರ ವಿಧಾನಸಭೆ ಚುನಾವಣೆಯಲ್ಲಿ ಮಹೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಪತ್ನಿಗೆ ಟಿಕೆಟ್ ನೀಡದಿದ್ದರೆ ಸ್ವರೂಪ್ ಬದಲು ಮಹೇಶ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ತಮ್ಮ ನಿಲವಿನಲ್ಲಿ ಬದಲಾವಣೆಯಿಲ್ಲ ಎಂಬ ಮಾತನ್ನು ಪದೇ ಪದೇ ಪುನರುಚ್ಚರಿಸುತ್ತಿರುವ ಕುಮಾರಸ್ವಾಮಿ ಅವರು ಸ್ವರೂಪ್ ಅವರಿಗೇ ಟಿಕೆಟ್ ನೀಡುತ್ತಾರೆಯೋ ಅಥವಾ ರೇವಣ್ಣ ಅವರ ಹೊಸ ಪಟ್ಟಿಗೆ ಮಣಿಯುತ್ತಾರೆಯೋ ಎಂಬುದನ್ನು ಕಾದು ನೋಡಬೇಕಿದೆ.
ನಾನಿನ್ನೂ ಸತ್ತಿಲ್ಲ, ಹಾಸನ ಬಗ್ಗೆ ನನಗೆ ಎಲ್ಲ ಗೊತ್ತಿದೆ: ಎಚ್‌ಡಿಕೆಗೆ ರೇವಣ್ಣ ಟಾಂಗ್?
ಹಾಸನ ಕಗ್ಗಂಟು
- ಹಾಸನದಲ್ಲಿ ಸ್ಪರ್ಧೆಗೆ ರೇವಣ್ಣ ಪತ್ನಿ ಭವಾನಿ, ಟಿಕೆಟ್ ಆಕಾಂಕ್ಷಿ ಸ್ವರೂಪ್ ನಡುವೆ ಪೈಪೋಟಿ
- ಭವಾನಿಗೇ ಟಿಕೆಟ್ ಕೊಡಿಸಬೇಕು, ಸ್ವರೂಪ್‌ಗೆ ಟಿಕೆಟ್ ಸಿಗಬಾರದು ಎಂದು ರೇವಣ್ಣ ಪಟ್ಟು
- ಸ್ವರೂಪ್ ಅವರನ್ನೇ ಕಣಕ್ಕಿಳಿಸುತ್ತೇನೆ ಎಂದು ಎಚ್‌ಡಿಕೆ ಹಟ: ಅಭ್ಯರ್ಥಿ ಆಯ್ಕೆ ತಲೆನೋವು
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.