
ಬೆಂಗಳೂರು(ಏ.01): ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಎರಡನೇ ಹಂತ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದು, ಚುನಾವಣಾ ಸ್ಕ್ರೀನಿಂಗ್ ಕಮಿಟಿಯು ಹರಸಾಹಸ ನಡೆಸಿ ಬಾಕಿಯಿರುವ 100 ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿದೆ. ಆದರೆ ಇನ್ನುಳಿದ 40 ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಕಷ್ಟಕರವಾಗಿ ಪರಿಣಮಿಸಿದ್ದು, ಅದಕ್ಕಾಗಿ ಪ್ಯಾನೆಲ್ (ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೆಸರು) ಸಿದ್ಧಪಡಿಸಿದೆ.
ಈ ಹಿನ್ನೆಲೆಯಲ್ಲಿ ಏ.3 (ಸೋಮವಾರ) ಅಥವಾ ಏ.4 (ಮಂಗಳವಾರ) ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿಯೇ ಕಾಂಗ್ರೆಸ್ ಎರಡನೇ ಪಟ್ಟಿಯ ಅಭ್ಯರ್ಥಿಗಳು ಅಖೈರುಗೊಳ್ಳಲಿದ್ದಾರೆ.
ದಿವಾಳಿಯಾದ ಕಾಂಗ್ರೆಸ್ ಮುಂದೇ ಹರಾಜಿಗೆ ಬರಲಿದೆ: ಸಚಿವ ಶ್ರೀರಾಮುಲು
ವಿಧಾನಸಭೆ ಚುನಾವಣೆಗೆ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಲೀಸಾಗಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷವು ಎರಡನೇ ಪಟ್ಟಿಯಲ್ಲಿ ಪ್ರಕಟಿಸಬೇಕಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆ ನಾಲ್ಕು ಗಂಟೆಯವರೆಗೂ ಸಭೆ ನಡೆಸಿತು.
ಸುದೀರ್ಘ ಸಭೆ ನಡೆಸಿದರೂ ಒಂದೇ ಸಂಭಾವ್ಯ ಅಭ್ಯರ್ಥಿಯ ಹೆಸರನ್ನು 60 ಕ್ಷೇತ್ರಗಳಿಗೆ ಮಾತ್ರ ಅಂತಿಮಗೊಳಿಸಿದೆ. ಒಂದು ಕ್ಷೇತ್ರವನ್ನು ರೈತ ಸಂಘಕ್ಕೆ (ಸ್ವರಾಜ್ ಇಂಡಿಯಾ) ಬಿಟ್ಟುಕೊಡಲು ತೀರ್ಮಾನಿಸಲಾಗಿದೆ. ಉಳಿದವುಗಳ ಪೈಕಿ 34 ಕ್ಷೇತ್ರಗಳಿಗೆ ಎರಡು ಹೆಸರು ಹಾಗೂ ಐದು ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಹೆಸರಿನ ಪ್ಯಾನೆಲ್ ಸಿದ್ಧಪಡಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಲು ತೀರ್ಮಾನಿಸಿದೆ.
ಮೂಲಗಳ ಪ್ರಕಾರ ಪುಲಿಕೇಶಿನಗರ ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಶಾಸಕರ ಕ್ಷೇತ್ರಗಳಿಗೆ ಯಾವುದೇ ಬದಲಾವಣೆ ಮಾಡದಿರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೊಳಲ್ಕೆರೆಗೆ ಹಿರಿಯ ದಲಿತ ನಾಯಕ ಆಂಜನೇಯ ಅವರ ಒಂಟಿ ಹೆಸರನ್ನು ಶಿಫಾರಸು ಮಾಡಲಾಗಿದೆ. ಇನ್ನು ತೀವ್ರ ಪೈಪೋಟಿಯಿರುವ ತೀರ್ಥಹಳ್ಳಿ (ಕಿಮ್ಮನೆ ರತ್ನಾಕರ ಹಾಗೂ ಮಂಜುನಾಥ ಗೌಡ) ಕ್ಷೇತ್ರಕ್ಕೆ ಉಭಯ ಆಕಾಂಕ್ಷಿಗಳ ನಡುವೆ ಹೊಂದಾಣಿಕೆ ಮೂಡಿಸುವ ಹೊಣೆಗಾರಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
21ನೇ ಶತಮಾನದ ಕೌರವರು ಹೇಳಿಕೆ, ಅನರ್ಹ ಸಂಸದ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಕೇಸ್!
2 ದಿನದಿಂದ ಸ್ಕ್ರೀನಿಂಗ್ ಸಮಿತಿಯ ಕಸರತ್ತು
- 224 ಕ್ಷೇತ್ರಗಳ ಪೈಕಿ ಈಗಾಗಲೇ ಸುಲಭವಾಗಿ 124 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಬಿಡುಗಡೆ ಮಾಡಿರುವ ಕಾಂಗ್ರೆಸ್
- ಉಳಿದ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಕಸರತ್ತು
- 2ನೇ ಪಟ್ಟಿತಯಾರಿಗೆ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆ 4 ಗಂಟೆಯವರೆಗೂ ಸತತ ಸಭೆ
- ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಾಯಕರ ಚರ್ಚೆ
- 60 ಕ್ಷೇತ್ರಕ್ಕೆ ಮಾತ್ರ ಒಂದೇ ಹೆಸರು ಫೈನಲ್. ಇನ್ನುಳಿದ 40 ಕ್ಷೇತ್ರಗಳು ಕಗ್ಗಂಟು
- 40 ಕ್ಷೇತ್ರಗಳಿಗೆ 2 ಅಥವಾ ಹೆಚ್ಚು ಅಭ್ಯರ್ಥಿಗಳ ಪ್ಯಾನೆಲ್ ಸಿದ್ಧಪಡಿಸಿದ ಕಾಂಗ್ರೆಸ್
- ಈ ಪಟ್ಟಿ ಹೈಕಮಾಂಡ್‌ಗೆ ರವಾನೆ: ಖರ್ಗೆ ನೇತೃತ್ವದ ಸಭೆಯಲ್ಲಿ ಅಂತಿಮ ಆಯ್ಕೆ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.