ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ 100 ಅಭ್ಯರ್ಥಿಗಳ ಪಟ್ಟಿಸಿದ್ಧವಿದೆ. ಆದರೆ, ಜೆಡಿಎಸ್ ಪಟ್ಟಿ ಬಿಡುಗಡೆಗೆ ನಮ್ಮ ಪಕ್ಷದ ಜ್ಯೋತಿಷಿ ಎಚ್.ಡಿ. ರೇವಣ್ಣ ತಕರಾರು ತೆಗೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರು/ ನಂಜನಗೂಡು (ನ.19): ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ 100 ಅಭ್ಯರ್ಥಿಗಳ ಪಟ್ಟಿಸಿದ್ಧವಿದೆ. ಆದರೆ, ಜೆಡಿಎಸ್ ಪಟ್ಟಿಬಿಡುಗಡೆಗೆ ನಮ್ಮ ಪಕ್ಷದ ಜ್ಯೋತಿಷಿ ಎಚ್.ಡಿ. ರೇವಣ್ಣ ತಕರಾರು ತೆಗೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಇಂದು ಸಮಯ ಪ್ರಸಕ್ತವಾಗಿಲ್ಲ ಎಂದು ತಕರಾರು ತೆಗೆದಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಚಾಮುಂಡೇಶ್ವರಿಗೆ ಪೂಜೆ: ಜೆಡಿಎಸ್ ಪಂಚರತ್ನ ಯಾತ್ರೆಗೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಗೆ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರು, ಪಂಚರತ್ನ ಯಾತ್ರೆ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಿದರು. 2018ರಲ್ಲಿ ಚಾಮುಂಡಿಬೆಟ್ಟದಿಂದಲೇ ಕುಮಾರ ಪರ್ವಕ್ಕೆ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವೇಳೆ ಶಾಸಕರಾದ ಜಿ.ಟಿ. ದೇವೇಗೌಡ, ಬಂಡಪ್ಪ ಕಾಶಂಪುರ್, ಎಂ. ಅಶ್ವಿನ್‌ಕುಮಾರ್, ಸಿ.ಎಸ್. ಪುಟ್ಟರಾಜು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಮೊದಲಾದವರು ಇದ್ದರು.
JDS Pancharatna Rathayatra: ಮೈತ್ರಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ
ಶಾಸಕರೇ ಕಣ್ಣೀರಿಟ್ಟರೇ ಅವರಿಗೆ ಮತ ಕೊಟ್ಟಜನರ ಗತಿ ಏನು?: ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟಜನರ ಗತಿ ಏನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಬಸ್ ನಿಲ್ದಾಣ ವಿವಾದ ಕುರಿತು ಮೈಸೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನು ನಾನು ನೋಡಿದ್ದೇನೆ. ಕಣ್ಣೀರು ಹಾಕಿಸಿರುವುದನ್ನು ಗಮನಿಸಿದ್ದೇನೆ. ಇವರಿಗೆ ಮತ ನೀಡಿದ ಜನರ ಕತೆ ಏನು ಎಂದು ಕಿಡಿಕಾರಿದರು. ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ. ಜನರಿಗೆ ನೆರಳು ಕೊಡಿ. ಕೆಡಹುವ ಕೆಲಸ ಮಾಡಬೇಡಿ ಎಂದು ಅವರು ಸಲಹೆ ನೀಡಿದರು.
ಜನರಿಗೆ ಗುಂಬಜ್, ಗೋಪುರ ಮುಖ್ಯವಲ್ಲ: ಜನರಿಗೆ ಗುಂಬಜ್, ಗೋಪುರ ಮುಖ್ಯವಲ್ಲ. ನೆರಳು ಮುಖ್ಯ. ಅದನ್ನೇ ಹೊಡೆದು ಹಾಕ್ತೀವಿ ಅನ್ನೋದು ಮುರ್ಖರ ಹೇಳಿಕೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು. ಜನರಿಗೆ ಬೇಕಾಗಿರುವುದು ಆಕಾರದ ಗೋಪುಗಳಲ್ಲ. ಬದಲಾಗಿ ನೆರಳು ಯಾವ ರೀತಿ ಕೊಟ್ಟರು. ಯಾರು ಕೊಟ್ಟರು ಎಂಬುದು ಮುಖ್ಯ. ಅವರಿಗೆ ಕಟ್ಟಿಅಭ್ಯಾಸ ಇಲ್ಲ. ಕೆಡವಿ ಅಭ್ಯಾಸವಾಗಿದೆ. ಸಂಸದರ ಹೇಳಿಕೆ ಅವರ ಪಕ್ಷದ ಶಾಸಕರಿಗೆ ನೋವು ಉಂಟಾದರೆ ಮತ ಕೊಟ್ಟಜನರ ಪರಿಸ್ಥಿತಿ ಏನಾಗಬೇಡ ಎಂದು ಆಕ್ರೋಶ ಹೊರ ಹಾಕಿದರು.
ಕೋಲಾರದಲ್ಲಿ ಸಿದ್ದುಗಿರುವ ಸಮಸ್ಯೆ ಶ್ರೀನಿವಾಸ್‌ಗೌಡ: ಎಚ್‌ಡಿಕೆ
ಭಗವಂತ ಯಾರ ಹಣೆ ಮೇಲೆ ಏನು ಬರೆದಿದ್ದಾನೋ ಗೊತ್ತಿಲ್ಲ. ಬಹಳ ಜನರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಜನರೇ ಈ ಬಾರಿ ಜೆಡಿಎಸ್ ಬೆಂಬಲಿಸುತ್ತಿದ್ದಾರೆ. ಪಂಚರತ್ನ ಯೋಜನೆ ಬಗ್ಗೆ ಜನರು ಚರ್ಚೆ ಆರಂಭಿಸಿದ್ದಾರೆ. ಅದರ ಆಧಾರದ ಮೇಲೆ ಜನ ನಮ್ಮನ್ನು ಬಯಸುತ್ತಿದ್ದಾರೆ ಎಂದರು. ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನೌಕರರ 7ನೇ ವೇತನ ರಚನೆ ಮಾಡುವುದಾಗಿ ಘೋಷಣೆ ಮಾಡುವುದರ ಜೊತೆಗೆ ಇನ್ನೊಂದು ಗಂಟೆ ಕೆಲಸ ಮಾಡಿ ಎಂದಿದ್ದಾರೆ. ಇರುವ ಸಮಯದಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ರೆ ಅದಕ್ಕಿಂತ ಸಾಧನೆ ಬೇಕಾ ಎಂದು ಪ್ರಶ್ನಿಸಿದರು.