ಡಿಸೆಂಬರ್‌ ಅಂತ್ಯದೊಳಗೆ 150 ಅಭ್ಯರ್ಥಿಗಳ ಅಂತಿಮ: ಸಲೀಂ ಆಹ್ಮದ್

By Kannadaprabha NewsFirst Published Nov 19, 2022, 10:41 AM IST
Highlights
  • ಡಿಸೆಂಬರ್‌ ಅಂತ್ಯದೊಳಗೆ 150 ಅಭ್ಯರ್ಥಿಗಳ ಅಂತಿಮ
  • ಇದೀಗ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ

ಹುಬ್ಬಳ್ಳಿ (ನ.19) : ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಡಿಸೆಂಬರ್‌ ಅಂತ್ಯದೊಳಗೆ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಇದೀಗ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿದೆ. ಈವರೆಗೆ ರಾಜ್ಯದ 224 ಕ್ಷೇತ್ರಗಳಿಗೆ 1000 ಜನ ಅರ್ಜಿ ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯ ಕ್ಷೇತ್ರಗಳಿಂದಲೇ 60 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸುವವರು ಇನ್ನೂ ಜಾಸ್ತಿ ಇರುವುದರಿಂದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದರು.

 

ಮಾನ ಮರ್ಯಾದೆ ಇದ್ರೆ 40% ಕಮಿಶನ್‌ ತನಿಖೆ ಮಾಡಿ: ಸಲೀಂ

150 ಸ್ಥಾನಗಳ ಅಭ್ಯರ್ಥಿಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಅಂತಿಮಗೊಳಿಸಲಾಗುವುದು. ಒಂದು ವೇಳೆ ಪಟ್ಟಿಬಿಡುಗಡೆ ಮಾಡದಿದ್ದರೂ ಅಭ್ಯರ್ಥಿಗಳಿಗೆ ಚುನಾವಣೆ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗುವುದು ಎಂದ ಅವರು, ಪಕ್ಷವೂ ರಾಜ್ಯಾದ್ಯಂತ ಮೂರು ಬಾರಿ ಸಮೀಕ್ಷೆ ನಡೆಸಿದೆ. ಬರೋಬ್ಬರಿ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಂದಿದೆ. ಆದರೆ ನಮ್ಮ ಟಾರ್ಗೆಟ್‌ ಇರುವುದು 150 ಸ್ಥಾನ. ಹೀಗಾಗಿ ಮುಂದಿನ 3 ತಿಂಗಳು ನಿರಂತರ ಪ್ರವಾಸ ಕೈಗೊಳ್ಳಲಾಗುವುದು. ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ನುಡಿದರು.

ಬಣ ರಾಜಕೀಯ ಇಲ್ಲ:

ಕಾಂಗ್ರೆಸ್‌ನಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಯಾವುದೇ ಗೊಂದಲಗಳೂ ಇಲ್ಲ. ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಕೆಲವೊಮ್ಮೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತವೆ ಅಷ್ಟೇ. ಆದರೆ ಯಾರಿಗೆ ಟಿಕೆಟ್‌ ಸಿಕ್ಕರೂ ಎಲ್ಲರೂ ಸೇರಿಕೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ ಅಭಿಮಾನಿಗಳು ತಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಅದು ಅಭಿಮಾನಿಗಳ ವೈಯಕ್ತಿಕ ಅಭಿಪ್ರಾಯವಷ್ಟೇ. ಈ ಕುರಿತು ಹೈಕಮಾಂಡ್‌, ಪಕ್ಷದ ಶಾಸಕಾಂಗ ಸಭೆಯೂ ಅಂತಿಮಗೊಳಿಸಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ನಿರ್ಧರಿಸಲಾಗುವುದು. ನಮ್ಮಲ್ಲಿ ಯಾವುದೇ ಬಣವಿಲ್ಲ ಎಂದು ಪುನರುಚ್ಛಿಸಿದರು.

ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಕಾಂಗ್ರೆಸ್‌ ಪಕ್ಷದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವುದಕ್ಕೆ ಉದಾಹರಣೆ. ಆ ಮೂಲಕ, ತಮ್ಮದು ಕುಟುಂಬದ ಪಕ್ಷವಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್‌ ನೀಡಿದೆ. ಆದರೆ, ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅಣತಿ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಆ ಪಕ್ಷದ ಟೀಕೆಗೆ ನಮ್ಮ ಪಕ್ಷದ ಉತ್ತರ ಖರ್ಗೆ ಅವರ ಆಯ್ಕೆಯಾಗಿದೆ ಎಂದರು.

ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದು ಪಕ್ಷವನ್ನು ಮತ್ತಷ್ಟುಬಲಿಷ್ಠವನ್ನಾಗಿಸಿದೆ. ಬಿಜೆಪಿ ಜನರ ಮನಸು ಒಡೆಯುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ಜನರ ಮನಸನ್ನು ಜೋಡಿಸುವ ಕೆಲಸ ಮಾಡುತ್ತಿದೆ ಎಂದರು.

ಕ್ಷಮೆಯಾತ್ರೆ ನಡೆಸಲಿ:

ಬಿಜೆಪಿಯೂ ಜನಸಂಕಲ್ಪ ಯಾತ್ರೆ ನಡೆಸುತ್ತಿದೆ. ಇದರ ಬದಲಿಗೆ 3 ವರ್ಷದಿಂದ ಬರೀ ದುರಾಡಳಿತ ನಡೆಸಿದ್ದಕ್ಕೆ, ಶೇ.40ರಷ್ಟುಕಮಿಷನ್‌ ಪಡೆಯುತ್ತಿರುವುದಕ್ಕಾಗಿ ಕ್ಷಮೆ ಯಾತ್ರೆ ನಡೆಸಬೇಕು. 3 ವರ್ಷದಿಂದ ಒಂದೇ ಒಂದು ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿಲ್ಲ. ಈಗ ಸಂಕಲ್ಪ ಯಾತ್ರೆ ಮಾಡುತ್ತಿದೆ. ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದರು.

ಬಿಜೆಪಿಯನ್ನು ಚುನಾವಣೆಯಲ್ಲಿ ಕಿತ್ತೆಸೆಯಬೇಕು ಎಂದು ಜನರೇ ಈಗಾಗಲೇ ಸಂಕಲ್ಪ ಮಾಡಿಯಾಗಿದೆ ಎಂದ ಅವರು, ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ, ಗುತ್ತಿಗೆದಾರರು ಪತ್ರ ಬರೆದು ಕಮಿಷನ್‌ ಬಗ್ಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು,.

ಭ್ರಷ್ಟಾಚಾರದಲ್ಲೇ ಮುಳುಗಿರುವ ಬಿಜೆಪಿ ಕ್ಷಮಾ ಯಾತ್ರೆ ಮಾಡಬೇಕಿತ್ತು: ಸಲೀಂ ಅಹ್ಮದ್

ಸಂತೋಷ ಪಾಟೀಲ ಆತ್ಮಹತ್ಯೆ ಕೇಸ್‌ನಲ್ಲಿ ಸಿಬಿಐ ಈಶ್ವರಪ್ಪಗೆ ಬಿ ರಿಪೋರ್ಚ್‌ ಹಾಕಿದೆ. ಇಷ್ಟುಬೇಗನೆ ತನಿಖೆ ಮುಗಿಸಿ ಬಿ ರಿಪೋರ್ಚ್‌ ಹಾಕಿದ್ದು ಇದೇ ಮೊದಲು. ಇತಿಹಾಸದಲ್ಲಿ ಇಷ್ಟುಬೇಗನೆ ಯಾವುದೇ ಪ್ರಕರಣ ತನಿಖೆ ಪೂರ್ಣವಾಗಿದ್ದೇ ಇಲ್ಲ. ಅಧಿಕಾರ ದುರುಪಯೋಗಪಡಿಸಿ ಬಿ ರಿಪೋರ್ಚ್‌ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಮಾಜಿ ಶಾಸಕರಾದ ಎನ್‌.ಎಚ್‌.ಕೋನರಡ್ಡಿ, ಮಲ್ಲಿಕಾರ್ಜುನ ಅಕ್ಕಿ, ರಾಜಶೇಖರ ಮೆಣಸಿನಕಾಯಿ, ದೀಪಕ ಚಿಂಚೋರೆ, ಪಿ.ಎಚ್‌.ನೀರಲಕೇರಿ, ಶರಣಪ್ಪ ಕೊಟಗಿ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.

click me!