ದೇವೇಗೌಡ್ರು ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎನ್ನುವ ಕಾಂಗ್ರೆಸ್ ನಾಯಕ ಕೆ.ಎನ್ ರಾಜಣ್ಣ ಹೇಳಿಕೆಗೆ ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.
ತುಮಕೂರು, (ಜುಲೈ.01): ದೇವೇಗೌಡ್ರು ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎನ್ನುವ ಕಾಂಗ್ರೆಸ್ ನಾಯಕ ಕೆ.ಎನ್ ರಾಜಣ್ಣ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ರಾಜಣ್ಣಗೆ ಏಕವಚನದಲ್ಲೇ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅದು ಅವರ ಸಂಸ್ಕೃತಿ ತೋರುತ್ತದೆ. ಅವತ್ತು ಅವರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ದೇವೇಗೌಡರು ಪ್ರಚಾರಕ್ಕೆ ಬರಲೇಬೇಕು ಅಂತಾ ಹಠ ಹಿಡಿದಿದ್ರು. ಅವತ್ತು ದೇವೇಗೌಡರು, ಪ್ರಚಾರಕ್ಕೆ ಹೋಗಿದ್ದಕ್ಕೆ ಅವರು ಗೆದ್ದಿದ್ದು. ಇವತ್ತು ದೇವೇಗೌಡರ ಬಗ್ಗೆ ಈ ರೀತಿಯ ಮಾತಾಡ್ತೀರಾ ಎಂದು ರಾಜಣ್ಣ ವಿರುದ್ಧ ಕಿಡಿಕಾರಿದರು.
ತುಮಕೂರಿನಲ್ಲಿ ದೇವೇಗೌಡರು ಅಷ್ಟು ಜ್ವರ ಇದ್ದಾಗ ಬಂದು ನಿನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ದರು. ಆದರೆ ದೇವೇಗೌಡರು ತುಮಕೂರಿನಲ್ಲಿ ಸೋಲಲು ನೀನೂ ಕಾರಣನಾದ್ಯಲ್ಲಪ್ಪಾ. ದೇವೇಗೌಡರ ಆರೋಗ್ಯದಲ್ಲಿ ಆದ ಏರುಪೇರಿಗೆ ನಿಮ್ಮಂತಹಾ ಕೃತಘ್ನರು ಕಾರಣ. ಇನ್ನೂ ಎರಡು ತಿಂಗಳು ಕಾದು ನೋಡು. ಯಾರ ಸಹಾಯವಿಲ್ಲದೇ ನಡೆಯುತ್ತಾರೆ. ನೀನು ಕ್ಷಮೆ ಕೇಳು ಅಂತಾ ನಾನು ಹೇಳಲ್ಲ. ಹುಷಾರ್ ಅಂತಾ ಹೇಳಲು ಬಯಸ್ತೀನಿ. ಮಧುಗಿರಿಯಲ್ಲಿ ಬಂದು ಕಾರ್ಯಕರ್ತರಿಂದ ಉತ್ತರ ಕೊಡಿಸುತ್ತೇನೆ. ಪ್ರಾಯಶ್ಚಿತ್ತ ಅನಿಭವಿಸಬೇಕಾಗುತ್ತದೆ. ಹುಷಾರ್ ಎಂದು ಗರಂ ಆಗಿ ರಾಜಣ್ಣಗೆ ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ನಡೆ ಆಧರಿಸಿ ಕಾಂಗ್ರೆಸ್ ಹೆಜ್ಜೆ: ಕುಮಾರಸ್ವಾಮಿ
ಹೌದು ಅವರಿಗೆ ಇಬ್ಬರು ಹೆಗಲಿಗೆ ಹೆಗಲು ಕೊಡ್ತಾರೆ. ನಾವು ಪ್ರತಿನಿತ್ಯ ದೇವರಿಗೆ ಪೂಜೆ ಸಲ್ಲಿಸಿ, ಸಂಜೆ ಉತ್ಸವ ಮೂರ್ತಿಗೆ ಹೆಗಲು ಕೊಡಲ್ವಾ. ಆ ಮಾತು ಕೇಳಿ ನನ್ನ ಮನಸ್ಸಿಗೂ ನೋವಾಗಿದೆ. ನಾನು ಹಲವು ಸಾವಿಗೆ ಹೋದಾಗಲೂ ಕಣ್ಣೀರು ಹಾಕಿದ್ದೇನೆ. ಆ ಮಾತಿನ ದುರಹಂಕಾರ. ಮೇಲೆ ಒಬ್ಬ ದೇವರು ಇದ್ದಾನೆ. ದೇವೇಗೌಡರ ಬದುಕು ಆಯಸ್ಸು, ಭಗವಂತ ನಿರ್ಧಾರ ಮಾಡಿದ್ದು. ನನಗೆ ವಿಶ್ವಾಸ ಇದೆ, ದೇವೇಗೌಡರು ಶತಾಯುಷಿಗಳಾಗುತ್ತಾರೆ ಎಂದು ಟಾಂಗ್ ನೀಡಿದರು.
ರಾಜಣ್ಣ ಹೇಳಿದ್ದೇನು?
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ವಿವಾದಕ್ಕೆ ಸಿಲುಕಿದೆ.
ಮಧುಗಿರಿ ತಾಲ್ಲೂಕಿನ ಕಾವಣದಾಲ ಕಾರ್ಯಕ್ರಮದಲ್ಲಿ ಗುರುವಾರ ಸಾರ್ವಜನಿಕರೊಂದಿಗೆ ಮಾತನಾಡುವಾಗ ರಾಜಣ್ಣ ನಾಲಗೆ ಹರಿ ಬಿಟ್ಟಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜಣ್ಣ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ರಾಜಣ್ಣ ಹೇಳಿಕೆಯ ವಿಡಿಯೊವನ್ನು ನೆಟ್ಟಿಗರು ಹಂಚಿಕೊಂಡಿದ್ದು, ಕಿಡಿಕಾರಿದ್ದಾರೆ. ಇಂತಹ ಹೇಳಿಕೆ ನೀಡುವುದು ಸರಿಯೆ ಎಂದು ಪ್ರಶ್ನಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದರು.
‘ಇದು ನನ್ನ ಕಡೆಯ ಚುನಾವಣೆಯಾಗಿದ್ದು, ಪ್ರತಿ ಮನೆ ಬಾಗಿಲಿಗೆ ಬಂದು ಮತ ಕೇಳುತ್ತೇನೆ. ನಾನು ಶಾಸಕನಾದರೆ ನೀವು ಶಾಸಕರಾದಂತೆ. ಸರ್ಕಾರದ ಸೇವೆ ಒದಗಿಸದ ಎಲ್ಲ ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು. ಶೋಕಿಗೆ ರಾಜಕಾರಣ ಮಾಡಬೇಡಿ’ ಎಂದು ರಾಜಣ್ಣ ಹೇಳಿದ್ದರು.