ಮಂಡ್ಯದಲ್ಲಿ ಕುಮಾರಸ್ವಾಮಿ ವರ್ಸಸ್‌ ಸುಮಲತಾ ಸ್ಟಾರ್‌ವಾರ್‌ ಆಗುತ್ತಾ?

Published : Apr 19, 2023, 01:00 AM IST
ಮಂಡ್ಯದಲ್ಲಿ ಕುಮಾರಸ್ವಾಮಿ ವರ್ಸಸ್‌ ಸುಮಲತಾ ಸ್ಟಾರ್‌ವಾರ್‌ ಆಗುತ್ತಾ?

ಸಾರಾಂಶ

ಚನ್ನಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರದ ಹುರಿಯಾಳಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏ.20ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಮಂಡ್ಯದಲ್ಲಿ ಬ್ಯಾಂಕ್‌ ಖಾತೆ ತೆರೆದಿದ್ದಾರೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿದೆ. 

ಮಂಡ್ಯ(ಏ.19): ಲೋಕಸಭಾ ಚುನಾವಣೆ ಬಳಿಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಷ್‌ ನಡುವೆ ಮತ್ತೊಂದು ಸುತ್ತಿನ ರೋಚಕ ಹಣಾಹಣಿಗೆ ಮಂಡ್ಯ ಸಾಕ್ಷಿಯಾಗಲಿದೆ ಎಂಬ ಚರ್ಚೆ ಗರಿಗೆದರಿದೆ.

ಚನ್ನಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರದ ಹುರಿಯಾಳಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏ.20ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಮಂಡ್ಯದಲ್ಲಿ ಬ್ಯಾಂಕ್‌ ಖಾತೆ ತೆರೆದಿದ್ದಾರೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿದೆ. ಇದಕ್ಕೆ ಇಂಬು ನೀಡುವಂತೆ, ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಿಸಲಾಗಿರುವ ಹಾಲಿ ಶಾಸಕ ಎಂ.ಶ್ರೀನಿವಾಸ್‌ ಅವರಿಗೆ ಈವರೆಗೂ ಜೆಡಿಎಸ್‌ ಬಿ ಫಾರಂ ಸಿಕ್ಕಿಲ್ಲ.

ಮಂಡ್ಯದಲ್ಲಿ ಹೆಚ್‌ಡಿಕೆ ಸೋಲಿಸಲು ಮೆಗಾ ಪ್ಲಾನ್: ಸುಮಲತಾ-ರಮ್ಯಾ ಕಣಕ್ಕೆ, ದಳಪತಿಗಳಿಗೆ ವಿರೋಧಿಗಳ ಶಾಕ್!

ಇದರ ಬೆನ್ನಲ್ಲೇ, ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸಿದರೆ ಅವರಿಗೆ ಟಕ್ಕರ್‌ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ. ಸಂಸದೆ ಸುಮಲತಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದು, ಇದಕ್ಕಾಗಿ ಈಗಾಗಲೇ ಸುಮಲತಾ ಅವರು ಅಗತ್ಯ ಸಿದ್ಧತೆ ಪ್ರಾರಂಭಿಸಿದ್ದಾರೆ. ಚುನಾವಣಾ ವೆಚ್ಚ ನಿರ್ವಹಣೆಗೆ ಬ್ಯಾಂಕ್‌ ಖಾತೆ ಕೂಡ ತೆರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಏತನ್ಮಧ್ಯೆ, ತಾವು ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಸುಮಲತಾ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಸಾಮಾನ್ಯ ಕಾರ್ಯಕರ್ತ ಅಥವಾ ರೈತ ಮಹಿಳೆಯನ್ನು ಕಣಕ್ಕಿಳಿಸಿ ಗೆಲ್ಲಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಚನ್ನಪಟ್ಟಣದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು, ಅದರ ಮುಖ್ಯ ಕಚೇರಿ ಮಂಡ್ಯದಲ್ಲಿದೆ ಅಷ್ಟೆಎಂದು ಸ್ಪಷ್ಟಪಡಿಸಿದ್ದಾರೆ.

ಎಚ್‌ಡಿಕೆ ಮಂಡ್ಯ ಸ್ಪರ್ಧೆ ಸಂಚಲನ:

2018ರಲ್ಲಿ ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ ಏಳೂ ಸ್ಥಾನವನ್ನು ಜೆಡಿಎಸ್‌ ಗೆದ್ದಿತ್ತು. ಮತ್ತೊಮ್ಮೆ ಅದೇ ರೀತಿಯ ಗೆಲುವನ್ನು ಪುನರಾವರ್ತಿಸುವ ಉದ್ದೇಶದಿಂದ ಕುಮಾರಸ್ವಾಮಿ ಈ ಬಾರಿ ಮಂಡ್ಯದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಚುನಾವಣೆ ವೆಚ್ಚ ನಿರ್ವಹಣೆಗಾಗಿ ಮಂಡ್ಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದ್ದಾರೆ, ಅಲ್ಲದೆ ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರಿಗೆ ರೂಂ ಕೂಡ ಕಾದಿರಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಸೋಮವಾರ ಮದ್ದೂರಿನಲ್ಲಿ ಮಾತನಾಡಿದ್ದ ಸುಮಲತಾ, ಮಂಡ್ಯದಿಂದ ಕುಮಾರಸ್ವಾಮಿಯವರು ಸ್ಪರ್ಧಿಸುವ ಬಗ್ಗೆ ವದಂತಿ ಹರಡಿದೆ. ಒಂದು ವೇಳೆ, ಅವರು ಮಂಡ್ಯದಿಂದ ಸ್ಪರ್ಧಿಸುವುದು ನಿಜವಾಗಿದ್ದಲ್ಲಿ ಅವರ ಎದುರು ಸ್ಪರ್ಧೆಗೆ ನಾನು ಸಿದ್ಧ. ವಿಧಾನಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಅಖಾಡಕ್ಕಿಳಿಯುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದರೆ ನನ್ನ ಸ್ಪರ್ಧೆ ಖಂಡಿತವಾಗಿಯೂ ಇರಲಿದೆ ಎಂದಿದ್ದರು. ಈ ಹೇಳಿಕೆಯ ಬೆನ್ನ ಹಿಂದೆಯೇ, ಮಂಡ್ಯದ ಅಶೋಕನಗರದ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಸುಮಲತಾ ಹೆಸರಿನಲ್ಲೊಂದು ಖಾತೆ ತೆರೆಯಲಾಗಿದೆ. ಅಲ್ಲದೆ, ನಾಮಪತ್ರಕ್ಕೆ ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ ಎಂದು ಸುಮಲತಾ ಆಪ್ತ ಬೇಲೂರು ಸೋಮಶೇಖರ್‌ ತಿಳಿಸಿದ್ದಾರೆ.

ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಿದರೆ ಭಯವಿಲ್ಲ: ಚಲುವರಾಯಸ್ವಾಮಿ

ಮಂಡ್ಯ ಸ್ಪರ್ಧಿಸುವುದಾಗಿ ನಾನು ಎಲ್ಲೂ ಹೇಳಿಲ್ಲ

ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆಂದು ನಾನೆಲ್ಲೂ ಹೇಳಿಲ್ಲ. 2 ಕ್ಷೇತ್ರದಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇಲ್ಲ. ನನ್ನ ವಿರುದ್ಧ ಸ್ಪರ್ಧಿಸುವುದಾಗಿ ಸುಮಲತಾ ಸವಾಲು ಹಾಕಿದ್ದಾರೆ. ಅವರಷ್ಟುದೊಡ್ಡ ವ್ಯಕ್ತಿ ನಾನಲ್ಲ. ಅವರಿಗಿರುವ ವರ್ಚಸ್ಸು ನನಗಿಲ್ಲ ಅಂತ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ