ಜೆಡಿಎಸ್‌ಗೆ ಹಾಸನ ಕಗ್ಗಂಟು: ಮನೇಲಿ ನಿರ್ಧಾರ ಮಾಡ್ತೀವಿ, ಬೀದೀಲಿ ನಿಂತು ಉತ್ತರಿಸಲ್ಲ: ಕುಮಾರಸ್ವಾಮಿ

By Kannadaprabha News  |  First Published Jan 29, 2023, 6:20 AM IST

ದೇವೇಗೌಡರ ಬದುಕು ಮುಖ್ಯವಾಗಿದ್ದು, ಪಕ್ಷಕ್ಕೆ 120 ಸೀಟ್‌ಗಳನ್ನು ತರಲು ನಾನು ಹೊರಟಿದ್ದೇನೆ. ಅವರಿಗೆ ಕಾಣಿಕೆ ನೀಡಲು ಪಂಚರತ್ನ ಯಾತ್ರೆ ಮಾಡುತ್ತಿದ್ದು, ಸಾಯುವ ಮುನ್ನ ಅವರ ಪಕ್ಷ ಉಳಿದಿದೆ ಎನ್ನುವುದನ್ನು ಸಾಬೀತು ಮಾಡಲು ಹೊರಟಿದ್ದೇನೆ ಎಂದ ಎಚ್‌ಡಿಕೆ 


ಹಾಸನ(ಜ.29): ಹಾಸನದ ಬಗ್ಗೆ ರೇವಣ್ಣಗೆ ಗೊತ್ತಿರುವಷ್ಟುಯಾರಿಗೂ ಗೊತ್ತಿಲ್ಲ. ಹಿಂದಿನಿಂದಲೂ ಜಿಲ್ಲೆಯ ಅಭ್ಯರ್ಥಿಗಳ ಬಗ್ಗೆ ದೇವೇಗೌಡರು ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹೀಗಾಗಿ, ಹಾಸನ ಕ್ಷೇತ್ರದ ಅಭ್ಯರ್ಥಿ ಬಗ್ಗೆ ದೇವೇಗೌಡರ ತೀರ್ಮಾನವೇ ಅಂತಿಮ. ಇದು ಕುಮಾರಸ್ವಾಮಿಗೆ ಮನವರಿಕೆ ಮಾಡುವ ವಿಷಯವಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಖಡಕ್ಕಾಗಿ ನುಡಿದಿದ್ದಾರೆ.

ಹಾಸನ ಕ್ಷೇತ್ರದ ಟಿಕೆಟ್‌ ವಿಷಯವಾಗಿ ಜೆಡಿಎಸ್‌ನಲ್ಲಿ ಜಟಾಪಟಿ ಮುಂದುವರಿದಿದ್ದು, ‘ನಾನೇ ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ’ ಎಂದು ಭವಾನಿ ರೇವಣ್ಣ ಘೋಷಿಸಿಕೊಂಡಿದ್ದಕ್ಕೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಸನ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದಿದ್ದರು. ಇದಕ್ಕೆ ಶನಿವಾರ ತಿರುಗೇಟು ನೀಡಿರುವ ಸೂರಜ್‌, ಅವರು ಪಕ್ಷದ ಹಿರಿಯ ರಾಜಕಾರಣಿ. ನಾವು ಅವರ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ. ಅವರ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ. ಹಾಸನದ ಬಗ್ಗೆ ರೇವಣ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಇಲ್ಲಿಯದನ್ನು ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ.

Tap to resize

Latest Videos

ಮಗಳನ್ನು ಕೊಂದ ಅಳಿಯನಿಗೆ ಶಿಕ್ಷೆ ಆಗಬೇಕು: ಕುಮಾರಸ್ವಾಮಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

ಅರಕಲಗೂಡು ತಾಲೂಕಿನ ಹರದೂರು ಗ್ರಾಮದಲ್ಲಿ ಮಾತನಾಡಿ, ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. 2018ರಲ್ಲಿ ಹಾಸನ ತಾಲೂಕನ್ನು ಕಳೆದುಕೊಂಡಿದ್ದೇವೆ. 2023ರಲ್ಲಿ ಮರು ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ. ಈ ಕ್ಷೇತ್ರಕ್ಕೆ ಭವಾನಿ ರೇವಣ್ಣನವರು ಅನಿವಾರ್ಯ ಅಲ್ಲದಿದ್ದರೂ ಅವರೇ ಸೂಕ್ತ. ಇತ್ತೀಚಿನ ಲೆಕ್ಕಾಚಾರವನ್ನು ಗಮನಿಸಿದರೆ ಭವಾನಿ ಅಭ್ಯರ್ಥಿಯಾದರೆ ಗೆಲುವು ಖಚಿತ. 15 ವರ್ಷದಿಂದ ಸತತವಾಗಿ ಆರರಿಂದ ಏಳು ಶಾಸಕರನ್ನು ಆಯ್ಕೆ ಮಾಡುವಲ್ಲಿ ರೇವಣ್ಣ ಅವರ ಸ್ವಂತ ಪ್ರಯತ್ನವಿದೆ. ಅವರನ್ನು ಬಿಟ್ಟರೆ ಇನ್ಯಾರಿಗೂ ಈ ಜಿಲ್ಲೆಯಲ್ಲಿ ಯಾವುದೇ ಪರ, ವಿರುದ್ಧ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿಲ್ಲ. ಭವಾನಿ ಅವರು ಅಭ್ಯರ್ಥಿ ಆಗಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ ಎಂದರು.

ನಾನು ರಾಜಕಾರಣದಲ್ಲಿ ಕಿರಿಯನಾಗಿರಬಹುದು. ಒಂದು ವರ್ಷದಿಂದ ಎಂಎಲ್‌ಸಿ ಆಗಿದ್ದು ಹಾಸನ ತಾಲೂಕನ್ನು ನೊಡಲ್‌ ಕ್ಷೇತ್ರವಾಗಿ ತೆಗೆದುಕೊಂಡು ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಭಾಗವಹಿಸಿ, ಇಲ್ಲಿನ ಜನರ ನಾಡಿಮಿಡಿತವನ್ನು ಅರಿತಿದ್ದೇನೆ. ನಮ್ಮ ತಾಯಿ ಅಭ್ಯರ್ಥಿ ಆಗಬೇಕು ಎನ್ನುವ ಉದ್ದೇಶ ನಮ್ಮದಲ್ಲ. ಬದಲಾಗಿ ನಾವು ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡಬೇಕಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆ ಬಗ್ಗೆ ರೇವಣ್ಣ ಹಾಗೂ ದೇವೇಗೌಡರು ಕುಳಿತುಕೊಂಡು ತೀರ್ಮಾನ ಕೈಗೊಳ್ಳುತ್ತಾರೆ. ದೇವೇಗೌಡರ ತೀರ್ಮಾನವೇ ಅಂತಿಮವಾಗಿದೆ. ಸ್ವರೂಪ್‌ ಅವರಿಗೆ ಪಕ್ಷದ ಅಭ್ಯರ್ಥಿ ಆಗಬೇಕು ಅನ್ನುವ ಆಕಾಂಕ್ಷೆ ಇದೆ. ಅವರು ಅಂತೆಯೇ ಬೇಡಿಕೆ ಇಟ್ಟಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಅವರು ಈ ರೀತಿ ಹೇಳಿಕೆಗಳನ್ನು ಕೊಡುತ್ತಿರಬಹುದು. ಆದರೆ ರೇವಣ್ಣ, ಕುಮಾರಣ್ಣ ದೇವೇಗೌಡರ ಸಮ್ಮುಖದಲ್ಲಿ ಎಲ್ಲಾ ವಿಷಯ ಒಪ್ಪಿಸಿ ಅಂತಿಮವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಹಿಂದಿನಿಂದಲೂ ನಮ್ಮ ತಾತ ಅವರೇ ಈ ಜಿಲ್ಲೆಯ ಪ್ರತಿಯೊಬ್ಬ ಅಭ್ಯರ್ಥಿಯ ಸ್ಪರ್ಧೆಯ ವಿಚಾರವಾಗಿ ಅಂತಿಮ ತೀರ್ಮಾನ ಕೈಗೊಳ್ಳುತ್ತಿದ್ದು, ಈ ಹಿಂದೆ ಭವಾನಿ ರೇವಣ್ಣ ಅವರು ಎಂಎಲ್‌ಸಿ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಅಂತ ಹೇಳಿದ್ದರು. ಆದರೆ, ದೇವೇಗೌಡರು ತೀರ್ಮಾನ ಮಾಡಿದ್ದರಿಂದ ನಾನು ಅಭ್ಯರ್ಥಿ ಆಗಬೇಕಾಯಿತು. ಅದೇ ರೀತಿ ಸಂಸದರ ಚುನಾವಣೆಯಲ್ಲಿ ದೇವೇಗೌಡರೇ ಸ್ಪರ್ಧೆ ಮಾಡಬೇಕಿತ್ತು. ಅವರೆ ಸ್ವ ಇಚ್ಛೆಯಿಂದ ಪ್ರಜ್ವಲ್‌ ರೇವಣ್ಣ ಅವರಿಗೆ ದಾರಿ ಮಾಡಿಕೊಟ್ಟರು. ಅದೇ ರೀತಿ ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಯಾವ ತಾಲೂಕಿನಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಮುಂದುವರಿದ ಟೆಂಪಲ್‌ ರನ್‌:

ಈ ಮಧ್ಯೆ, ಭವಾನಿ ರೇವಣ್ಣ ಅವರು ಕ್ಷೇತ್ರ ಸಂಚಾರ ಮುಂದುವರಿಸಿದ್ದಾರೆ. ಎಚ್‌.ಡಿ.ರೇವಣ್ಣ ಜೊತೆಗೂಡಿ ಹರದೂರು ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಈಡುಗಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿದರು. ಪ್ರಜ್ವಲ್‌ ರೇವಣ್ಣ, ಶಾಸಕ ಎ.ಟಿ. ರಾಮಸ್ವಾಮಿ ಉಪಸ್ಥಿತರಿದ್ದರು. ಇದೇ ವೇಳೆ, ಮಾಜಿ ಸಚಿವ ಎ.ಮಂಜು ಕೂಡ ಆಗಮಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಜೊತೆಯಾಗಿ ದೇವಾಲಯದ ಉತ್ಸವದಲ್ಲಿ ಭಾಗಿಯಾದರು.

ಭವಾನಿಗೆ ಟಿಕೆಟ್‌ಗೆ ಆಗ್ರಹಿಸಿ ಪ್ರತಿಭಟನೆ:

ಇದೇ ವೇಳೆ, ಹಾಸನ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಭವಾನಿ ರೇವಣ್ಣನವರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿ ಶನಿವಾರ ನಗರದ ಎಸ್ಪಿ ಕಚೇರಿ ಪಕ್ಕದಲ್ಲಿರುವ ಸಂಸದರ ನಿವಾಸದ ಆವರಣದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಭವಾನಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಪ್ರಜ್ವಲ್‌ ಮಾತನಾಡಿ, ಈ ಕ್ಷೇತ್ರದಲ್ಲಿ ಹೆಣ್ಣುಮಕ್ಕಳೆಲ್ಲಾ ಭವಾನಿ ರೇವಣ್ಣನವರಿಗೆ ಟಿಕೆಟ್‌ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ದೇವೇಗೌಡರಿಂದ ಈ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ ಎಂದರು.

ಇನ್ನೊಂದು ಕಡೆ, ದಿವಂಗತ ಎಚ್‌.ಎಸ್‌.ಪ್ರಕಾಶ್‌ ಅವರ ಪುತ್ರ ಎಚ್‌.ಪಿ. ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವಂತೆ ಅವರ ಬೆಂಬಲಿಗರು ಸ್ವರೂಪ್‌ ಮನೆ ಮುಂದೆ ಜಮಾಯಿಸಿ ಮೌನ ಪ್ರತಿಭಟನೆ ನಡೆಸಿದರು.

ಮನೇಲಿ ನಿರ್ಧಾರ ಮಾಡ್ತೀವಿ, ಬೀದೀಲಿ ನಿಂತು ಉತ್ತರಿಸಲ್ಲ: ಕುಮಾರಸ್ವಾಮಿ

ರಾಯಚೂರು:  ಕಲಿಯುಗದ ರಾಜಕಾರಣದಲ್ಲಿಯೂ ನೂರಾರು ಜನ ಶಕುನಿಗಳು ಇದ್ದಾರೆ. ಯಾವುದೋ ಶಕುನಿಯ ಮಾತು ಕೇಳಿ ಅವರು ಮಾತನಾಡಿರಬಹುದು. ಯಾರೋ ಕುಮಾರಸ್ವಾಮಿಯ ಕಾಲು ಹಿಡಿದು ಎಳೆಯಲು ಯತ್ನಿಸುತ್ತಿದ್ದಾರೆ. ಆದರೆ, ಅದರಲ್ಲಿ ಅವರು ಯಶಸ್ಸು ಸಾಧಿಸುವುದಿಲ್ಲ. ಟಿಕೆಟ್‌ ವಿಷಯವಾಗಿ ಯಾರು ನಿರ್ಧಾರ ತೆಗೆದುಕೊಳ್ಳಬೇಕು, ಯಾರು ತೆಗೆದುಕೊಳ್ಳಬಾರದು ಅನ್ನೋದನ್ನು ಮನೆಯಲ್ಲಿ ಕುಳಿತು, ಚರ್ಚಿಸಿ, ತೀರ್ಮಾನ ಮಾಡ್ತೀವಿ. ಬೀದಿಯಲ್ಲಿ ಚರ್ಚೆ ಮಾಡಿ ಇದಕ್ಕೆ ಉತ್ತರ ಕೊಡಲಾಗುವುದಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಷಡ್ಯಂತ್ರ ಬಿಚ್ಚಿಡಬೇಕಾ: ಎಚ್‌.ಡಿ.ಕುಮಾರಸ್ವಾಮಿ

ಸೂರಜ್‌ ರೇವಣ್ಣ ಹೇಳಿಕೆಗೆ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮನೆ ಮಕ್ಕಳು ನಮ್ಮನ್ನು ಪ್ರಶ್ನೆ ಮಾಡುವಂತದ್ದು ದೊಡ್ಡ ವಿಷಯವಲ್ಲ. ಆದರೆ, ಟಿಕೆಟ್‌ ನೀಡುವ ವಿಚಾರದಲ್ಲಿ ದೇವೇಗೌಡರ ಹೆಸರನ್ನು ಮಧ್ಯ ತರಬೇಡಿ. ದೇವೇಗೌಡರು ಟಿಕೆಟ್‌ ಅಂತಿಮ ಮಾಡುವ ಪರಿಸ್ಥಿತಿಯಲ್ಲಿದ್ದಾರೆಯೇ?. ಈ ವಿಚಾರ ಯಾರಿಗೂ ಗೊತ್ತಾಗುವುದಿಲ್ಲ. ನಾವು ಅದನ್ನು ಬಿಟ್ಟು ಕೊಟ್ಟಿಲ್ಲ. ದೇವೇಗೌಡರ ಬದುಕು ಮುಖ್ಯವಾಗಿದ್ದು, ಪಕ್ಷಕ್ಕೆ 120 ಸೀಟ್‌ಗಳನ್ನು ತರಲು ನಾನು ಹೊರಟಿದ್ದೇನೆ. ಅವರಿಗೆ ಕಾಣಿಕೆ ನೀಡಲು ಪಂಚರತ್ನ ಯಾತ್ರೆ ಮಾಡುತ್ತಿದ್ದು, ಸಾಯುವ ಮುನ್ನ ಅವರ ಪಕ್ಷ ಉಳಿದಿದೆ ಎನ್ನುವುದನ್ನು ಸಾಬೀತು ಮಾಡಲು ಹೊರಟಿದ್ದೇನೆ ಎಂದರು.

ಸೂರಜ್‌ ಹೇಳಿರುವುದರಲ್ಲಿ ತಪ್ಪಿಲ್ಲ. ರೇವಣ್ಣ ಹಾಸನ ನೋಡಿಕೊಳ್ಳುತ್ತಿದ್ದಾರೆ. ನಾನು ರಾಜ್ಯವನ್ನು ನೋಡಿಕೊಳ್ಳುತ್ತಿದ್ದೇನೆ. ಹಾಸನದಲ್ಲಿ ಜೆಡಿಎಸ್‌ ವರ್ಸಸ್‌ ರೇವಣ್ಣ ಅಲ್ಲ, ಕುಮಾರಸ್ವಾಮಿ ವರ್ಸಸ್‌ ಬಿಜೆಪಿ. ಹಾಸನದ ಟಿಕೆಟ್‌, ಸ್ವರೂಪ ಪ್ರಜ್ವಲ್‌ಗೆ ಆಗಬಹುದು, ಇಲ್ಲವೇ ಭವಾನಿಗೇ ಆಗಬಹುದು. ಆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

click me!