ಜೆಡಿಎಸ್‌ನಲ್ಲಿದ್ದು ಏಕೆ ಹಾಳಾಗ್ತೀರಾ? ಈಗಲೇ ಕಾಂಗ್ರೆಸ್‌ ಸೇರಿ: ಡಿ.ಕೆ.ಶಿವಕುಮಾರ್‌ ಕರೆ

By Kannadaprabha NewsFirst Published Jan 29, 2023, 3:40 AM IST
Highlights

ಎಚ್‌.ಡಿ. ಕುಮಾರಸ್ವಾಮಿ ಅವರೇ ಜೆಡಿಎಸ್‌ ಪಕ್ಷ ವಿಸರ್ಜನೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಹೀಗಾಗಿ ಈಗಲೇ ಬಂದು ಕಾಂಗ್ರೆಸ್‌ ಪಕ್ಷ ಸೇರಿಕೊಳ್ಳಿ ಎಂದು ಜೆಡಿಎಸ್‌ನವರಿಗೆ ಕರೆ ಕೊಡುತ್ತಿದ್ದೇನೆ. 

ಬೆಂಗಳೂರು (ಜ.29): ‘ಎಚ್‌.ಡಿ. ಕುಮಾರಸ್ವಾಮಿ ಅವರೇ ಜೆಡಿಎಸ್‌ ಪಕ್ಷ ವಿಸರ್ಜನೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಹೀಗಾಗಿ ಈಗಲೇ ಬಂದು ಕಾಂಗ್ರೆಸ್‌ ಪಕ್ಷ ಸೇರಿಕೊಳ್ಳಿ ಎಂದು ಜೆಡಿಎಸ್‌ನವರಿಗೆ ಕರೆ ಕೊಡುತ್ತಿದ್ದೇನೆ. ಅವರೇ ವಿಸರ್ಜನೆ ಮಾಡುತ್ತೇನೆ ಎಂದಾಗ ಕಾರ್ಯಕರ್ತರು ಯಾಕೆ ಹಾಳಾಗಬೇಕು? ಹೀಗಾಗಿ ಬರ್ರಪ್ಪ ನಾನು ಇದ್ದೇನೆ ಎಂದು ಆಹ್ವಾನ ನೀಡಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿರುವ ಶಿವಕುಮಾರ್‌, ‘ಯಾವುದೇ ಒಂದು ರಾಜಕೀಯ ಪಕ್ಷ ಸರಿಯಿಲ್ಲ ಎಂದು ನಾನು ಹೇಳಲ್ಲ. 

ಅವರೇ ವಿಸರ್ಜನೆ ಮಾಡುತ್ತೇನೆ ಎಂದಿರುವುದರಿಂದ ನಮ್ಮ ಪಕ್ಷಕ್ಕೆ ಬನ್ನಿ ಎಂದು ಹೇಳಿದ್ದೇನೆ’ ಎಂದು ಕಾಲೆಳೆದರು. ಜೆಡಿಎಸ್‌ ಬಗ್ಗೆ ಮೃದು ಧೋರಣೆ ತೋರುತ್ತಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೇ ನಾನೇನು ಕುಸ್ತಿ ಆಡ್ಲಾ? ನಾನು ನೀತಿ ಮೇಲೆ ಹೋಗ್ತೀನಿ. ಯಾರ ಮೇಲೂ ವೈಯಕ್ತಿಕ ವಿಚಾರ ಇಟ್ಟುಕೊಂಡು ಮಾತನಾಡಲ್ಲ. ಜೆಡಿಎಸ್‌ನವರು ಮಂಡ್ಯ, ಕನಕಪುರದಲ್ಲಿ ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಜೆಡಿಎಸ್‌ನವರಿಗೆ ನೋಡ್ರಪ್ಪ ಕುಮಾರಣ್ಣ (ಎಚ್‌.ಡಿ.ಕುಮಾರಸ್ವಾಮಿ) ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳ್ತಾ ಇದಾರೆ. 

ಖರ್ಗೆ, ಧರಂರಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಡಿ.ಕೆ.ಶಿವಕುಮಾರ್‌

ಈಗಲೇ ಬಂದು ಕಾಂಗ್ರೆಸ್‌ ಸೇರಿಕೊಳ್ಳಿ ಎಂದು ಹೇಳುತ್ತಿದ್ದೇವೆ. ಇದನ್ನು ನಾನು ಅಲ್ಲಗೆಳೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ನನಗೆ ವಿಸರ್ಜನೆ ಪದ ಗೊತ್ತಿಲ್ಲ. ಜೆಡಿಎಸ್‌ ಸಹ ಒಂದು ರಾಜಕೀಯ ಪಕ್ಷ. ನಾನು ಅವರು ಗೆಲ್ಲುವುದಿಲ್ಲ ಎಂದು ಹೇಳುವುದಿಲ್ಲ. ಆದರೆ, ಕಾರ್ಯಕರ್ತರು ಕಷ್ಟಪಟ್ಟು ಪಕ್ಷ ಉಳಿಸಿಕೊಂಡಿರುತ್ತಾರೆ. ವಿಸರ್ಜನೆ ಮಾಡುತ್ತೇನೆ ಎಂದಾಗ ನಿಮ್ಮ ಜೀವನ ಯಾಕೆ ಹಾಳಾಗಬೇಕು, ಬನ್ನಿ ನಾನು ಇದ್ದೇನೆ ಎಂದು ಕರೆಯುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಷರತ್ತಿಲ್ಲದೆ ಎಚ್‌ಡಿಕೆಗೆ ಅಧಿಕಾರ: ರಾಜ್ಯದಲ್ಲಿ ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವ ಸಲುವಾಗಿ ಎಚ್‌.ಡಿ.ಕುಮಾರಸ್ವಾಮಿಗೆ ಅಧಿಕಾರ ನೀಡುವ ಸಮಯದಲ್ಲಿ ಕಾಂಗ್ರೆಸ್‌ ಯಾವುದೇ ಷರತ್ತಿಲ್ಲದೆ ಅಧಿಕಾರ ನೀಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಕಾಂಗ್ರೆಸ್‌ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮವನ್ನು ರಾಶಿ ಪೂಜೆ ನೆರವೇರಿಸಿ ಮಾತನಾಡಿ, ಅಧಿಕಾರ ನಡೆಸುವ ಸಮಯದಲ್ಲಿ ಯಾವುದೇ ತೊಂದರೆಯನ್ನೂ ಕೊಡಲಿಲ್ಲ, ಮೋಸವನ್ನೂ ಮಾಡಲಿಲ್ಲ. 

ಮಗನನ್ನು ಮಂಡ್ಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಯಾಗಿ ಟಿಕೆಟ್‌ ಕೊಟ್ಟು ಬೆಂಬಲವಾಗಿ ನಿಂತಿದ್ದೆವು. ಅವರಿಂದ ಅಧಿಕಾರ ಉಳಿಸಿಕೊಳ್ಳಲಾಗಲಿಲ್ಲವೆಂದರೆ ನಾವೇನು ಮಾಡೋಣ ಎಂದು ಪ್ರಶ್ನಿಸಿದರು. ದೇವೇಗೌಡರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದು ಕಾಂಗ್ರೆಸ್‌, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೂ ನಾವೇನೇ. ಸರ್ಕಾರ ಉರುಳುವ ಸಮಯದಲ್ಲಿ ವಿದೇಶಕ್ಕೆ ಹೋಗುವಂತೆ ನಾವು ಹೇಳಿದ್ದೆವಾ ಎಂದು ಮತ್ತೊಮ್ಮೆ ಪ್ರಶ್ನಿಸಿದರು.

ದಕ್ಷಿಣ ಭಾರತದ ಪ್ರಥಮ ಫಾರೆನ್ಸಿಕ್‌ ವಿವಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಡಿಗಲ್ಲು

ಕೇಸ್‌ಗಳಿಗೆಲ್ಲಾ ಹೆದರೋಲ್ಲ: ಕಾವೇರಿ ಜಲಾನಯನ ಪ್ರದೇಶದ ರೈತರ ಹಿತ ಕಾಪಾಡಲು ಮೇಕೆದಾಟು ಪಾದಯಾತ್ರೆ ಕೈಗೊಂಡೆವು. ಆ ಸಮಯದಲ್ಲಿ ನನ್ನ ಮತ್ತು ಸಿದ್ದರಾಮಯ್ಯ ಆದಿಯಾಗಿ ಕೊರೋನಾ ನೆಪ ಮುಂದಿಟ್ಟುಕೊಂಡು ಕೇಸ್‌ ಹಾಕಿದರು. ಬಿಜೆಪಿ ವಿರುದ್ಧ ಧ್ವನಿ ಎತ್ತಿದವರಿಗೆ ಇಡಿ, ಸಿಬಿಐನಿಂದ ದಾಳಿ ಮಾಡಿಸಿದರು. ವಿಚಾರಣೆ ಹೆಸರಿನಲ್ಲಿ ನೋಟಿಸ್‌ ಕೊಟ್ಟು ಬೆದರಿಸಿದರು. ಆದರೆ, ಈ ಬೆದರಿಕೆಗಳಿಗೆಲ್ಲಾ ನಾವು ಹೆದರುವವರಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

click me!