* ಹಿಂದೆ ಜೆಡಿಎಸ್ ಮುಗಿಸಲು, ಈಗ ಕಾಂಗ್ರೆಸ್ ಮುಗಿಸಲು ಸಮಾವೇಶ ಮಾಡ್ತಿದ್ದಾರೆ
* ನನ್ನನ್ನು ಕೆಣಕಲು ಬರಬೇಡಿ, ಸೇರಿಗೆ ಸವ್ವಾಸೇರಾಗಲು ನಾನು ಸಿದ್ಧ
* ಸಿದ್ದರಾಮಯ್ಯ ವಿರುದ್ಧ ಮತ್ತೆ ಕಿಡಿಕಾರಿದ ಕುಮಾರಸ್ವಾಮಿ
ರಾಮನಗರ(ಅ.14): ಕಾಂಗ್ರೆಸ್(Congress) ಪಕ್ಷಕ್ಕೆ ಪ್ರತಿಪಕ್ಷ ಸಿದ್ದರಾಮಯ್ಯ ಅವರೇ ಬೆಂಕಿ ಇಡಲಿದ್ದಾರೆ. ಪಕ್ಷ ಮುಗಿಸಲೆಂದೇ ಸಿದ್ದರಾಮಯ್ಯ ಒಬಿಸಿ ಸಮಾವೇಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಆರೋಪಿಸಿದ್ದಾರೆ. ಜತೆಗೆ, ಪದೇ ಪದೆ ನನ್ನನ್ನು ಕೆಣಕಲು ಬರಬೇಡಿ ಎಂದು ಸಿದ್ದರಾಮಯ್ಯ(Siddaramaiah) ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಮುಗಿಸಲು ಸಮಾವೇಶಗಳನ್ನು ಮಾಡಿದಂತೆ ಈಗ ಕಾಂಗ್ರೆಸ್ ಮುಗಿಸಲು ಅದೇ ಕುತಂತ್ರ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು. ಕಳೆದ ಚುನಾವಣೆಯಲ್ಲಿ(Election) ಕಾಂಗ್ರೆಸ್ 130 ರಿಂದ 78 ಸೀಟುಗಳಿಗೆ ಕುಸಿಯಲು ಸಿದ್ದರಾಮಯ್ಯನವರೇ ಕಾರಣ. ಅವರು ವಿಶ್ವಾಸಕ್ಕೆ ಅರ್ಹವಲ್ಲದ ವ್ಯಕ್ತಿ. ಅವರು ನಮ್ಮ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವನ್ನು ಕುತಂತ್ರದಿಂದ ಅವರೇ ಮುಳುಗಿಸುತ್ತಿದ್ದಾರೆ ಎಂದು ಕಿಡಿಕಾರಿದರು.
undefined
ನಾನು ಸಿದ್ದರಾಮಯ್ಯ ಅವರ ನೆರಳು ಅಥವಾ ಹಂಗಿನಲ್ಲಾಗಲಿ ರಾಜಕಾರಣಕ್ಕೆ(Politics) ಬಂದವನಲ್ಲ. ಯಾರು ಎಲ್ಲಿಂದ, ಯಾರಿಂದ ರಾಜಕೀಯಕ್ಕೆ ಬಂದರು ಎಂಬುದನ್ನು ಅವರು ತಿಳಿದುಕೊಳ್ಳಬೇಕು. ರಾಜಕಾರಣ ಬೇಡ ಕರಿಕೋಟು ಹಾಕಿಕೊಂಡು ಹೋಗುತ್ತೇನೆ ಎಂದಿದ್ದವರು ಯಾರು? ನಿಮ್ಮ ರಾಜಕಾರಣ ನಾವು ಅರ್ಥ ಮಾಡಿಕೊಂಡಿದ್ದೇವೆ. ಪದೆ ಪದೇ ಕೆಣಕಬೇಡಿ. ನೀವು ನಮ್ಮ ಸುದ್ದಿಗೆ ಬಂದರೆ ನಾನು ರೆಡಿ, ಸೇರಿಗೆ ಸವ್ವಾ ಸೇರಾಗಲು ನಾನು ಸಿದ್ಧ ಎಂದು ಎಚ್ಚರಿಕೆ ನೀಡಿದರು.
ವಿಪಕ್ಷ ನಾಯಕ ಶಾಡೋ ಸಿಎಂ ಇದ್ದಂತೆ: ಸುಧಾಕರ್
ಬಿಎಸ್ವೈ ಭೇಟಿಯಾಗಿದ್ದರು:
ಬಿ.ಎಸ್. ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಆಗಿದ್ದಾಗ ನಾನು ಒಂದೇ ಬಾರಿ ಬೇಟಿ ಮಾಡಿದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 2009ರ ಉಪ ಚುನಾವಣೆಯಲ್ಲಿ(Byelection) ಕಾಂಗ್ರೆಸ್ನವರನ್ನೇ ಸೋಲಿಸಲು ಯಡಿಯೂರಪ್ಪರಿಂದ ಸಿದ್ದರಾಮಯ್ಯ ದುಡ್ಡು ತರಿಸಿಕೊಂಡಿದ್ದರು. ಅವರು ಕಳುಹಿಸಿದ್ದವರೇ ನನಗೆ ಈ ವಿಷಯ ಹೇಳಿದ್ದಾರೆ. ಅಧಿಕಾರ ಇಲ್ಲದಿದ್ದರು ಬಡವರು ನಮ್ಮ ಮನೆಗೆ ಬರುತ್ತಾರೆ, ನಿಮ್ಮ ಮನೆಗೇನಾದರೂ ಬಡವರು ಬರುತ್ತಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪುಟಗೋಸಿ ಹೇಳಿಕೆಗೆ ಸ್ಪಷ್ಟನೆ-ನಾನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅಗೌರವ ತೋರಿಲ್ಲ. ಶಾಂತವೇರಿ ಗೋಪಾಲಗೌಡರು, ಎಚ್.ಡಿ.ದೇವೇಗೌಡರಂಥವರು(HD Devegowda) ವಿರೋಧ ಪಕ್ಷದ ನಾಯಕರಿದ್ದಾಗ ಆ ಹುದ್ದೆಯ ಘನತೆ ಉಳಿಸಿದ್ದರು. ದೇವೇಗೌಡರಂತೆ ಹೋರಾಟ ಮಾಡಲು ಸಿದ್ದರಾಮಯ್ಯಗೆ ಆಗಲ್ಲ. ಆ ಹುದ್ದೆಯ ಮೌಲ್ಯ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಆ ಅರ್ಥದಲ್ಲಷ್ಟೇ ನಾನು ಹೇಳಿಕೆ ನೀಡಿದ್ದೇನೆ ಅಷ್ಟೆಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಮಜಾ ಮಾಡಲು ಅಮೆರಿಕಕ್ಕೆ ಹೋಗಿಲ್ಲ-ಎಚ್ಡಿಕೆ
ಸಮ್ಮಿಶ್ರ ಸರ್ಕಾರದ(Coalition Government) ಪತನದ ಅವಧಿಯಲ್ಲಿ ನಾನು ಮಜಾ ಮಾಡಲು ಅಮೆರಿಕಕ್ಕೆ(America) ಹೋಗಿರಲಿಲ್ಲ. ಕಾಲಭೈರವೇಶ್ವರ ದೇವಾಲಯದ ಶಂಕು ಸ್ಥಾಪನೆ ಕಾರ್ಯಕ್ಕಾಗಿ ಹೋಗಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಪ್ರಕಾರ ವಿಪಕ್ಷ ಸ್ಥಾನ ಅಂದ್ರೆ ಪುಟಗೋಸಿನಾ?: HDK ವಿರುದ್ಧ ಸಿದ್ದು ಏಕವಚನದಲ್ಲಿ ವಾಗ್ದಾಳಿ
ಸಮ್ಮಿಶ್ರ ಸರ್ಕಾರ ಪತನ ಆಗುವಾಗ ಅಮೆರಿಕದಲ್ಲಿದ್ದ ಕುಮಾರಸ್ವಾಮಿಗೆ ಫೋನ್ ಮಾಡಿ ತಿಳಿಸಿದ್ದೆ ಎಂಬ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರ್ಕಾರ ಪತನ ಆಗುತ್ತಿದೆ ಎಂದು ಕರೆ ಮಾಡಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಅದು ಸುಳ್ಳು. ಹಾಗಿದ್ದರೆ ಅವರು ನನಗೆ ಎಷ್ಟು ಬಾರಿ ಫೋನ್ ಮಾಡಿದ್ದಾರೆ ಎಂಬ ಕಾಲ್ ರೆಕಾರ್ಡ್ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಡಿಸಿಎಂ ಆಗಿದ್ದ ಡಾ.ಪರಮೇಶ್ವರ್ರನ್ನು ಸಂಪರ್ಕಿಸಿ ಮಾತನಾಡಿದಾಗ ಏನೂ ಸಮಸ್ಯೆ ಇಲ್ಲ, ಆರಾಮವಾಗಿ ಬನ್ನಿ ಎಂದಿದ್ದರು. ಆದರೆ, ನಿಮ್ಮ ಕ್ಯಾಂಪಿನಲ್ಲಿ ಬೇರೆಯದ್ದೇ ನಡೆಯುತ್ತಿತ್ತು. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಹುನ್ನಾರ ನಡೆಸಿದ್ದು ನನಗೆ ಮೊದಲೇ ಗೊತ್ತಿತ್ತು. ಧರ್ಮಸ್ಥಳಕ್ಕೆ ಹೋಗಿ ಸಿದ್ಧವನದಲ್ಲಿ ಕುಳಿತು ಹಿಂಬಾಲಕರೊಂದಿಗೆ ಚರ್ಚಿಸಿ ಸಿದ್ಧಸೂತ್ರ ರೂಪಿಸಿದರು. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ ಎನ್ನುತ್ತಿದ್ದ ಎಂಟಿಬಿ ನಾಗರಾಜ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ(BJP) ಹೋಗಿದ್ಯಾಕೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರು ತಮ್ಮ ಪತ್ರಗಳಿಗೆ ಸಹಿ ಹಾಕುವಂತೆ ನನ್ನ ಮುಂದೆ ಇಸ್ಟೀಟ್ ಎಲೆಯಂತೆ ಎಸೆಯುತ್ತಿದ್ದರು. ಆ ರೀತಿ ನನ್ನನ್ನು ನೀವು ಇಟ್ಟುಕೊಂಡಿದ್ದಿರಿ. ಯಾವ ಶಾಸಕರಿಗೆ ಅಗೌರವ ತೋರಿಸಿದ್ದೇನೆ? ನಾನು ಸಿಎಂ ಆಗಿದ್ದರೂ ನೀವು ಸರ್ಕಾರಿ ಬಂಗಲೆ ಬಿಟ್ಟು ಕೊಡಲಿಲ್ಲ. ಜೆಪಿ ನಗರದಿಂದ ಬರಲು ತೊಂದರೆ ಆಗುತ್ತಿದ್ದ ಕಾರಣ ಮಧ್ಯಾಹ್ನದ ಊಟಕ್ಕಾಗಿ ವೆಸ್ಟ್ ಎಂಡ್ ಹೋಟೆಲ್ನಲ್ಲಿ ರೂಮ್ ಮಾಡಿದ್ದೆ ಎಂದರು.