* ಸೋಲುತ್ತಾರೆಂದು ಗೊತ್ತಿದ್ದರೂ ರಾಜ್ಯಸಭೆಗೆ ಮನ್ಸೂರ್ ಕಣಕ್ಕೆ
* ಇದು ಕಿಲಾಡಿರಾಮಯ್ಯನ ರಾಜನೀತಿ, ರಣನೀತಿ: ಜೆಡಿಎಸ್ ಕಿಡಿ
* ಆಪರೇಶನ್ ಕಮಲದ ಅಮಲು ಇನ್ನೂ ಇಳಿದಿಲ್ಲವೆ?
ಬೆಂಗಳೂರು(ಜೂ.01): ಜಾತ್ಯತೀತತೆಯ ಸೋಗು ಹಾಕಿಕೊಂಡು ರಾಜ್ಯಸಭೆ ಚುನಾವಣೆಯಲ್ಲಿ ಸೋಲು ಖಚಿತವಾಗಿದ್ದರೂ ಅಲ್ಪಸಂಖ್ಯಾತ ವ್ಯಕ್ತಿಯನ್ನು ಬಲಿಪೀಠದ ಮುಂದೆ ನಿಲ್ಲಿಸಿದ್ದೀರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
ರಾಜ್ಯಸಭಾ ಚುನಾವಣೆ ಸಂಬಂಧ ಮಂಗಳವಾರ ಸರಣಿ ಟ್ವಿಟ್ ಮಾಡಿರುವ ಕುಮಾರಸ್ವಾಮಿ ಅವರು, ಬಿಜೆಪಿ ಸರಕಾರದ ಕಾರಣಪುರುಷ, ಅಹಿಂದ ಆದಿಪುರುಷ, ಕಾಂಗ್ರೆಸ್ ಮುಗಿಸಲು ಹೊರಟ ಸಿದ್ದಹಸ್ತ ಮಹಾಶಯ, ಏನಯ್ಯಾ ನಿಮ್ಮ ರಾಜಕೀಯ ಎಂದು ಪ್ರಶ್ನಿಸಿದ್ದಾರೆ.
Third Front: ಮೂರನೇ ಶಕ್ತಿ ಇಂದು ಅತ್ಯಗತ್ಯ, ದಸರಾ ವೇಳೆ ಉತ್ತಮ ನಿರ್ಧಾರ: ಕುಮಾರಸ್ವಾಮಿ
ಮುಸ್ಲಿಮರ ರಾಜಕೀಯ ನರಮೇಧಕ್ಕೆ ಇನ್ನೊಂದು ವಿನಾಶಕಾರಿ ಅಧ್ಯಾಯ ಆರಂಭಿಸಿದ್ದೀರಿ. ಭಾಷಣ ಒಂದು, ರಾಜಕಾರಣ ಇನ್ನೊಂದು. ಇದಯ್ಯಾ ಕಿಲಾಡಿರಾಮಯ್ಯನ ರಾಜನೀತಿ ಮತ್ತು ರಣನೀತಿ. ಐದು ವರ್ಷಗಳ ನಿಮ್ಮ ನೇತೃತ್ವದ ಕಾಂಗ್ರೆಸ್ ಸರಕಾರ ಬರಲು ಕಾರಣರಾದ ಅಲ್ಪಸಂಖ್ಯಾತರನ್ನೇ ಅಯ್ಯೋ ಎನ್ನುವಂತೆ ಮಾಡುತ್ತಿದ್ದೀರಲ್ಲ? ಇದು ನ್ಯಾಯವೇ? ಸೋಲು ಖಚಿತ ಎಂದು ಗೊತ್ತಿದ್ದರೂ ಮನ್ಸೂರ್ ಖಾನ್ ಅವರನ್ನು ಬಲಿಪೀಠದ ಮುಂದೆ ನಿಲ್ಲಿಸಿದ್ದಿರಿ. ಏನಿದರ ಹಕೀಕತ್ತು ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ನಾಯಕರನ್ನು ಸಾಲು ಸಾಲಾಗಿ ರಾಜಕೀಯ ಗಿಲೋಟಿನ್ ಯಂತ್ರಕ್ಕೆ ತಳ್ಳುತ್ತಿರುವ ನಿಮ್ಮ ಮುಸ್ಲಿಂ ಮೂಲೋತ್ಪಾಟನಾ ರಾಜಕೀಯಕ್ಕೆ ರಾಜ್ಯಸಭೆ ಚುನಾವಣೆಯನ್ನೂ ಬಳಸಿಕೊಳ್ಳುತ್ತಿದ್ದೀರಲ್ಲ? ಇದೆಂಥಾ ರಾಜಕೀಯವಯ್ಯಾ? ರಾಮನ ಹೆಸರು, ರಾವಣ ರಾಜಕೀಯ. ನಿಮಗೆ ನೀವೇ ಸಾಟಿ. ಜಾತ್ಯತೀತತೆಯ ಸೋಗು ಹಾಕಿಕೊಂಡು ಪೋಸು ಕೊಡುವ ಆಸಾಮಿ, ಜಾತಿಗೊಂದು ಸಮಾವೇಶ ನಡೆಸಿಕೊಂಡು ಅಲ್ಪಸಂಖ್ಯಾತ ವ್ಯಕ್ತಿಯನ್ನು 2ನೇ ಅಭ್ಯರ್ಥಿ ಮಾಡಿದ ಒಳಗುಟ್ಟು ಏನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಪರೇಶನ್ ಕಮಲದ ಅಮಲು ಇನ್ನೂ ಇಳಿದಿಲ್ಲವೆ? ಅಲ್ಪಸಂಖ್ಯಾತರ ಬಗ್ಗೆ ಅಷ್ಟುಮಮಕಾರ ಇದ್ದಿದ್ದರೆ ಮನ್ಸೂರ್ ಖಾನ್ ಅವರನ್ನೇ ಮೊದಲ ಅಭ್ಯರ್ಥಿ ಮಾಡಬೇಕಿತ್ತು. ಮಾಡಲಿಲ್ಲ ಯಾಕೆ? ನಿಮಗೆ ಜೈರಾಂ ರಮೇಶ್ ಹೆಚ್ಚೋ ಅಥವಾ ಮನ್ಸೂರ್ ಖಾನ್ ಹೆಚ್ಚೋ? ಇಲ್ಲವೇ ಬಿಜೆಪಿಯ 3ನೇ ಅಭ್ಯರ್ಥಿ ಹೆಚ್ಚೋ? ಇಕ್ಬಾಲ… ಅಹಮದ್ ಸರಡಗಿ , ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್, ರೋಷನ್ ಬೇಗ್ ಕಥೆಯನ್ನು ಮುಗಿಸಿದಿರಿ. ತನ್ವೀರ್ ಸೇಠ್ ನಿಮ್ಮ ಹಿಟ್ ಲಿಸ್ಟಿನಲ್ಲಿ ಇದ್ದಾರೆ. ಸತ್ಯ ಹೇಳಿದ ಸಲೀಂರನ್ನು ಸಲೀಸಾಗಿ ಸೈಡಿಗಟ್ಟಿದಿರಿ. ಒಂದೇ ಕಲ್ಲಿನಲ್ಲಿ ಅನೇಕ ಹಕ್ಕಿಗಳನ್ನು ಹೊಡೆಯೋದು ಅಂದರೆ ಇದೇನಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.