ಜನರ ಸಂಪರ್ಕ ಕಳೆದುಕೊಂಡ ಸರ್ಕಾರ ಹೆಚ್ಚು ದಿನ ಇರದು: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

Published : Oct 18, 2025, 10:22 AM IST
HD Kumaraswamy

ಸಾರಾಂಶ

ಈ ಸರ್ಕಾರ ಆಕಾಶದಲ್ಲಿ ತೇಲುತ್ತಿದೆ. ದುರಹಂಕಾರದಿಂದ ಕೆಳಗೆ ಇಳಿದು ಜನರ ಮಧ್ಯ ಓಡಾಡಿ ಅವರ ಕಷ್ಟ ಅರಿತುಕೊಳ್ಳಿ. ಜನರ ಜೊತೆ ಸಂಪರ್ಕ ಕಳೆದುಕೊಂಡ ಸರ್ಕಾರ ಹೆಚ್ಚು ದಿನ ಇರಲಾರದು ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಹಾಸನ (ಅ.18): ಈ ಸರ್ಕಾರ ಆಕಾಶದಲ್ಲಿ ತೇಲುತ್ತಿದೆ. ದುರಹಂಕಾರದಿಂದ ಕೆಳಗೆ ಇಳಿದು ಜನರ ಮಧ್ಯ ಓಡಾಡಿ ಅವರ ಕಷ್ಟ ಅರಿತುಕೊಳ್ಳಿ. ಜನರ ಜೊತೆ ಸಂಪರ್ಕ ಕಳೆದುಕೊಂಡ ಸರ್ಕಾರ ಹೆಚ್ಚು ದಿನ ಇರಲಾರದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಅವರು ನಗರದ ರಿಂಗ್ ರಸ್ತೆ ಬಳಿ ಇರುವ ಶಾಸಕ ಎಚ್.ಪಿ. ಸ್ವರೂಪ್ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆಳಂದಾ ಕ್ಷೇತ್ರದಲ್ಲಿ ಮತಗಳ್ಳತನ ಆರೋಪದ ಹಿನ್ನೆಲೆ ನಡೆದ ಎಸ್‌ಐಟಿ ದಾಳಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿಕಾರ ಯಾರ ಅಪ್ಪನ ಆಸ್ತಿಯೂ ಅಲ್ಲ.

ನಾಡಿನ ಜನತೆ ಯಾರನ್ನಾದರೂ ಆಯ್ಕೆ ಮಾಡುವ ಶಕ್ತಿ ಹೊಂದಿದ್ದಾರೆ. ಗ್ಯಾರಂಟಿ ಕೊಟ್ಟ ತಕ್ಷಣ ಎಲ್ಲವೂ ಸರಿಯಾಗಿದೆ ಎಂದು ಭ್ರಮೆ ಪಡಬೇಡಿ. ಜನರ ಬದುಕು ಬದಲಾಯಿಸಲು ಕೇವಲ 2000 ಅಥವಾ ಟೈಲರಿಂಗ್ ಮಷಿನ್, ವಾಷಿಂಗ್ ಮಷಿನ್ ಕೊಡುವುದರಿಂದ ಸಾಕಾಗುವುದಿಲ್ಲ ಎಂದು ಟೀಕೆ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರು ಈ ಸಣ್ಣ ಸಣ್ಣ ಯೋಜನೆಗಳಿಂದ ತೃಪ್ತಿ ಪಡಬಾರದು. ರಾಜ್ಯದ ರೈತರ ಸ್ಥಿತಿ ದಿನದಿಂದ ದಿನಕ್ಕೆ ದುಸ್ತರವಾಗಿದೆ. ನಿನ್ನೆ ಒಬ್ಬ ರೈತ ಬೋನ್ ಮ್ಯಾರೋ ಕಾಯಿಲೆಯಿಂದ ಮಗನ ಚಿಕಿತ್ಸೆಗಾಗಿ ಮನೆ ಮಾರಬೇಕಾದ ಪರಿಸ್ಥಿತಿ ಎದುರಿಸಿದ್ದಾನೆ. ಆದರೆ ಈ ಸರ್ಕಾರದಿಂದ ಒಂದು ನಯಾಪೈಸೆಯ ಸಹಾಯವೂ ಆಗಿಲ್ಲ.

ನಾನು ಸಿಎಂ ಆಗಿದ್ದಾಗ ನನಗೆ ಸಿಕ್ಕ ಅವಧಿಯಲ್ಲಿ ಜನರ ಸಹಾಯಕ್ಕಾಗಿ ಕೆಲಸ ಮಾಡಿದ್ದೆ. ಈಗಿನ ಆಡಳಿತ ಜನರ ಕಷ್ಟವನ್ನೇ ಮರೆತಿದೆ. ಸಿದ್ದರಾಮಯ್ಯ ಅವರು ನನ್ನ ಆಡಳಿತದೊಂದಿಗೆ ಹೋಲಿಕೆ ಮಾಡಬಾರದು. ಅವರು ಬಯಸಿದರೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದರು. ರಾಜ್ಯ ಸರ್ಕಾರದ ನಡೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಎಷ್ಟು ಮಂತ್ರಿಗಳು ತಮ್ಮ ಕ್ಷೇತ್ರಕ್ಕೆ ಹೋಗಿ ಜನರ ಸಮಸ್ಯೆ ಕೇಳಿದ್ದಾರೆ. ಜನರ ಜೊತೆ ಸಂಪರ್ಕ ಕಳೆದುಕೊಂಡ ಸರ್ಕಾರ ಹೆಚ್ಚು ದಿನ ಇರಲಾರದು ಎಂದು ಎಚ್ಚರಿಸಿದರು.

ಜೆಡಿಎಸ್ ಜನರ ವಿಶ್ವಾಸದಿಂದ ಬಲ ಪಡೆದಿದೆ. ನಮ್ಮನ್ನು ಅಷ್ಟು ಸುಲಭವಾಗಿ ನಾಶ ಮಾಡಲು ಯಾರಿಗೂ ಸಾಧ್ಯವಿಲ್ಲ. ಮೈತ್ರಿ ಸರ್ಕಾರದ ಉದ್ದೇಶ ಆಡಳಿತ ಸರಿಪಡಿಸುವುದೇ. ಆದರೆ ಈಗಿನ ಸರ್ಕಾರ ಅದನ್ನು ಹಾಳುಮಾಡಿದೆ ಎಂದರು. ನಾನು ಮತ್ತು ಪಕ್ಷದ ಕಾರ್ಯಕರ್ತರು ಜನರ ವಿಶ್ವಾಸ ಮರಳಿ ಗಳಿಸಲು ಮುಂದಿನ ಹದಿನೈದು ದಿನಗಳಲ್ಲಿ ರಾಜ್ಯವ್ಯಾಪಿ ಚಟುವಟಿಕೆ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಘೋಷಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆತ್ಮಹತ್ಯೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಇದು ಕೇವಲ ರಾಜಕೀಯ ಆರೋಪವಲ್ಲ ವಾಸ್ತವಿಕ ಸ್ಥಿತಿ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯದಿಂದ ಆಗುತ್ತಿದೆ ಎಂದು ಹೇಳಿದರು.

ಬೆಕ್ಕಿಗೆ ಗಂಟೆ ಕಟ್ಟೋರು ಯಾರು

ಭ್ರಷ್ಟಾಚಾರ ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ಇದೆ ಎಂಬುದನ್ನು ಎಲ್ಲರೂ ಒಪ್ಪಬೇಕು. ಆದರೆ ‘ಬೆಕ್ಕಿಗೆ ಗಂಟೆ ಕಟ್ಟೋರು ಯಾರು’ ಎಂಬ ಪ್ರಶ್ನೆ ಮುಖ್ಯ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ 40 ಪರ್ಸೆಂಟ್ ಪೋಸ್ಟರ್ ಅಂಟಿಸಿದ್ದರು. ಪರ್ಸೆಂಟ್ ಸಿಎಂ ಎಂದು ಹೇಳಿದ್ದರು. ಈಗ ಅವರ ಆಡಳಿತದಲ್ಲೂ ಅದೇ ಸಮಸ್ಯೆ ಇದೆ. ನಮ್ಮ ಕಾಲದಲ್ಲಿ ಇಂತಹ ಅಕ್ರಮ ನಡೆದಿಲ್ಲ ಎಂದು ಹೇಳುವುದಿಲ್ಲ. ಆದರೆ ನಾವು ಅಷ್ಟು ಮಟ್ಟದ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲಿಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲೇ ಟೆಂಡರ್ ಅವಾರ್ಡ್ ಮಾಡುತ್ತಿದ್ದೇವೆ ಎಂದರೆ ಅದು ಪಾರದರ್ಶಕತೆ. ಇಂದಿನಂತೆ ಹಣದ ವಹಿವಾಟು ಆಗಿರಲಿಲ್ಲ.

ಈಗ ಗುತ್ತಿಗೆದಾರರು 1520 ಕೋಟಿ ರು. ಖರ್ಚುಮಾಡಿ ಕೆಲಸ ಪಡೆದರೂ ಪಾವತಿಯಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು. ಈ ಸರ್ಕಾರದ ದುರಹಂಕಾರಕ್ಕೆ ಜನರು ಶೀಘ್ರದಲ್ಲೇ ತೀರ್ಪು ಕೊಡುತ್ತಾರೆ ಎಂದು ಕಟು ಟೀಕೆ ಮಾಡಿದರು. ಕೇಂದ್ರ ಸರ್ಕಾರ ಮತಗಳ್ಳತನ ಮಾಡಿದೆ ಎಂದೆಲ್ಲಾ ಆರೋಪ ಮಾಡುವ ರಾಹುಲ್‌ ಗಾಂಧಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಹೇಗೆ ನಿಖರವಾಗಿ ಹೇಳಿದ್ದರು. ಹಾಗಾದರೆ ಅವರೇ ಮತಗಳ್ಳತನ ಮಾಡಿ ಗೆದ್ದಿದ್ದಾರೆ ಎಂದರ್ಥವಾ, ಅವರೇ ಮತಗಳ್ಳತನ ಮಾಡಿ ಈಗ ಬಿಜೆಪಿ ಮೇಲೆ ಬೆರಳು ತೋರಿಸುವುದು ಎಷ್ಟು ಸರಿ ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.

ಹಲವಾರು ತಿಂಗಳಿನಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಸಮಸ್ಯೆ ಬಗೆಹರಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ನಮ್ಮ ಜೆಡಿಎಸ್ ಅಷ್ಟು ಸುಲಭವಾಗಿ ಜನರಿಂದ ದೂರವಾಗುವುದಿಲ್ಲ. ಪಕ್ಷ ಸಂಘಟನೆಗಾಗಿ ರಾಜ್ಯಾಧ್ಯಂತ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ 60 ಕ್ಷೇತ್ರಗಳ ಸುತ್ತಾಡಿ ಬರಲಾಗಿದೆ. ನಮ್ಮ ಪಕ್ಷದ ಶಾಸಕರು ಹಾಗೂ ಮಾಜಿ ಶಾಸಕರು ಹಾಗೂ ಮುಖಂಡರು ಪಕ್ಷ ಸಂಘಟನೆ ಮಾಡಿ ಗಟ್ಟಿಗೊಳಿಸುತ್ತಿರುವುದಾಗಿ ಹೇಳಿದರು. ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಎಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಎ. ಮಂಜು, ಬೋಜೇಗೌಡ, ಕೃಷ್ಣಪ್ಪ, ಶರಣಪ್ರಕಾಶ್, ಜಿ.ಟಿ. ಹರೀಶ್ ಗೌಡ, ಸುರೇಶ್ ಬಾಬು, ಶಾರದ ಪೂರ್ಯ ನಾಯಕ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಸಂತೋಷ್ ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ?: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ
ನರೇಗಾ ಸಮರ: ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ' ಎಂದು ಪಂಥಾಹ್ವಾನ!