
ಹರಪನಹಳ್ಳಿ (ಅ.18): ಬಿ.ವೈ.ವಿಜಯೇಂದ್ರ ಸಾರಥ್ಯದಲ್ಲಿ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪನವರ ಪದಗ್ರಹಣದಲ್ಲಿ ಮಾತನಾಡಿದ ಅವರು, ಇಂದಿನ ಕಾರ್ಯಕರ್ತರ ಉತ್ಸಾಹ 2028ರ ವರೆಗೆ ಇರಬೇಕು. ಹರಪನಹಳ್ಳಿ ಕ್ಷೇತ್ರಕ್ಕೆ ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಮುಂದೆ ಕರುಣಾಕರ ರೆಡ್ಡಿ ಅವರನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಕೋರಿದರು.
ಈ ಕ್ಷೇತ್ರದಲ್ಲಿ ಈಗಿನ ಶಾಸಕರ ಹೆಸರು ಬಹಳ ಜನರಿಗೆ ಗೊತ್ತಿಲ್ಲ. ಅವರ ಕೊಡುಗೆ ಹರಪನಹಳ್ಳಿ ಕ್ಷೇತ್ರಕ್ಕೆ ಏನೂ ಇಲ್ಲ. ಇಲ್ಲಿಯ ಶಾಸಕರು ಅನುಕಂಪ, ಕುತಂತ್ರದಿಂದ ಗೆದ್ದಿದ್ದಾರೆ. ಕಳೆದ 3 ತಿಂಗಳ ಹಿಂದೆ ಹೊನ್ನಾಳಿಗೆ ಬಂದು ನನ್ನ ವಿರುದ್ಧ ಮಾತನಾಡಿದ್ದಾರೆ ಎಂದು ದೂರಿದರು. ಶಾಸಕ ಕೃಷ್ಣನಾಯ್ಕ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಮೊದಲು ಸಂಘಟಿಸಿದ್ದು ರೆಡ್ಡಿ ಸಹೋದರರು. ಅಂತಹ ಕರುಣಾಕರ ರೆಡ್ಡಿಯನ್ನು ಸೋಲಿಸಿ ಇಂದು ಪಶ್ಚಾತ್ತಾಪ ಪಡುತ್ತಿದ್ದೀರಿ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಬಾವುಟ ಹಾರಿಸಿರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯ ಪರಿಶಿಷ್ಟ ಪಂಗಡದ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಈ ಸರ್ಕಾರ ಬಂದಾಗಿನಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ ಕುರಿತು ಮಾತನಾಡಿದ ಅವರು, ಜನರ ಮನಸ್ಸಿನಿಂದ ಆರ್‌ಎಸ್‌ಎಸ್ ಅಳಿಸಲು ಸಾಧ್ಯವಿಲ್ಲ ಎಂದರು. ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿ ಪೂರ್ಣಗೊಳಿಸಲು ಈಗಿನ ಶಾಸಕರಿಗೆ ಆಗಿಲ್ಲ. ಹೊನ್ನಾಳಿಯ ರೇಣುಕಾಚಾರ್ಯ ಜವಾರಿ ಸ್ವಾಮಿ, ಇಲ್ಲಿಯ ಶಾಸಕಿ ಲತಾ ಮಲ್ಲಿಕಾರ್ಜುನ ಹೈಟೆಕ್ ಸ್ವಾಮಿ ಎಂದು ವ್ಯಂಗವಾಡಿದರು.
ಮಾಜಿ ಸಚಿವ ಕರುಣಾಕರ ರೆಡ್ಡಿ ಮಾತನಾಡಿ, ಪಕ್ಷಕ್ಕೆ ಭದ್ರ ಬುನಾದಿ ಕಾರ್ಯಕರ್ತರು. ಇಂದು ಹಬ್ಬದ ವಾತಾವರಣವಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಬಿಜೆಪಿ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳೇ ಕಾಣುತ್ತವೆ ಎಂದು ಹೇಳಿದರು. ನೂತನ ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ ಜವಾಬ್ದಾರಿ ಸ್ವೀಕರಿಸಿದರು. ಬಿಜೆಪಿ ಜಿಲ್ಲಾದ್ಯಕ್ಷ ಸಂಜೀವರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಚೆನ್ನಗಿರಿಯ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ, ದಾವಣಗೆರೆಯ ಅಜಯಕುಮಾರ, ಲೋಕಿಕೇರಿ ನಾಗರಾಜ ಮಾತನಾಡಿದರು. ಸಿದ್ದೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭಾ ಸದಸ್ಯರಾದ ರೊಕ್ಕಪ್ಪ, ಕಿರಣಕುಮಾರ, ಗೌಳಿ ವಿನಯಕುಮಾರ, ಜಾವೇದ್, ಮುಖಂಡರಾದ ಕಲ್ಲೇರ ಬಸವರಾಜ, ಮಂಜುನಾಥ ಆರ್.ನಾಯ್ಕ, ಕೆ.ಮಹಬೂಬ್ ಬಾಷಾ, ಆರ್.ಲೋಕೇಶ, ವಿಷ್ಣುವರ್ಧನ ರೆಡ್ಡಿ, ಬಾಗಳಿ ಕೊಟ್ರೇಶಪ್ಪ, ಎಂ.ದ್ಯಾಮಪ್ಪ, ಮಲ್ಲೇಶ, ಹಡಗಲಿ ವಾರದಗೌಸ್, ಶಿವಕುಮಾರ, ಕಡೆಮನಿ ಸಂಗಮೇಶ, ಮುದುಕನವರ್ ಶಂಕರ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.