ಕೃಷಿ ಸಚಿವರೇ ನಾಲಗೆ ಬಿಗಿ ಹಿಡಿದು ಮಾತನಾಡಿ: ಎಚ್‌ಡಿಕೆ

By Kannadaprabha NewsFirst Published Mar 9, 2020, 7:43 AM IST
Highlights

ಕೃಷಿ ಸಚಿವರೇ ನಾಲಗೆ ಬಿಗಿ ಹಿಡಿದು ಮಾತನಾಡಿ: ಎಚ್‌ಡಿಕೆ| ಹಿಂದಿನ ಸರ್ಕಾರ ಸಾಲ ಮನ್ನಾ ಘೋಷಣೆಯಷ್ಟೇ ಮಾಡಿತ್ತು ಎಂದಿದ್ದ ಬಿ.ಸಿ.ಪಾಟೀಲ| ತೆವಲಿಗೆ ಮಾತನಾಡಿ, ಸುಮ್ಮನೆ ಸುಳ್ಳು ಹೇಳಬೇಡಿ ಎಂದ ಮಾಜಿ ಸಿಎಂ ಕುಮಾರಸ್ವಾಮಿ

ಮೈಸೂರು[ಮಾ.09]: ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಘೋಷಣೆ ಮಾಡಲಾಯಿತೇ ಹೊರತು ಸೂಕ್ತ ರೂಪುರೇಷೆ ಸಿದ್ಧಪಡಿಸಲಿಲ್ಲ ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕೃಷಿ ಸಚಿವರೇ ನಾಲಿಗೆ ಇದೆ ಎಂದು ತೆವಲಿಗೆ ಮಾತನಾಡಬೇಡಿ. ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡಬೇಡಿ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷಿ ಸಚಿವರಿಗೆ ಸಾಲಮನ್ನಾದ ಬಗ್ಗೆ ಮಾಹಿತಿಯೇ ಇಲ್ಲ. ನಾನು ಅಧಿಕಾರದಿಂದ ಕೆಳಗಿಳಿಯುವಾಗ ಬರೀ ಘೋಷಣೆ ಮಾಡಿಲ್ಲ. ಬದಲಿಗೆ .25 ಸಾವಿರ ಕೋಟಿ ಹಣ ಹೊಂದಿಸಿ ಅಧಿಕಾರದಿಂದ ಇಳಿದಿದ್ದೇನೆ. ನಾನು ಹೊಂದಿಸಿಕೊಟ್ಟಿದ್ದ .800 ಕೋಟಿ ಹಣವನ್ನು ಇನ್ನೂ ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾರೆ. ನಾವು ರೈತರಿಂದ ಸರಳ ದಾಖಲೆ ಕೇಳಿದ್ದೆವು. ರೈತರ ದಾಖಲೆ ತಪ್ಪಿದ್ದರೆ ಸರಿಪಡಿಸೋದು ಇಲಾಖೆಯ ಕೆಲಸ. ಅದೆನ್ನೆಲ್ಲ ಬಿಟ್ಟು ಸಾಲ ಮನ್ನಾ ಕುರಿತು ತೆವಲಿಗೆ ಮಾತನಾಡೋದು, ಸುಳ್ಳು ಹೇಳಿಕೊಂಡು ಓಡಾಡೋದು ಬೇಡ ಎಂದು ಹರಿಹಾಯ್ದರು.

ಜೆಡಿಎಸ್‌ ನಿರ್ನಾಮ ಸಾಧ್ಯವಿಲ್ಲ:

ನಂತರ ಹುಣಸೂರಿನ ಅಂಬೇಡ್ಕರ್‌ ಭವನದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಯಕರ್ತರ ಶ್ರಮದೊಂದಿಗೆ ಕಟ್ಟಿರುವ ಜೆಡಿಎಸ್‌ ಪಕ್ಷವನ್ನು ನಿರ್ನಾಮಗೊಳಿಸಲು ಸಾಧ್ಯವಿಲ್ಲ. ಕಳೆದ 60 ವರ್ಷಗಳಿಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಈ ಪಕ್ಷವನ್ನು ರಾಜ್ಯದ ಮೂಲೆಮೂಲೆಗಳಲ್ಲಿ ಸಂಚರಿಸಿ ಕಾರ್ಯಕರ್ತರ ಬಲದೊಂದಿಗೆ ಕಟ್ಟಿದ್ದಾರೆ. ಪಕ್ಷಕ್ಕೆ ಸ್ವಲ್ಪಮಟ್ಟಿನ ಹಿನ್ನೆಡೆಯಿದ್ದರೂ ಕೆಲವರು ಪಕ್ಷ ನಿರ್ನಾಮಗೊಳ್ಳಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್‌ ಲಕ್ಷಾಂತರ ಕಾರ್ಯಕರ್ತರ ಸ್ವಂತ ಶ್ರಮದಿಂದ ಕಟ್ಟಿದ ಪಕ್ಷ. ಹಾಗಾಗಿ ಇದನ್ನು ನಿರ್ನಾಮಗೊಳಿಸಲು ಸಾಧ್ಯವಿಲ್ಲ. ಈ ಬಿಜೆಪಿ ಸರ್ಕಾರ ಇನ್ನೆಷ್ಟುಸುಳ್ಳುಗಳನ್ನು ಹೇಳಲಿದೆ ಎಂದು ಕಾಯೋಣ. ನಂತರ ನಮ್ಮ ಹೋರಾಟ ಆರಂಭಿಸೋಣ. ಪಕ್ಷದ ಕಾರ್ಯಕರ್ತರು ಹೋರಾಟಕ್ಕೆ ಸಜ್ಜಾಗಬೇಕು ಎಂದು ಅವರು ಸೂಚಿಸಿದರು.

ಇದೇ ವೇಳೆ ‘ನನ್ನ ಮಗನ ಮದುವೆ ಮುಖಾಂತರ ರೈತರ ಪಕ್ಷವಾದ ಜೆಡಿಎಸ್‌ ಅನ್ನು ಮತ್ತಷ್ಟುಸದೃಢಗೊಳಿಸುವ ನಿರ್ಧಾರ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಪಾಲ್ಗೊಂಡು ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು’ ಎಂದರು.

click me!