
ಮಂಡ್ಯ (ಏ.21): ಕೇಂದ್ರದ ನಾಯಕರು ಹಾಗೂ ಶಾಸಕರ ಒತ್ತಾಯದ ಮೇರೆಗೆ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಸಹಕಾರ ಕೊಡ್ತೀನಿ ಅಂತಾ ಮೋದಿ ಹೇಳಿದ್ದಾರೆ. ಕಾವೇರಿ ವಿಚಾರದಲ್ಲಿ ನ್ಯಾಯ ಕೊಡಿಸದಿದ್ದರೇ ಮತ್ತೆಂದೂ ನಿಮ್ಮ ಮುಂದೆ ಮತ ಕೇಳೋಕೆ ಬರಲ್ಲ. ನಾನು ಮಂಡ್ಯವನ್ನು ಹಿಂದೆ ನೋಡಿದಂತೆಯೇ ಈಗಲೂ ಇದೆ. ನನಗೆ ಅವಕಾಶ ಇದ್ದಿದ್ದರೆ 9,000 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಮಾಡುತ್ತಿದ್ದೆನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಂಡ್ಯ ಲೋಕ ಸಭಾ ಕ್ಷೇತ್ರದ ಶ್ರೀರಂಗಪಟ್ಟಣದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿ, ಇವತ್ತಿನ ಚುನಾವಣೆ ದೇಶದ ರಕ್ಷಣೆ ಮಾಡುವ ಚುನಾವಣೆಯಾಗಿದೆ. ದೇಶದ ಭದ್ರತೆ, ಆರ್ಥಿಕ ಸುಧಾರಣೆಗಾಗಿ ಸಮರ್ಥ ನಾಯಕತ್ವಕ್ಕಾಗಿ ನರೇಂದ್ರಮೋದಿಗೆ ಬೆಂಬಲ ನೀಡಬೇಕಿದೆ. ಬಿಜೆಪಿ ಜೊತೆಗಿನ ಮೈತ್ರಿ ಸ್ವಾರ್ಥಕ್ಕಲ್ಲ. ಈ ಬಾರಿ ಚುನಾವಣೆಯಲ್ಲಿ ನಿಲ್ಲಬಾರದು ಅಂತಿದ್ದೆ, ಆದರೆ ದೆಹಲಿ ನಾಯಕರ ಸಲಹೆಯಂತೆ ಮಂಡ್ಯದಲ್ಲಿ ಸ್ಪರ್ಧೆ ಮಾಡಿದೆ. ನನಗೆ ಈ ಜಿಲ್ಲೆಯ ಸಂಬಂಧ 20 ವರ್ಷಗಳದ್ದು. 1999ರಿಂದ ಜಿಲ್ಲೆಯ ರೈತ ಕುಟುಂಬದ ಬಂಧುಗಳ ಮದುವೆಗೂ ಬಂದು ಹೋಗಿದ್ದೇನೆ. ಹಾಸನ ಜನ್ಮಕೊಟ್ಟ ಜಿಲ್ಲೆ, ರಾಜಕಾರಣದಲ್ಲಿ ಜನ್ಮ ಕೊಟ್ಟಿದ್ದು ರಾಮನಗರ ಹಾಗೂ ಮಂಡ್ಯ ಜಿಲ್ಲೆಯಾಗಿದೆ ಎಂದು ಹೇಳಿದರು.
ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲಿಸಿ ಚನ್ನಪಟ್ಟಣಕ್ಕೆ ವಾಪಸ್ ಕಳಿಸಿ: ಸಿಎಂ ಸಿದ್ದರಾಮಯ್ಯ
ಕುಮಾರಸ್ವಾಮಿ ಕೃಷಿ ಸಚಿವರಾಗಬೇಕು ಅಂತಾರೆ. ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ರಾಜ್ಯದ ರೈತರ ಬದುಕು ಏನಾಗಿದೆ ಅನ್ನೋದನ್ನ ನಿತ್ಯ ನೋಡ್ತಿದ್ದೀನಿ. ಕುಮಾರಸ್ವಾಮಿ ಕೊಟ್ಟ ಕೊಡುಗೆ ಏನು ಅಂತಾ ಕಾಂಗ್ರೆಸ್‌ನವರು ಕೇಳ್ತಾರೆ. ಕಾಂಗ್ರೆಸ್‌ನವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು? ಕಾವೇರಿ ವಿಚಾರದಲ್ಲಿ ಕೊಡುಗೆ ಏನು ಕೊಟ್ರಿ? ರೈತರು ಸಂಕಷ್ಟಕ್ಕೆ ಸಿಲುಕಿದಾಗೆಲ್ಲಾ ಅವರ ನೆರವಿಗೆ ಧಾವಿಸಿದ್ದೇನೆ. ಡಿಕೆಶಿ ನಿನ್ನೆ ನನ್ನ ಬಗ್ಗೆ ವಾಚಾಮಗೋಚರವಾಗಿ ಮಾತಾಡಿದ್ದಾರೆ. ಸಂತೋಷ, ಅದರ ಬಗ್ಗೆ ನನಗೆ ನೋವಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರಿಗೆ ಸಾಂತ್ವನ ಹೇಳಲಿಲ್ಲ. ಮೊದಲು ರೈತರಿಗೆ ಸಾಂತ್ವನ ಹೇಳಿದ್ದು ದೇವೇಗೌಡರು, ನಾನು. ನಾನು ದೊಡ್ಡ ಸಂಸ್ಥೆ, ಕಟ್ಟಡ ಏನು ಕಟ್ಟಲಿಲ್ಲ. ನಾನು ರಾಜಕಾರಣಕ್ಕೆ ಬಂದ ನಂತರ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡಿಲ್ಲ. ನಾನು ಸಂಪಾದಿಸಿದ ಆಸ್ತಿ ನೀವು ಎಂದು ಮತದಾರರಿಗೆ ಹೇಳಿದರು.
ನೀವು ಕೊಟ್ಟ ಶಕ್ತಿಯಿಂದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಯ್ತು. ಕಾಂಗ್ರೆಸ್‌ನ ಅಸಹಕಾರದ ನಡುವೆಯೂ ರೈತರ ಸಾಲಮನ್ನಾ ಮಾಡಿದ್ದೇನೆ. ನನ್ನನ್ನು FDAಗಿಂತಲೂ ಕೀಳಾಗಿ ಕಾಂಗ್ರೆಸ್‌ನವರು ಕಂಡರು. ಕಾಂಗ್ರೆಸ್‌ನವರು ನನಗೆ ತುಂಬಾನೇ ಅವಮಾನ ಮಾಡಿದ್ರು. ನೀವೇನು ಕೊಟ್ರಿ ಡಿಕೆಶಿಯವರೇ? ನಮ್ಮ ನೀರು- ನಮ್ಮ ಹಕ್ಕು ಅಂತಾ ಹೋರಾಟ ಮಾಡಿದ್ರಿ. ಅಧಿಕಾರಕ್ಕೆ ಬಂದ ಮೇಲೆ ನಮ್ಮ ನೀರು ತಮಿಳುನಾಡಿನ ಹಕ್ಕು ಅಂತಾ ನೀರು ಬಿಟ್ಟಿದ್ದೀರಿ. ಭತ್ತ ಬೆಳೆಯಬೇಡಿ ಎಂದು ಹೇಳಿದ ಕೃಷಿ ಸಚಿವ ಯಾರು? ಇದಕ್ಕೇನ ನಿಮಗೆ ಅಧಿಕಾರ ಕೊಟ್ಟಿದ್ದು? ಮೇಕೆದಾಟು ಕಟ್ಟಲು ನಮ್ಮನ್ನ ಅನುಮತಿ ಕೊಡಿಸಿ ಅಂತಿದ್ದೀರಿ. ನೀವು ಅಧಿಕಾರದಲ್ಲಿ ಇರೋದು ಯಾವುದಕ್ಕೆ? ಹಲವು ಕಬ್ಬಿನ ಗದ್ದೆಗಳು ಒಣಗಿ ನಿಂತಿವೆ. ರೈತರು ಇವತ್ತು ಬೆಂಕಿ ಹಚ್ಚುವ ಪರಿಸ್ಥಿತಿಗೆ ಹೋಗಿದ್ದಾರೆ ಎಂದು ಕಿಡಿಕಾರಿದರು.
ನಾನು ಸಿಎಂ ಆಗಿದ್ದಾಗ ವಿಸಿ ನಾಲೆ ಆಧುನೀಕರಣಕ್ಕೆ ಹಣ ಬಿಡುಗಡೆ ಮಾಡಿದ್ದೆನು. ನೀರು ನಿಲ್ಲಿಸದೆ, ರೈತರಿಗೆ ತೊಂದರೆ ಕೊಡದೆ ಕೆಲಸಾ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ. ಗುತ್ತಿಗೆದಾರನ ಜೇಬು ತುಂಬಿಸಲು ಕಾಮಗಾರಿ ಕೊಟ್ಟಿದ್ದೀರಿ. ಆ ಗುತ್ತಿಗೆದಾರರನನ್ನೇ ಈಗ ಅಭ್ಯರ್ಥಿ ಮಾಡಿದ್ದೀರಿ. ಇವತ್ತು ಸುರ್ಜೇವಾಲ ತಾಲೂಕಿಗೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಹಣ ಎಲ್ಲಿಂದ ತರ್ತೀರಿ? ಕೇಂದ್ರದ ಜೊತೆ ಜಗಳ ಮಾಡಿಕೊಂಡಿದ್ದಾರೆ. ಈಗ ಖಾಲಿ ಚೊಂಬು ಹಿಡಿದು ಭರ್ತಿಗೆ ಅಲೆಯುತ್ತಿದ್ದಾರೆ. ಈ ರೀತಿ ಡೂಪ್ ಭರವಸೆಗಳಿಗೆ ಮರುಳಾಗಬೇಡಿ. ಈ ಜಿಲ್ಲೆಗೆ ಏನು ಕೊಟ್ಟಿದ್ದೇವೆ ಅನ್ನೋದನ್ನ ಹೇಳೋಕೆ ಪುಟಗಟ್ಟಲೇ ಇದೆ ಎಂದು ಹೇಳಿದರು.
ಮೋದಿ ದೇಶಕ್ಕೆ ಹಿಡಿದಿರುವ ಶನಿ; ಜೂ.4ರ ಬಳಿಕ ಬಿಟ್ಟು ಹೋಗಲಿದೆ; ಪ್ರಧಾನಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿಂದನೆ!
ರಂಗನಾಥ, ನಿಮಿಷಾಂಭ ದೇಗುಲದ ನಡುವೆ ಹೇಳ್ತಿದ್ದೇನೆ. ಶಾಸಕರು, ಹಿರಿಯರ ಒತ್ತಡದಿಂದ ಮಂಡ್ಯದಿಂದ ಸ್ಪರ್ಧೆ. ಮೋದಿ ಪ್ರಧಾನಿ ಆಗೋದನ್ನ ತಪ್ಪಿಸಲು ಯಾರಿಂದಲೂ ಆಗಲ್ಲ. ರಾಜ್ಯದ ಅಭಿವೃದ್ಧಿಗೆ ಹೆಚ್ಡಿಕೆ ಸಹಕಾರ ಕೊಡ್ತೀನಿ ಅಂತಾ ಮೋದಿ ಹೇಳಿದ್ದಾರೆ. ಇವರು ಯಾವುದೇ ಆಸೆ ಆಮಿಷವೊಡ್ಡಲಿ. ಹಣಕ್ಕೆ ಮರುಳಾಗದ ಜನ ಮಂಡ್ಯ ಜನ. ದೇವೇಗೌಡರ ಹೋರಾಟದಿಂದ 16.5 ಟಿಎಂಸಿ ಹೆಚ್ಚುವರಿ ನೀರು ನಮಗೆ ಸಿಕ್ಕಿದೆ. ಕಾವೇರಿ ವಿಚಾರದಲ್ಲಿ ನ್ಯಾಯ ಕೊಡಿಸದಿದ್ದರೇ ಮತ್ತೆಂದೂ ನಿಮ್ಮ ಮುಂದೆ ಮತ ಕೇಳೋಕೆ ಬರಲ್ಲ. ನಾನು ಆರಂಭದಿಂದ ನೋಡಿದ ರೀತಿಯಲ್ಲೇ ಮಂಡ್ಯ ಇದೆ. ನನಗೆ ಅವಕಾಶ ಇದ್ದಿದ್ದರೆ 9,000 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಮಾಡುತ್ತಿದ್ದೆ. ನನ್ನ ಮೇಲೆ ಯಾವುದೇ ರೀತಿಯ ಸಂಶಯ ಇಟ್ಕೊಳ್ಳಬೇಡಿ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಜೀವ ಮುಡಿಪಾಗಿಡುತ್ತೇನೆ. ಗಂಗಾಮತಸ್ಥರನ್ನ ಎಸ್ಟಿ ಮೀಸಲಾತಿ ಕಲ್ಪಿಸಲು ಮುಂದಿನ ಸರ್ಕಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.