ಮಂಡ್ಯದಲ್ಲಿ ಹಲವಾರು ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ, ಸಮರ್ಥರಿದ್ದಾರೆ. ಯಾರೋ ಸವಾಲು ಹಾಕಿದರೆಂದು ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಎಂದು ಕುಮಾರಸ್ವಾಮಿ ಹೇಳಿದರು.
ಚಿತ್ರದುರ್ಗ (ಏ.19): ಮಂಡ್ಯದಲ್ಲಿ ಹಲವಾರು ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ, ಸಮರ್ಥರಿದ್ದಾರೆ. ಕಾರ್ಯಕರ್ತರೇ ಸ್ಪರ್ಧೆ ಮಾಡುತ್ತಿದ್ದು, ಟಿಕೆಟ್ ಕೂಡ ಘೋಷಣೆ ಮಾಡಲಾಗಿದೆ. ಯಾರೋ ಸವಾಲು ಹಾಕಿದರೆಂದು ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಪ್ರತಿನಿತ್ಯ ಅಚ್ಚರಿಯ ಬೆಳವಣಿಗೆ ನಡೆಯುತ್ತಿವೆ. ಪಕ್ಷದಿಂದ ಪಕ್ಷಕ್ಕೆ ಜಂಪ್ ಆಗುವವರ ಸಂಖ್ಯೆ ಹೆಚ್ಚಿದೆ. ಹಿಂದೆಂದೂ ಇಷ್ಟು ದೊಡ್ಡ ಮಟ್ಟದ ಪರಿವರ್ತನೆ ಆಗಿರಲಿಲ್ಲ. ಎಲ್ಲಾ ಪಕ್ಷಗಳಲ್ಲೂ ದೊಡ್ಡ ಮಟ್ಟದ ಬದಲಾವಣೆ ಆಗಿವೆ. ಕೆಲ ಪಕ್ಷಕ್ಕೆ ಲಾಭ ಕೆಲ ಪಕ್ಷಕ್ಕೆ ನಷ್ಟ ತಂದು ಕೊಡಲಿದೆ. ಖಾಸಗಿ ಸಮೀಕ್ಷೆಗಳ ವರದಿ ಯಾವುದೂ ಕಾರ್ಯಗತವಾಗಲ್ಲ ಎಂದು ಹೇಳಿದರು.
ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ ಮಾಡಿದರೇ ಆಯನೂರು ಮಂಜುನಾಥ್, ಯಾರೂ ಕ್ಯಾರೇ ಎನ್ನಲಿಲ್ಲ!
ಮಂಡ್ಯದಲ್ಲಿ ಸವಾಲು ಹಾಕಿದರೆಂದು ಸ್ಪರ್ಧೆ ಮಾಡೊಲ್ಲ: ಮಂಡ್ಯದಲ್ಲಿ ನಾನು ಅಭ್ಯರ್ಥಿ ಆಗುತ್ತೇನೆಂದು ಹೇಳಿಲ್ಲ. ಈಗಾಘಲೇ ಹಲವರು ಸವಾಲು ಒಡ್ಡಿಕೊಂಡು ಹೊರಟಿದ್ದಾರೆ. ನಾನು ಯಾರಿಗೂ ಸವಾಲೊಡ್ಡುವ ಮಟ್ಟಿಗೆ ಬೆಳೆದಿಲ್ಲ. ನಮ್ಮದು ರೈತರ ಪಕ್ಷ ಸಣ್ಣ ಪಕ್ಷ ಎಂದು ಪರೋಕ್ಷವಾಗಿ ಸುಮಲತಾಗೆ ಟಾಂಗ್ ನೀಡಿದರು. ಮಂಡ್ಯದಲ್ಲಿ ಜೆಡಿಎಸ್ ಮುಗಿಸುತ್ತೇನೆಂದು ಸವಾಲು ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಜನತೆಯೇ ಸವಾಲು ಸ್ವೀಕರಿಸಲಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಕಾರ್ಯಕರ್ತರಿಗಾಗಿ ರಾಮನಗರ, ಚನ್ನಪಟ್ಟಣದಲ್ಲಿ ತಲೆಕೊಟ್ಟೆನು. ಮಂಡ್ಯದಲ್ಲಿ ಹಲವಾರು ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ, ಸಮರ್ಥರಿದ್ದಾರೆ ಎಂದು ಹೇಳಿದರು.
ಸ್ಟೋರಿ ಸೃಷ್ಟಿಸಿ ಅಟ್ಟಕ್ಕೇರುತ್ತಿದ್ದಾರೆ: ಮಂಡ್ಯ ಸ್ಟೋರಿ ಸೃಷ್ಠಿಸಿ ಯಾರನ್ನೋ ಅಟ್ಟಕ್ಕೇರಿಸಲಾಗುತ್ತಿದೆ. ಮೇಲೇಳುವುದು, ಕೆಳಗೆ ಬೀಳುವುದು ಜನ ತೀರ್ಮಾನಿಸುತ್ತಾರೆ. ಜೆಡಿಎಸ್ 123 ಗುರಿಯೊಂದಿಗೆ ನಾನು ಹೊರಟಿದ್ದೇನೆ. ಆಯನೂರು ಮಂಜುನಾಥ್ ಇಂದು ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಆಯನೂರು ಮಂಜುನಾಥ್ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಇಂದು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ನಾಳೆ ನಾಮಪತ್ರ ಸಲ್ಲಿಸುತ್ತಾರೆ. ನಾಳೆ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಜೆಡಿಎಸ್ ಸೇರ್ಪಡೆಗೊಂಡ ಆಯನೂರು ಮಂಜುನಾಥ್: ಚಿತ್ರದುರ್ಗದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಲು ಹೊದಿಸಿ, ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಿ-ಫಾರಂ ನೀಡಿದರು. ಇನ್ನು ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ ನಂತರ, ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ.
ಒಂದೇ ಭೇಟಿಯಲ್ಲಿ ಜೆಡಿಎಸ್ ಬಿ-ಫಾರಂ: ಮಾಧ್ಯಮಗಳೊಂದಿಗೆ ಮಾತನಾಡಿದ ಆಯನೂರು ಮಂಜುನಾಥ್, ನಾನು MLC ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಹುಬ್ಬಳ್ಳಿಗೆ ಹೊರಟಿದ್ದೆನು. ಜೆಡಿಎಸ್ ಜತೆ ನಿನ್ನೆಯಿಂದಲೇ ಸಂಪರ್ಕದಲ್ಲಿದ್ದೆವು. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಚಿತ್ರದುರ್ಗ ಜೆಡಿಎಸ್ ಜಿಲ್ಲಾ ಕಚೇರಿಗೆ ಆಗಮಿಸಿದಾಗ ಪಕ್ಷ ಸೇರ್ಪಡೆ ಆಗಿದ್ದೇನೆ. ಇದೇ ವೇಳೆ ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಬಿ.ಫಾರಂ ಸಹ ನೀಡಿದ್ದಾರೆ. ನಾಳೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.
12 ಜೆಡಿಎಸ್ ಅಭ್ಯರ್ಥಿಗಳ ಬದಲಿಸಿದ ಕುಮಾರಣ್ಣ: ಇದು ಗೆಲುವಿನ ಸೂತ್ರವೇ?
ರಾತ್ರಿಯೊಳಗೆ ಎಂಎಲ್‌ಸಿ ಸ್ಥಾನಕ್ಕೆ ರಾಜಿನಾಮೆ: ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದೆ. ಕೋಮುಸೌಹಾರ್ಧತೆ ಇಲ್ಲ, ಗಲಭೆಗಳು ಆಗುತ್ತಿವೆ. ನಮ್ಮ ನಾಯಕರ ಹಿಡಿತವಿಲ್ಲದ ಮಾತಿನಿಂದ ಶಿವಮೊಗ್ಗ ಅಸ್ತವ್ಯಸ್ತವಾಗಿದೆ. ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ನಾನು ಈ ತೀರ್ಮಾನ ಕೈಗೊಂಡಿದ್ದೇನೆ. ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿದ್ದೇನೆ. ಮೊದಲ ಭೇಟಿಯಲ್ಲೇ ಕುಮಾರಸ್ವಾಮಿ ಬಿಫಾರಂ ನೀಡಿದ್ದಾರೆ. ರಾತ್ರಿಯೊಳಗೆ ಹುಬ್ಬಳ್ಳಿಗೆ ತೆರಳಿ ಹೊರಟ್ಟಿ ಅವರಿಗೆ ರಾಜೀನಾಮೆ ನೀಡುತ್ತೇನೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.