‘ರಾಮನಗರ ಬೆಂಗಳೂರಿನ ಒಂದು ಭಾಗ. ನಂತರ ಅದು ಗ್ರಾಮಾಂತರ ಆಗಿ ಈಗ ಪ್ರತ್ಯೇಕ ಜಿಲ್ಲೆ ಆಗಿದೆ. ಎಚ್.ಡಿ.ಕುಮಾರಸ್ವಾಮಿಗೆ ಸಾಮಾನ್ಯ ಪರಿಜ್ಞಾನ ಇಲ್ಲವಾಗಿದೆ. ಇದು ಕೆಂಪೇಗೌಡರು ಕಟ್ಟಿ ಗಡಿ ಗುರುತಿಸಿರುವ ಬೆಂಗಳೂರು. ಅವರಿಗೆ ಜ್ಞಾನ ಇಲ್ಲದಿದ್ದರೆ ಗೆಜೆಟಿಯರ್ ದಾಖಲೆ ನೀಡುತ್ತೇನೆ ಬರಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು/ಮೈಸೂರು (ಅ.27): ‘ರಾಮನಗರ ಬೆಂಗಳೂರಿನ ಒಂದು ಭಾಗ. ನಂತರ ಅದು ಗ್ರಾಮಾಂತರ ಆಗಿ ಈಗ ಪ್ರತ್ಯೇಕ ಜಿಲ್ಲೆ ಆಗಿದೆ. ಎಚ್.ಡಿ. ಕುಮಾರಸ್ವಾಮಿಗೆ ಸಾಮಾನ್ಯ ಪರಿಜ್ಞಾನ ಇಲ್ಲವಾಗಿದೆ. ಇದು ಕೆಂಪೇಗೌಡರು ಕಟ್ಟಿ ಗಡಿ ಗುರುತಿಸಿರುವ ಬೆಂಗಳೂರು. ಅವರಿಗೆ ಜ್ಞಾನ ಇಲ್ಲದಿದ್ದರೆ ಗೆಜೆಟಿಯರ್ ದಾಖಲೆ ನೀಡುತ್ತೇನೆ ಬರಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ‘ನಮ್ಮ ಸಮಾಜದವರು ಎಂದು ನೀವು ಏನು ಮಾತನಾಡಿದರೂ ಸಹಿಸಿಕೊಳ್ಳುತ್ತಿದ್ದೆ. ಸಮಾಜದ ಹಿರಿಯರ ಮಾತು ಕೇಳಿ ನಾನು ಏನೂ ಮಾತನಾಡುತ್ತಿರಲಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರಲ್ಲ’ ಎಂದು ಎಚ್ಚರಿಕೆ ನೀಡಿದರು.
ಜತೆಗೆ, ‘ರಾಮನಗರ ಜಿಲ್ಲೆಯನ್ನು ಯಾರು ಎಷ್ಟು ಅಭಿವೃದ್ಧಿಪಡಿಸಿದ್ದಾರೆ? ಯಾರು ಏನೆಲ್ಲಾ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ. ಯಾವ, ಯಾವ ತಾಲ್ಲೂಕಿನಲ್ಲಿ ಏನೇನು ನಡೆದಿದೆ ಎಂಬುದು ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಅಲ್ಲೇ ಎಲ್ಲಾ ಚರ್ಚೆಯೂ ದಾಖಲಾಗಲಿ. ಅದೆಷ್ಟು ಗಂಟೆಗಳ ಕಾಲ ಬೇಕಾದರೂ ಚರ್ಚೆ ನಡೆಯಲಿ. ನಾನು ಸಿದ್ದನಿದ್ದೇನೆ’ ಎಂದು ಪಂಥಾಹ್ವಾನ ನೀಡಿದರು. ಕನಕಪುರ ಬೆಂಗಳೂರಿನ ಭಾಗ ಎಂಬ ತಮ್ಮ ಹೇಳಿಕೆಗೆ ಕುಮಾರಸ್ವಾಮಿ ಅವರ ಟೀಕೆ ವಿಚಾರವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಗೂ ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಹಿಟ್ ಅಂಡ್ ರನ್ ಬೇಡ, ಅಸೆಂಬ್ಲೀಲಿ ಚರ್ಚಿಸೋಣ: ಎಚ್‌ಡಿಕೆಗೆ ಡಿಕೆಶಿ ತಿರುಗೇಟು
ಕುಮಾರಸ್ವಾಮಿಗೆ ತಲೆ ಕೆಟ್ಟಿದೆಯೇ?: ರಾಮನಗರ ಚಿತ್ರಣ ಬದಲಿಸಲಾಗಲ್ಲ ಎಂದಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಲೆ ತಲೆಕೆಟ್ಟಿದೆಯೇ? ಎಂದು ಖಾರವಾಗಿ ಪ್ರಶ್ನಿಸಿರುವ ಅವರು, ‘ಯಾರಾದರೂ ತಲೆಕೆಟ್ಟಿರುವವರು ಈ ರೀತಿ ಮಾತನಾಡಬೇಕು, ಚಿತ್ರಣ ಬದಲು ಮಾಡಲು ಆಗುವುದಿಲ್ಲ ಎಂದು ಸುಮ್ಮನೆ ಹೇಳುವವರು ಮೆಂಟಲ್ ಗಿರಾಕಿಗಳು. ರಾಮನಗರ ಮೂಲತಃ ಬೆಂಗಳೂರಿನದ್ದು, ನಾನು ಇದು ಒಂದಾಗಿರಬೇಕು, ಬೆಂಗಳೂರಿನ ಒಳಗಿರಬೇಕು ಎಂದು ಬಯಸುತ್ತಿದ್ದೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನನ್ನ ಮಾತಿನ ಅರ್ಥ ಕನಕಪುರವನ್ನು ಮಾತ್ರ ಬೆಂಗಳೂರಿಗೆ ಸೇರಿಸುತ್ತೇನೆ ಎಂದಲ್ಲ. ನಮ್ಮ ಆ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಅರ್ಥ. ಹೊಸಕೋಟೆ, ದೇವನಹಳ್ಳಿ, ಮಾಗಡಿ, ಆನೇಕಲ್, ಚನ್ನಪಟ್ಟಣ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ ಇದೆಲ್ಲಾ ಮೂಲತಃ ಬೆಂಗಳೂರು ಜಿಲ್ಲೆ. ಈ ಊರನ್ನು ಕಟ್ಟಿದ್ದು, ಹೆಸರನ್ನು ಕೊಟ್ಟಿದ್ದು ಕೆಂಪೇಗೌಡರು. ಚನ್ನಪಟ್ಟಣ ಗಡಿ, ಸಾವನದುರ್ಗದಿಂದ ಹಿಡಿದು, ಕೆಂಪೇಗೌಡರು ಎಲ್ಲೆಲ್ಲಿ ಗಡಿ ಬರೆದಿದ್ದಾರೋ ಅದೆಲ್ಲವೂ ಬೆಂಗಳೂರೇ. ಬ್ರಿಟೀಷರು ಕೂಡ ಗಡಿ ಗುರುತು ಮಾಡಿದ್ದಾರೆ ಎಂದರು. ನಿಮಗೆ ಜ್ಞಾನ ಇಲ್ಲದಿದ್ದರೆ ಗೆಜೆಟಿಯರ್ ದಾಖಲೆ ತೋರಿಸುತ್ತೇನೆ’ ಎಂದು ಹೇಳಿದ್ದಾರೆ.
ಜಮೀನು ಮಾರಿಕೊಳ್ಳಬೇಡಿ ಎಂಬುದು ಕಾಳಜಿ: ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರದಲ್ಲಿ ಕೋವಿಡ್ ನಂತರ ಅನೇಕರು ತಮ್ಮ ಆಸ್ತಿ ಮಾರಿಕೊಳ್ಳುತ್ತಿದ್ದಾರೆ. ಹೀಗಾಗಿ ಆಸ್ತಿ ಮಾರಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದೇನೆ. ರಾಮನಗರ, ಮಾಗಡಿ, ಚನ್ನಪಟ್ಟಣದ ಜನರಿಗೂ ನಾನು ಆಸ್ತಿ ಮಾರಿಕೊಳ್ಳಬೇಡಿ ಎಂದು ಸಲಹೆ ನೀಡುತ್ತೇನೆ ಎಂದರು. ಈ ಮೊದಲು ಆ ಭಾಗದಲ್ಲಿ 2-3 ಲಕ್ಷಕ್ಕೆ ಜಮೀನು ಸಿಗುತ್ತಿತ್ತು. ನೀವು ರಾಮನಗರದಲ್ಲಿ ಜಮೀನು ತೆಗೆದುಕೊಂಡಿರಲ್ಲ ಕುಮಾರಣ್ಣ, ಅದಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ, ಎಷ್ಟಕ್ಕೆ ನೋಂದಣಿ ಆಗಿದೆ ಎಂದು ನಿಮ್ಮ ತಂದೆಯರನ್ನು ಕೇಳಿನೋಡಿ? ಈಗೆಷ್ಟು ಗೈಡೆನ್ಸ್ ವ್ಯಾಲ್ಯೂ ಇದೆ ಎಂಬ ಮಾಹಿತಿ ತೆಗೆದುಕೊಳ್ಳಿ. ನಿಮಗೆ ಗೊತ್ತಿಲ್ಲದಿದ್ದರೆ ನಿಮ್ಮ ತಂದೆಯವರನ್ನು ಕೇಳಿ ಎಂದು ತಿರುಗೇಟು ನೀಡಿದರು.
ನಿಮ್ಮ ಹೆಸರಿನ ಮುಂದೆ ಎಚ್.ಡಿ. ಎಂದು ಯಾಕಿದೆ?: ನಮ್ಮ ತಂದೆ ದೊಡ್ಡಾಲಹಳ್ಳಿ ಎಂದು ಹೆಸರಲ್ಲಿ ಸೇರಿಸಿದ್ದಾರೆ. ನನ್ನ ಹೆಸರಿನ ಪಕ್ಕ ‘ಡಿ.ಕೆ.’ ಶಿವಕುಮಾರ್ ಎಂದು ಇದೆ. ನಿಮ್ಮ ಹೆಸರಿನ ಮುಂದೆ ‘ಎಚ್.ಡಿ’ ಎಂದು ಇದೆ. ಈಗ ರಾಮನಗರದಲ್ಲಿರುವ ನೀವು ಹರದನಹಳ್ಳಿ ಅಥವಾ ಹೊಳೆನರಸೀಪುರ ಎಂಬುದನ್ನು ಯಾಕೆ ಬದಲಿಸಿಕೊಳ್ಳಲಿಲ್ಲ. ಅದೇ ಮೂಲ, ಅಸ್ತಿತ್ವ ಎಂಬುದನ್ನು ನೆನಪಿಟ್ಟಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.
ಡಿಕೆಶಿ ಸವಾಲು ಒಪ್ಪಿದ್ದೇನೆ, ಚರ್ಚೆಗೆ ರೆಡಿ: ಎಚ್‌ಡಿಕೆ ಪ್ರತಿಸವಾಲು
ವಿದ್ಯಾಕ್ಷೇತ್ರಕ್ಕೆ ಸಾಕಷ್ಟು ಆಸ್ತಿ ದಾನ: ಭೂಕಬಳಿಕೆ ಆರೋಪದ ಬಗ್ಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್ ಅವರು, ‘ವಿದ್ಯಾ ಕ್ಷೇತ್ರಕ್ಕೆ ನಮ್ಮ ಎಷ್ಟು ಆಸ್ತಿಯನ್ನು ದಾನ ಮಾಡಿದ್ದೇವೆ ಎನ್ನುವುದು ಏನಾದರೂ ನಿಮಗೆ ಗೊತ್ತಿದೆಯೇ? ನನ್ನ ಜನರು 1,23,000 ಅಂತರದಿಂದ ಗೆಲ್ಲಿಸಿದ್ದಾರೆ ಎಂಬುದು ಗೊತ್ತಿದೆಯೇ? ನಿಮ್ಮ ವೈಯಕ್ತಿಕ ವಿಚಾರಗಳನ್ನು ತೆಗೆಯಲು ಹೋಗುವುದಿಲ್ಲ. ಆದರೆ ವಾಸ್ತವವನ್ನು ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಬನ್ನಿ’ ಎಂದು ಹೇಳಿದರು.