ಫೋನ್ ಮಾಡಿದರೆ ರಿಸೀವ್ ಮಾಡಲ್ಲ. ಯಾವ ಸಭೆ ಮಾಡಿಲ್ಲ ಸೋಂಬೇರಿ ಸಂಸದ ಎಂದು ಮೂದಲಿಸಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ.
ಹಾಸನ (ಅ.27): ಫೋನ್ ಮಾಡಿದರೆ ರಿಸೀವ್ ಮಾಡಲ್ಲ. ಯಾವ ಸಭೆ ಮಾಡಿಲ್ಲ ಸೋಂಬೇರಿ ಸಂಸದ ಎಂದು ಮೂದಲಿಸಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಮುಖಂಡರನ್ನು ಬೈದರೆ ಕಾಂಗ್ರೆಸ್ ಹೈಕಮಾಂಡಿನವರು ಮೆಚ್ಚಿ ಅನುದಾನ ನೀಡುತ್ತಾರೆ ಎಂದುಕೊಂಡಿದ್ದಾರೆ, ಶಿವಲಿಂಗೇಗೌಡರು ಈ ಭ್ರಮೆಯಿಂದ ಹೊರಬರಬೇಕು ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸೋಂಬೇರಿ ಸಂಸದ, ಫೋನ್ ರಿಸೀವ್ ಮಾಡಲ್ಲ ಎಂದು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಜರಿದಿದ್ದ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಕಡೂರು ಶಾಸಕ ಆನಂದ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು.
ನನಗೆ ಯಾವಾಗ ಫೋನ್ ಮಾಡಿದ್ರು ಅವರು? ಅರಸೀಕೆರೆಯಲ್ಲಿ 23 ಪಂಚಾಯ್ತಿಗೆ ಹೋಗಿದ್ದೇನೆ. ಇವರು ನನ್ನ ಬಗ್ಗೆ ಮಾತನಾಡುವುದಲ್ಲ, ಅವರ ವೈಯಕ್ತಿಕ ಮಾತನಾಡಿಕೊಳ್ಳಲಿ. ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ದೇವೇಗೌಡರು ಇಲ್ಲದಿದ್ದರೆ ಶಿವಲಿಂಗೇಗೌಡರು ಎಂಎಲ್‌ಎ ಆಗ್ತಿರಲಿಲ್ಲ. ಆ ಋಣವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಲಿ. ಇವತ್ತು ಕಾಂಗ್ರೆಸ್‌ಗೆ ಹೋಗಿದ್ದೀನಿ ಬೈದರೆ ಕಾಂಗ್ರೆಸ್ ಹೈಕಮಾಂಡ್ ಕೆಲಸ ಮಾಡಿಕೊಡ್ತಾರೆ ಎನ್ನುವ ಬುದ್ಧಿ ಇದ್ದರೆ ಅದನ್ನು ಈಗಲೇ ಬಿಡಲಿ. ಮೊದಲು ಸಾರ್ವಜನಿಕರನ್ನು ನೋಡಲಿ, ಹಾಸನದಲ್ಲಿ ಕೂತ್ಕಂಡು ಲೂಟಿ ಹೊಡೆಯುವುದಲ್ಲ.
ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿಗೆ ಮನವಿ: ಸಂಸದ ಪ್ರಜ್ವಲ್ ರೇವಣ್ಣ
ನಾಲ್ಕು ತಿಂಗಳಿನಿಂದ ಎಷ್ಟು ರುಪಾಯಿ ತಂದಿದ್ದಾರೆ, ಯಾವ ಯೋಜನೆ ತಂದಿದ್ದಾರೆ. ಇವರ ಬಗ್ಗೆ ಮಾತನಾಡಿಕೊಳ್ಳಲು ನನಗೆ ಟೈಂ ಇಲ್ಲಾ. ಅವರ ಮೀಟಿಂಗ್‌ನಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡಲಿ ನಮ್ಮ ಬಗ್ಗೆ ಅಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಲಿಂಗೇಗೌಡರು ಒಂದು ವರ್ಷದ ಹಿಂದೆ ಕಾಂಗ್ರೆಸ್‌ನವರನ್ನು ಬೈಯ್ಯುತ್ತಿದ್ದರು. ಇವರ ಥರ ಬಣ್ಣ ಬದಲಾಯಿಸಲು ನಮಗೆ ಆಗಲ್ಲ. ಇವರು ಸಂದರ್ಭಕ್ಕೆ ತಕ್ಕಂತೆ ಅವರ ಸ್ವಾರ್ಥಕ್ಕೆ ಅನುಕೂಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಕೆಲಸ ಮಾಡ್ತಾರೆ. ನಾವು ಆ ರೀತಿ ಮಾಡಲ್ಲ. ನಾನು ೩೫೭ ಪಂಚಾಯ್ತಿಯಲ್ಲಿ ೧೯೭ ಪಂಚಾಯ್ತಿಗೆ ಹೋಗಿದ್ದೇನೆ. ಯಾವ ಎಂಪಿ ಹೋಗಿದ್ದಾರೆ ತಿಳಿದುಕೊಂಡು ಬರಲಿ ಎಂದು ಹೇಳಿದರು.
ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರಜ್ವಲ್‌ರೇವಣ್ಣ, ಯಾರು ಹೇಳಿದ್ರು ಮೀಟಿಂಗ್ ಮಾಡುವ ಹಾಗಿಲ್ಲ ಅಂತ. ಅವರಿಗೆ ಕಾನೂನು ಗೊತ್ತಿದೆಯಾ? ನಾನು ಅಫಿಶೀಯಲ್ ಆಗಿ ಸಭೆ ಮಾಡ್ತಿದ್ದೀನಿ. ಸಭೆ ಮಾಡ್ತಿನಿ, ಅವರಿಗೇನು? ನಾನು ಸಾರ್ವಜನಿಕವಾಗಿ ಕೆಲಸ ಮಾಡಲು ಹೋಗ್ತಿದ್ದೀನಿ. ಎಂಎಲ್‌ಸಿ ಆದಾಗ ಇವರು ಎಷ್ಟು ತಾಲ್ಲೂಕಿಗೆ ಹೋಗಿದ್ರು. ಒಬ್ಬ ಎಂಎಲ್‌ಸಿ ಆಗಿ ಚನ್ನರಾಯಪಟ್ಟಣದಿಂದ ಆಚೆ ಬರಲಿಲ್ಲ. ಇವರು ನನ್ನ ಬಗ್ಗೆ ಮಾತನಾಡ್ತಾರಾ. ಇವರದ್ದು ಎಷ್ಟು ಇದೆ ಅಷ್ಟು ಮಾಡಿಕೊಳ್ಳಲಿ. ಯಾರೋ ಮುಂದೆಯೋ ಸ್ಕೋಪ್ ತಗೊಬೇಕು ಅಂಥ ಭಾಷಣ ಬಿಗಿದರೆ ನಮಗೂ ಭಾಷಣ ಬಿಗಿಯೋಕೆ ಬರುತ್ತೆ.
ಯಾವ ದುಡ್ಡು ಖರ್ಚು ಮಾಡುತ್ತಿದ್ದೀವಿ? ನಾನು ಸಭೆ ಮಾಡಲು ಪಂಚಾಯ್ತಿ, ಸಿಇಒ ಕೊಟ್ಟಿದ್ದಾರಾ! ಅಲ್ಲಿನ ಜನ, ಕಾರ್ಯಕರ್ತರು ದುಡ್ಡು ಹಾಕುತ್ತಿದ್ದಾರೆ. ನಾನು ಯಾರ ಮನೆಗೂ ಹೋಗಿಲ್ಲ. ಈಗ ಶಿವಲಿಂಗೇಗೌಡರು ಏನು ಮಾತನಾಡುತ್ತಿದ್ದಾರೆ? ಶಿವಲಿಂಗೇಗೌಡರು ನಮ್ಮ ಪಕ್ಷದಲ್ಲಿ ನಿಂತಿದ್ದಾಗ ನಮ್ಮನ್ನೆಲ್ಲ ಬೇಡಿಕೊಳ್ಳುತ್ತಿರಲಿಲ್ವಾ. ಇವತ್ತು ಯಾರ ಮನೆಯಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಎಲೆಕ್ಷನ್‌ಗಿಂತ ಮುಂಚೆ ಯಾರನ್ನು ಬೇಡಿಕೊಂಡಿದ್ರು. ಸುಮ್ಮನೆ ಆರೋಪ ಮಾಡಲು ಹೋಗಿ ಹಳ್ಳ ನೋಡಿಕೊಳ್ಳುವುದು ಬೇಡ ಎಂದು ಎಚ್ಚರಿಸಿದರು. ರಾಮನಗರ ಇಬ್ಭಾಗ ವಿಚಾರವಾಗಿ ಮಾತನಾಡುತ್ತಾ, ಅವರವರಲ್ಲೆ ಭಿನ್ನಾಭಿಪ್ರಾಯವಿದೆ. ನಾನು ಸಿದ್ರಾಮಣ್ಣ, ಡಿಕೆಶಿ ಅವರ ಹೇಳಿಯನ್ನು ಗಮನಿಸಿದ್ದೇನೆ. ನನಗೇನು ಗೊತ್ತಿಲ್ಲ ಡಿಸಿಎಂ ಕೇಳಿ ಅಂತ ಸಿಎಂ ಹೇಳ್ತಾರೆ. ಬ್ರಿಬ್ಬರ ನಡುವೆ ಮೊದಲು ತೀರ್ಮಾನ ಆಗಲಿ. ಕಾಂಗ್ರೆಸ್‌ನಲ್ಲಿ ಎರಡು ಬಣ ಇರುವುದರಿಂದ ಮೊದಲು ತೀರ್ಮಾನ ಮಾಡಿಕೊಳ್ಳಲಿ ಎಂದರು.
ಕುಮಾರಸ್ವಾಮಿ ಅವರು ರಾಮನಗರ ಬೆಳೆಯಲಿ ಅಂತ ಜಿಲ್ಲೆ ಮಾಡಿದ್ರು. ಬೆಂಗಳೂರು ಅಭಿವೃದ್ಧಿಗೆ ದುಡ್ಡು ಇಲ್ಲಾ ಅಂತ ಪರದಾಡುತ್ತಿದ್ದಾರೆ. ರಾಮನಗರ ಬೆಂಗಳೂರಿಗೆ ಸೇರಿಸಿದರೆ ಯಾವ ರೀತಿ ಮಾನ್ಯತೆ ಸಿಗುತ್ತೆ. ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಾವಿದ್ದೇವೆ. ಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆ ಬಗ್ಗೆ ಗೊತ್ತಿದೆ. ನನಗೆ ಹಾಸನ ಜಿಲ್ಲೆಯ ಬಗ್ಗೆ ಗೊತ್ತಿದೆ. ಕುಮಾರಸ್ವಾಮಿ ಅವರು ಹೋರಾಟದ ತೀರ್ಮಾನ ಕೈಗೊಂಡರೆ ಅವರ ಪರ ನಿಲ್ಲುತ್ತೇನೆ. ಯಾರೋ ಒಬ್ಬರ ಅನುಕೂಲಕ್ಕಾಗಿ ಮಾಡುವುದಾದರೆ ನಾವು ಖಂಡಿತ ವಿರೋಧ ಮಾಡುತ್ತೇವೆ. ಸಾರ್ವಜನಿಕರಿಗೆ ಅನುಕೂಲ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಯಾರಿಗೆ ಅನುಕೂಲ ಆಗುತ್ತೆ ಅಂತ ಮಾಧ್ಯಮದವರಿಗೆ ಗೊತ್ತಿದೆ. ತಾನೇ ತಾನಾಗಿ ಎಲ್ಲಾ, ಏನು ಅಂಥ ಆಚೆ ಬರುತ್ತೆ. ಕುಮಾರಣ್ಣ ಅವರಿಗೆ ಜಿಲ್ಲೆ ಉಳಿಸಿಕೊಳ್ಳಬೇಕೆಂಬ ಬಹಳ ಮನಸ್ಸಿದೆ. ಕುಮಾರಣ್ಣನಿಗೆ ಆ ಜಿಲ್ಲೆಯ ಮೇಲೆ ಪ್ರೀತಿ, ಅಭಿಮಾನ ಇದೆ ಎಂದು ಹೇಳಿದರು.
ಮಾಧ್ಯಮಗಳ ಮುಂದೆ ಶಾಸಕರ ಹೇಳಿಕೆ ಬಗ್ಗೆ ಡಿಕೆಶಿ ಕೇಳಿ: ಸಚಿವ ಚಲುವರಾಯಸ್ವಾಮಿ
ಕೆಲವರನ್ನು ಮಾತ್ರ ಟಾರ್ಗೆಟ್ ಮಾಡ್ತಿದ್ದಾರೆ: ಹುಲಿ ಉಗುರು ಪ್ರಕರಣದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ವನ್ಯಜೀವಿ ಕಾಯ್ದೆಯನ್ನು ಯಾರೂ ಉಲ್ಲಂಘನೆ ಮಾಡಬಾರದು. ಯಾರೇ ತಪ್ಪು ಮಾಡಿದರು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಕೆಲವರನ್ನು ಟಾರ್ಗೆಟ್ ಮಾಡ್ತಿದ್ದಾರೆ, ಕೆಲವರನ್ನು ಟಾರ್ಗೆಟ್ ಮಾಡ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆ ರೀತಿ ಇರಬಾರದು. ಎಲ್ಲರಿಗೂ ಒಂದೇ ಕಾನೂನು. ಕಾನೂನು ಬಾಹಿರವಾಗಿ ನಾವೇ ನಡೆದರೆ ತಪ್ಪು ಸಾಬೀತಾದರೆ ನನಗೂ ಶಿಕ್ಷೆ ಕೊಡಬೇಕು. ಕಾನೂನು ಎಲ್ಲರಿಗೂ ಒಂದೇ. ಅವರ ಹೆಸರ ಮೇಲಾಗಲಿ, ಸಾಧನೆ ಮೇಲಾಗಲಿ ಕಾನೂನು ಬದಲಾವಣೆ ಆಗಲ್ಲ.