
ರಾಮನಗರ, (ಫೆ.13): ಮುಂದಿನ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿಗೆ ಇದೀಗ ಸ್ವತಃ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ಹೇಳಿಕೆಯಿಂದ ಚಾಮುಂಡೇಶ್ವರಿ ಕ್ಷೇತ್ರದ ಮತ್ತು ಜೆಡಿಎಸ್ ಕ್ಷೇತ್ರದ ಕಾರ್ಯಕರ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ತೆರೆ ಎಳೆದಿದ್ದಾರೆ.
HD Kumaraswamy: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮುಂದೆ ನಾನೇ ಬರ್ತೇನೆ
ರಾಮನಗರದಲ್ಲಿ(Ramanagara) ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಯಕರು ಯಾರು ಎಂದು ಪ್ರಶ್ನಿಸಿದ್ದರು, ಅದಕ್ಕೆ ನಾನೇ ಬರ್ತೀನಿ ನಡೆಯಿರಿ ಎಂದಿದ್ದೇನೆ. ನಾನೇ ಬರ್ತೀನಿ ನಡೆಯಿರಿ ಅಂದ್ರೆ ಚುನಾವಣೆ ನಿಲ್ಲಲು ಅಲ್ಲ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದರು.
ಚುನಾವಣೆ ನಡೆಸಲು ಬರ್ತೀನಿ ಅಂತ ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ಹಳ್ಳಿ ಹಳ್ಳಿಗೆ ಭೇಟಿ ಮಾಡಿದ್ದೇನೆ, ಹಾಗೇ ನಾನು ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ ಅಷ್ಟೇ ಎಂದರು.
ನಾನು ಚುನಾವಣೆ ನಿಲ್ಲೀನಿ ಅಂತಾ ಹೇಳಿದ್ದೀನಾ? ನಾನೇ ಬರ್ತೀನಿ ನಡೆಯಿರಪ್ಪ ಅಂತೇಳಿದ್ದೇನೆ. ಅದನ್ನು ಈ ರೀತಿ ಅರ್ಥೈಸಿಕೊಂಡರೆ ನಾನೇನೂ ಮಾಡಲು ಸಾಧ್ಯ ಹೇಳಿದರು.
ಎಚ್‌ಡಿಕೆ ಹೇಳಿಕೆ ಗೊಂದಲವಾಗಿತ್ತು
ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅವರ ಬದಲಿಗೆ ಪಕ್ಷದ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸಿದಾಗ, ನಾನೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಇದು ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಅಲ್ಲದೇ ತಮ್ಮ ಕ್ಷೇತ್ರವನ್ನು ಪುತ್ರ ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಕೊಡುತ್ತಾರೆ ಅಂತೆಲ್ಲಾ ಮಾತುಗಳು ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದ್ದವು. ಇದೀಹ ಸ್ವತಃ ಕುಮಾರಸ್ವಾಮಿ ಅವರೇ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕುಮಾರಸ್ವಾಮಿ ಹೇಳಿರುವಂತೆ ಮುಂದಿನ ವಿಧಾನಸಭೆ ಚುನಾವಣೆಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುವುದು ಖಚಿತವಾದಂತಾಗಿದೆ.
ಎಚ್‌ಡಿ ದೇವೇಗೌಡ ಹೇಳಿದ್ದೇನು?
ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತಾರೆ ಗೊತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಕುಮಾರಸ್ವಾಮಿ (HD Kumaraswamy) ಸ್ಪರ್ಧಿಸ್ತಾರೆ? ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಹಲವಾರು ಭಾವನೆ ಬರ್ತಿದೆ ಅಷ್ಟೇ. ಎಚ್‌ಡಿಕೆ ಜೆಡಿಎಸ್ ಪಕ್ಷದ ಮುಖ್ಯ ನಾಯಕ ಸ್ಥಾನದಲ್ಲಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಎಲ್ಲಿ ಬೇಕಾದರೂ ನಿಲ್ಲಬಹುದು. ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಹೇಳಲಾಗಲ್ಲ.ಏನೇ ಆದರೂ ಕುಮಾರಸ್ವಾಮಿ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ. ಒಬ್ಬರಿಗೊಬ್ಬರು ಮಾತನಾಡುವಾಗ ಚರ್ಚೆಯಾಗುತ್ತಿದೆ ಅಷ್ಟೇ ಎಂದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.