* ನಿಗದಿತ ದಿನಗಳಷ್ಟು ಕಲಾಪ ನಡೆಯದ್ದಕ್ಕೆ ಸಭಾಪತಿ ಬೇಸರ
* ರಾಜ್ಯಸಭೆ ಮಾದರಿಯಲ್ಲಿ ಪರಿಷತ್ ಕಲಾಪ
* 765 ಪ್ರಶ್ನೆಗಳು ಸ್ವೀಕಾರ
ಬೆಂಗಳೂರು(ಫೆ.13): ಇತ್ತೀಚಿನ ವರ್ಷಗಳಲ್ಲಿ ಸದನದ ಕಲಾಪಗಳು(Session) 60 ದಿನ ನಡೆಯದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti), ಇನ್ನು ಮುಂದೆ ಇದಕ್ಕೆ ಅವಕಾಶ ನೀಡದೆ ವಾರ್ಷಿಕ 60 ದಿನ ಕಲಾಪ ನಡೆಸುವಂತೆ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ 40 ದಿನ, 2018ರಲ್ಲಿ 28 ದಿನ, 2019ರಲ್ಲಿ 20 ದಿನ, 2020ರಲ್ಲಿ 33 ದಿನ ಮತ್ತು 2021ರಲ್ಲಿ 41 ದಿನ ಸದನ ನಡೆದಿದೆ. ಹೀಗಾಗಿ ಇನ್ನು ಮುಂದೆ ಈ ರೀತಿ ಆಗದಂತೆ ಸರ್ಕಾರಕ್ಕೆ(Government of Karnataka) ತಿಳಿಸಲಾಗುವುದು ಎಂದರು.
ಬಸವರಾಜ ಹೊರಟ್ಟಿ ಬಿಜೆಪಿ ಸೇರ್ತಾರಾ? ಇದಕ್ಕೆ ಸ್ಪಷ್ಟನೆ ಕೊಟ್ಟ ಪರಿಷತ್ ಸಭಾಪತಿ
ಶಾಸಕರು ತಮ್ಮ ಇತಿಮಿತಿ, ಜವಾಬ್ದಾರಿ ಅರಿತು ಕಲಾಪದಲ್ಲಿ ನಡೆದುಕೊಳ್ಳಬೇಕು. ಧರಣಿ ವೇಳೆ ಭಿತ್ತಿ ಪತ್ರ ಹಂಚಬಾರದು, ಸದನದ ನಿಯಮಗಳನ್ನು ಮೀರಬಾರದು. ನಿಯಮ ಮೀರಿ ಪ್ರತಿಭಟನೆ ನಡೆಸಿದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಆದರೆ, ಪ್ಲೇಕಾರ್ಡ್‌ಗಳನ್ನು ಸದನದೊಳಗೆ ತರುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಯ್ಕೆ ಪ್ರಕ್ರಿಯೆಗೆ ಬೇಸರ:
ಬುದ್ಧಿವಂತರ ಸದನವೆಂದೇ ಕರೆಯುವ ವಿಧಾನ ಪರಿಷತ್‌ಗೆ(Vidhan Parishat) ಈ ಹಿಂದೆ ಗೌರವಾನ್ವಿತ ಸದಸ್ಯರು ಆಯ್ಕೆಯಾಗಿ ಬರುತ್ತಿದ್ದರು. ಆದರೆ, ಈಗ ಆಯ್ಕೆ ಪ್ರಕ್ರಿಯೆ ನೋಡಿದರೆ ಅತ್ಯಂತ ಬೇಸರವಾಗುತ್ತದೆ. ಪರಿಷತ್‌ಗೆ ಡಿವಿಜಿ, ಸಿದ್ದಲಿಂಗಯ್ಯ, ಖಾದ್ರಿ ಶಾಮಣ್ಣ, ಎ.ಕೆ.ಸುಬ್ಬಯ್ಯ ಅವರಂತಹ ಮೇಧಾವಿಗಳು ಆಯ್ಕೆಯಾಗಿ ಬರುತ್ತಿದ್ದರು. ಅವರ ಚರ್ಚೆ, ವಿಷಯ ಗಾಂಭೀರ್ಯತೆ ನಮಗೆಲ್ಲಾ ಮಾದರಿಯಾಗಿರುತ್ತಿತ್ತು ಎಂದು ನುಡಿದರು.
765 ಪ್ರಶ್ನೆಗಳು ಸ್ವೀಕಾರ:
ಸೋಮವಾರದಿಂದ ನಡೆಯುವ ವಿಧಾನಮಂಡಲ ಅಧಿವೇಶನ ಸಂಬಂಧ ಸದಸ್ಯರಿಂದ ಈವರೆಗೆ 765 ಪ್ರಶ್ನೆಗಳು ಸ್ವೀಕೃತಗೊಂಡಿವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ರಾಜ್ಯಪಾಲರು(Governor) ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣದ ಮಾಡಿದ ಬಳಿಕ ಪರಿಷತ್ ಕಲಾಪ ಆರಂಭವಾಗಲಿವೆ. ಈ ಬಾರಿ ಪರಿಷತ್‌ಗೆ 10 ಹೊಸ ಶಾಸಕರು ಆಯ್ಕೆಯಾಗಿ ಬಂದಿದ್ದಾರೆ. ಉಭಯ ಸದನದ ಶಾಸಕರಿಗೆ ತರಬೇತಿ ಶಿಬಿರ ನಡೆಸಲಾಗಿದ್ದು, ಕಲಾಪದ ಕಾರ್ಯವಿಧಾನ, ಅನುಸರಿಸಬೇಕಾದ ನಿಯಮಗಳ ಕುರಿತು ಅರಿವು ಮೂಡಿಸಲಾಗಿದೆ ಎಂದರು.
ಚುನಾವಣೆಯಲ್ಲಿ(Election) ಸೋತವರನ್ನು ಮೇಲ್ಮನೆಗೆ ಆಯ್ಕೆ ಮಾಡಲಾಗುತ್ತಿದೆ. ಸಾಹಿತಿ ಎಂದು ಪುಸ್ತಕ ಬರೆದ ರಾಜಕಾರಣಿಯನ್ನು ಕಳುಹಿಸಲಾಗುತ್ತಿದೆ. ಇದು ಈಗಿನ ವ್ಯವಸ್ಥೆ. ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮೀಸಲು ಇದ್ದ ಸ್ಥಾನಗಳಲ್ಲಿ ಸೋತ ರಾಜಕೀಯ ವ್ಯಕ್ತಿಗಳನ್ನು ತಂದು ಕೂರಿಸಲಾಗುತ್ತದೆ. ಇದು ಯಾವ ಪಕ್ಷಕ್ಕೂ ಸರಿಯಾದ ಕ್ರಮವಲ್ಲ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಆಯಾ ಕ್ಷೇತ್ರದವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ವಿಧಾನ ಪರಿಷತ್‌ನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಉಪಸ್ಥಿತರಿದ್ದರು.
Caste abuse: ಸ್ಪೀಕರ್ ಹೊರಟ್ಟಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
ರಾಜ್ಯಸಭೆ ಮಾದರಿಯಲ್ಲಿ ಪರಿಷತ್ ಕಲಾಪ
ಇನ್ನು ಮುಂದೆ ರಾಜ್ಯಸಭೆಯ ಮಾದರಿಯಲ್ಲಿಯೇ ವಿಧಾನ ಪರಿಷತ್‌ನ ಕಲಾಪಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯಸಭೆಯಲ್ಲಿ ಅನುಸರಿಸುವ ನಿಯಮ, ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶವಿದೆ. ಈ ಸಂಬಂಧ ರಾಜ್ಯಸಭೆ ಕಲಾಪ ನಡೆಯುವ ವೇಳೆ ದೆಹಲಿಗೆ ತೆರಳಿ ಅಲ್ಲಿನ ಕಾರ್ಯಕಲಾಪಗಳನ್ನು ವೀಕ್ಷಿಸಲಾಗುವುದು ಎಂದರು.
ಹಿಜಾಬ್-ಕೇಸರಿ ಶಾಲು ಗಲಾಟೆ ಮೂರ್ಖತನದ್ದು
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಗಲಾಟೆಯಿಂದ ಯಾವುದೇ ಪ್ರಯೋಜನವಿಲ್ಲ. ಇದು ಷಡ್ಯಂತ್ರವಲ್ಲ, ಮೂರ್ಖತನ. ಇದರಿಂದ ಹೆಣಗಳು ಬೀಳುತ್ತವೆ, ಬೆಂಕಿ ಹತ್ತುತ್ತದೆ ಅಷ್ಟೇ. ಕೂಡಲೇ ರಾಜ್ಯ ಸರ್ಕಾರ ಪರಿಣಿತರ ಸಭೆ ಕರೆದು ಮನವೊಲಿಸುವ ಮೂಲಕ ಶಾಂತಿಯುತ ವಾತಾವರಣ ಸೃಷ್ಟಿಬೇಕೆಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಕಿವಿಮಾತು ಹೇಳಿದ್ದಾರೆ.