Hijab Row: ಬಿಜೆಪಿಗೆ ರಾಜಕೀಯ ಲಾಭದ ನಿರೀಕ್ಷೆ, ಕಾಂಗ್ರೆಸ್‌ ವೋಟ್ ಕಳೆದುಕೊಳ್ಳುವ ಆತಂಕ

By Prashant NatuFirst Published Feb 13, 2022, 10:28 AM IST
Highlights

ಹಿಜಾಬ್‌ ವಿವಾದದಿಂದ ರಾಜಕೀಯ ಲಾಭ ಇದೆ ಎಂದು ಬಿಜೆಪಿಗೆ ಅನಿಸಿದ್ದರೂ ಸಂಘರ್ಷ ಅತಿರೇಕಕ್ಕೆ ಹೋದಾಗ ಕಾನೂನು ಸುವ್ಯವಸ್ಥೆ ಕೈಬಿಟ್ಟು ಹೋಗಬಹುದು ಎಂದು ಒಂದು ಹೆಜ್ಜೆ ಹಿಂದೆ ಇಟ್ಟಿದೆ. ವಿಪಕ್ಷ ಕಾಂಗ್ರೆಸ್ಸಿಗೆ ಏನು ಮಾಡಬೇಕೆಂದು ಅರ್ಥ ಆಗುತ್ತಿಲ್ಲ. 

ವಿವಾದಗಳು ನೈಸರ್ಗಿಕವಾದ ಅಭಿಪ್ರಾಯ ಭೇದದಿಂದ ಹುಟ್ಟಿಕೊಂಡರೂ ಅವು ಬೆಳೆಯುವ ಮಾರ್ಗಗಳಿಗೆ ನಿಶ್ಚಿತ ರಾಜಕೀಯ ಆಯಾಮಗಳಿರುತ್ತವೆ. ಹೀಗಾಗಿ ಸಹಜವಾಗಿ ಹೊತ್ತಿಕೊಂಡ ಬೆಂಕಿಗೆ ತುಪ್ಪದ ಆಸರೆ ದೊರೆಯುತ್ತದೆ. ಆಗ ಅದು ನಂದುವ ಬದಲು ಒಂದು ತಲೆಮಾರಿನ ಭವಿಷ್ಯವನ್ನು ಸುಟ್ಟು ಕರಕಲು ಮಾಡುತ್ತದೆ. ಯಾವುದೇ ದ್ವಂದ್ವ ಅಭಿಪ್ರಾಯ ಇರುವ ವಿವಾದಗಳು ಪ್ರಜಾಪ್ರಭುತ್ವದಲ್ಲಿ ಕಾನೂನು ಮಾರ್ಗದ ಮೂಲಕ ಅಂತ್ಯವಾಗಬೇಕೇ ಹೊರತು, ಕಲಿಯುವ ಮಕ್ಕಳಲ್ಲೇ ಎರಡು ಗುಂಪುಗಳಾಗಿ ಒಂದು ಗುಂಪು ‘ಜೈ ಶ್ರೀರಾಮ’ ಎನ್ನುವುದು, ಇನ್ನೊಂದು ಗುಂಪು ‘ಅಲ್ಲಾಹೋ ಅಕ್ಬರ್‌’ ಎನ್ನುತ್ತಾ ಹೊರಟರೆ ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ನಡೆಯುವಂತೆ ಇಲ್ಲೂ ಎರಡು ಧರ್ಮಗಳ ನಡುವೆ ನಾಗರಿಕ ಯುದ್ಧದ ಸ್ಥಿತಿಗೆ ತಲುಪುತ್ತವೆಯೇ ಹೊರತು ಬೇರೇನೂ ಸಾಧ್ಯವಾಗುವುದಿಲ್ಲ.

ಯಾವುದೇ ಒಂದು ನಿರ್ಣಯದ ಪರ ಮತ್ತು ವಿರುದ್ಧ ಮಾತನಾಡುವ, ಅನಂತರ ಪ್ರತಿಭಟನೆ ನಡೆಸುವ ಹಕ್ಕನ್ನು ಈ ನೆಲದ ಸಂಸ್ಕೃತಿಯ ಧರ್ಮ ಜಿಜ್ಞಾಸೆಗಳ ಬುನಾದಿಯ ಮೇಲೆ ಮತ್ತು ಕೆಲ ಅನಿಷ್ಟಗಳ ತೊಲಗಿಸುವಿಕೆಯ ಹಿನ್ನೆಲೆಯಲ್ಲಿ ರಚಿತವಾದ ನಮ್ಮ ಸಂವಿಧಾನ ಎಲ್ಲರಿಗೂ ಕೊಟ್ಟಿದೆ. ಆದರೆ ಅದರ ಅರ್ಥ ಬೀದಿಯಲ್ಲಿ ಹೆಣ್ಮಕ್ಕಳನ್ನು ಬೆದರಿಸುವ ರೀತಿಯಲ್ಲಿ, ಹೆದರಿಸುವ ಭಾಷೆಯಲ್ಲಿ ವಾಗ್ವಾದ ನಡೆಸುವ ಹಕ್ಕನ್ನು ಯಾರು ಯಾರಿಗೂ ಕೊಟ್ಟಿಲ್ಲ. ಪ್ರಾಚೀನ ಕಾಲದಲ್ಲಿ ಯಾವುದೇ ದ್ವಂದ್ವ ಮತ್ತು ವಿವಾದದ ಅಂತ್ಯ ರಾಜನ ಆಸ್ಥಾನದಲ್ಲಿ ಆಗುತ್ತಿತ್ತು.

UP Election: ಓವೈಸಿ ಪಡೆಯುವ ಒಂದೊಂದು ಮತವೂ ಅಖಿಲೇಶ್ ಪಾಲಿಗೆ ನಷ್ಟ, ಯೋಗಿಗೆ ಲಾಭ

ಈಗಿನ ಕಾಲದಲ್ಲಿ ಅವು ಒಂದೋ ಶಾಸನ ಸಭೆಯಲ್ಲಿ ನಿರ್ಣಯ ಆಗಬೇಕು, ಇಲ್ಲವೇ ನ್ಯಾಯಾಲಯಗಳ ಮೂಲಕ ಇತ್ಯರ್ಥ ಆಗಬೇಕು. ಅದು ಬಿಟ್ಟು ಇಂಥ ಧರ್ಮ ಸೂಕ್ಷ್ಮ ವಿಷಯವನ್ನು ಕೆಲ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಬಳಸಿಕೊಳ್ಳಲು ಹೊರಟರೆ ಅನರ್ಥವಾದೀತು.

ಕೇರಳ ಹೈಕೋರ್ಟ್‌ ಏನು ಹೇಳಿತ್ತು?

2018ರಲ್ಲಿ ಕೇರಳದ ತಿರುವನಂತಪುರಂನ ಇಬ್ಬರು ಬಾಲಕಿಯರು ಕ್ರಿಶ್ಚಿಯನ್‌ ಶಾಲೆಯೊಂದರಲ್ಲಿ ಪೂರ್ಣ ತೋಳಿನ ಮೇಲಂಗಿ ಮತ್ತು ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಿದ ಬಗ್ಗೆ ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಮೊಹಮ್ಮದ್‌ ಮುಷ್ತಾಕ್‌ ‘ಒಂದು ಸಂಸ್ಥೆಯ ನಿಯಮಗಳು ಹಾಗೂ ಹಕ್ಕುಗಳು ಮತ್ತು ವ್ಯಕ್ತಿಯ ಧಾರ್ಮಿಕ ಹಕ್ಕಿನ ಪ್ರಶ್ನೆ ಬಂದಾಗ ಯಾವುದೇ ಸಂಸ್ಥೆಯ ನಿಯಾಮಾವಳಿ ಪಾಲನೆ ಮುಖ್ಯವಾಗುತ್ತದೆ. ಬೇಕಿದ್ದಲ್ಲಿ ಅದನ್ನು ಒಪ್ಪದ ವ್ಯಕ್ತಿಗಳಿಗೆ ಅಲ್ಲಿಂದ ಹೊರಗೆ ಹೋಗುವ ಅಧಿಕಾರ, ಸ್ವಾತಂತ್ರ್ಯ ಎರಡೂ ಇರುತ್ತದೆ. ಅದು ಬಿಟ್ಟು ಸಂಸ್ಥೆಯ ನಿಯಮಗಳನ್ನು ಪಕ್ಕಕ್ಕಿಟ್ಟು ಧರ್ಮ ವಿಶೇಷದ ಹಕ್ಕುಗಳನ್ನು ಅನ್ವಯಿಸಿಕೊಳ್ಳುವುದು ಕಾನೂನು ಸಮ್ಮತ ಅಲ್ಲ’ ಎಂದು ಹೇಳಿದ್ದರು.

ಅಷ್ಟೇ ಅಲ್ಲ ಕೇರಳದಲ್ಲಿ ಅಧಿಕಾರ ನಡೆಸುತ್ತಿರುವ ಕಮ್ಯುನಿಸ್ಟರ ಸರ್ಕಾರ ಕೂಡ ಶಾಲೆಯ ಕೆಡೆಟ್‌ ಕೋರ್‌ನಲ್ಲಿ ಧರ್ಮ ಸಂಕೇತವಾದ ಹಿಜಾಬನ್ನು ಧರಿಸಲು ಅವಕಾಶ ಇಲ್ಲ ಎಂದು ಹೇಳಿತ್ತು. ಆದರೆ ಕೇರಳ ಹೈಕೋರ್ಟ್‌ನ ತೀರ್ಮಾನ ಕರ್ನಾಟಕದಲ್ಲಿ ಪಾಲನೆ ಆಗಬೇಕು ಅಂತಿಲ್ಲ. ಹೀಗಾಗಿ ಈಗಿನ ವಿವಾದ ಪರಿಹಾರಕ್ಕೆ ಮೊದಲಿಗೆ ಕರ್ನಾಟಕ ಹೈಕೋರ್ಟ್‌ನ ವಿಸ್ತೃತ ಪೀಠ, ಆನಂತರ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವೇ ಅಂತಿಮ ಕಾನೂನು ಟಿಪ್ಪಣಿ ಮಾಡಬೇಕಾಗುತ್ತದೆ.

ಯುರೋಪಿನಲ್ಲಿ ಏನಾಗಿತ್ತು?

ಯುರೋಪಿನಲ್ಲಿ ಕೂಡ ಅನೇಕ ರಾಷ್ಟ್ರಗಳಲ್ಲಿ ಹಿಜಾಬ್‌, ಬುರ್ಖಾ ಮತ್ತು ನಕಾಬನ್ನು ಕೆಲಸಕ್ಕಾಗಿ, ಶಿಕ್ಷಣಕ್ಕಾಗಿ ಧರಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಗಳು ವಿವಾದದ ಸ್ವರೂಪವನ್ನು ಪಡೆದಿವೆ. ಅಮೆರಿಕದ ಮೇಲಿನ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಯುರೋಪ್‌ನಲ್ಲಿ ಮುಸ್ಲಿಂ ವಲಸಿಗರ ಸಂಖ್ಯೆ ಹೆಚ್ಚಳದ ಬಗ್ಗೆ ಆಕ್ರೋಶ ಪುಟಿದು ಒಡೆದಾಗ ಶುರುವಾಗಿದ್ದೇ ಬುರ್ಖಾ ಮತ್ತು ಹಿಜಾಬ್‌ ವಿವಾದ. ಆಸ್ಟ್ರಿಯಾ, ಫ್ರಾನ್ಸ್‌, ಇಟಲಿ, ಬೆಲ್ಜಿಯಂ, ಜರ್ಮನಿ, ಸ್ಪೇನ್‌ಗಳಲ್ಲಿ ಅಲ್ಲಿನ ಸ್ಥಳೀಯ ಸರ್ಕಾರಗಳ ಹಿಜಾಬ್‌ ನಿಷೇಧ ನಿರ್ಣಯಗಳನ್ನು ಅಲ್ಲಿನ ಮಾನವ ಅಧಿಕಾರ ನ್ಯಾಯಾಲಯಗಳು ಎತ್ತಿ ಹಿಡಿದಿವೆ. ಜರ್ಮನಿಯ ಮಕ್ಕಳ ಪಾಲನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೊದಲು ಹಿಜಾಬ್‌ ಧರಿಸುತ್ತಿರಲಿಲ್ಲ. ಆದರೆ ರಜೆಯಲ್ಲಿ ಪಾಲಕರ ಮನೆಗೆ ಹೋಗಿ ಬಂದ ಮೇಲೆ ಹಿಜಾಬ್‌ ಧರಿಸತೊಡಗಿದಳು.

ಸಂಸ್ಥೆಯವರು ಅವಳನ್ನು ಕೆಲಸದಿಂದ ಕಿತ್ತೊಗೆದಾಗ ಆಕೆ ಕೋರ್ಟ್‌ ಮೊರೆ ಹೋದಳು. ಸ್ಥಳೀಯ ನ್ಯಾಯಾಲಯವು ಸಂಸ್ಥೆಯ ಆದೇಶವನ್ನು ಎತ್ತಿ ಹಿಡಿಯಿತು. ಅಷ್ಟೇ ಅಲ್ಲ ಯುರೋಪಿಯನ್‌ ಯೂನಿಯನ್‌ನ ಉನ್ನತ ನ್ಯಾಯಾಲಯ ಕೂಡ ಹಿಜಾಬ್‌ ಸೇರಿದಂತೆ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸುವ ಅಧಿಕಾರ ಸರ್ಕಾರ ಮತ್ತು ಸಂಸ್ಥೆಗಳಿಗಿದೆ ಎಂದು ಹೇಳಿತು. 2014ರಲ್ಲಿ ಕೂಡ ಯುರೋಪಿಯನ್‌ ನ್ಯಾಯಾಲಯ ಫ್ರಾನ್ಸ್‌ ಸರ್ಕಾರದ ಬುರ್ಖಾ ನಿಷೇಧ ಆದೇಶವನ್ನು ಎತ್ತಿ ಹಿಡಿಯುತ್ತ ‘ಎಲ್ಲರೂ ಕೂಡಿ ಬಾಳಲು ಕೆಲವೊಂದು ನಿಯಮಗಳ ಜಾರಿ ಅತ್ಯವಶ್ಯ’ ಎಂದು ಹೇಳಿತು.

ಕರ್ನಾಟಕದಲ್ಲಿ ಹೊತ್ತಿದ ಹಿಜಾಬ್ ಕಿಡಿ ಯುಪಿ ಚುನಾವಣೆ ಮೇಲೆ ಪ್ರಭಾವ ಬೀರುತ್ತಾ?

ಯುರೋಪಿನಲ್ಲಿ ಪಶ್ಚಿಮ ಏಷ್ಯಾದಿಂದ ವಲಸೆ ಹೋದ ಮುಸ್ಲಿಂ ಜನಾಂಗದ ಸಂಖ್ಯೆ ಹೆಚ್ಚಿದಂತೆ ಈ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಹಿಟ್ಲರ್‌ನ ಅತಿರೇಕದ ನಂತರ ನಡೆದ 2ನೇ ಮಹಾಯುದ್ಧದಲ್ಲಿ ಸೋತು ಒಡೆದು ಅಮೆರಿಕ ಮತ್ತು ಸೋವಿಯತ್‌ ಕೈಯಲ್ಲಿ ಸಿಕ್ಕು ನರಳಿದ ಬಳಿಕ ‘ಬಲಪಂಥೀಯತೆ ಎಂದರೆ ತಪ್ಪು, ನಿಷಿದ್ಧ, ಬೇಡವೇ ಬೇಡ’ ಎಂಬ ವಾತಾವರಣವಿದ್ದ ಜರ್ಮನಿಯಲ್ಲಿ ಕೂಡ ಕಳೆದ ಹತ್ತು ವರ್ಷಗಳಲ್ಲಿ ಬಲಪಂಥೀಯ ರಾಷ್ಟ್ರವಾದಿ ಎಂದು ಹೇಳಿಕೊಳ್ಳುವ ಪಕ್ಷಗಳು ಮರಳಿ ಟಿಸಿಲು ಒಡೆಯುತ್ತಿವೆ.

ರಾಜಕೀಯ ಲಾಭ-ನಷ್ಟಗಳು

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಹುಸಂಖ್ಯಾತ, ಅಲ್ಪಸಂಖ್ಯಾತ ದ್ವಂದ್ವಗಳ ಯಾವುದೇ ವಿಷಯಕ್ಕೆ ನಾನಾ ರಾಜಕೀಯ ಆಯಾಮಗಳು ಇರುವುದು ಸಹಜ. ರಾಜಕೀಯವಾಗಿ ಲಾಭ ಇದ್ದ ಮೇಲೆ ತಾನೆ ಸಣ್ಣ ವಿಷಯ ಇವತ್ತು ರಾಜಕೀಯ ರೂಪ ತಾಳಿ ದೇಶ ವಿದೇಶದಲ್ಲಿ ಚರ್ಚೆ ಆಗುತ್ತಿರುವುದು. ಕೇರಳದಿಂದ ಬಂದು ಕರಾವಳಿಯಲ್ಲಿ ಗಟ್ಟಿಯಾಗಿ ಬೇರು ಬಿಡಲು ನೋಡುತ್ತಿರುವ ಇಸ್ಲಾಮಿಕ್‌ ವಿಚಾರ ಹೇಳುವ ಕೆಲ ಪಕ್ಷಗಳು ಈ ವಿವಾದ ಕೆದಕಿ, ಹಿಂದೂಗಳನ್ನು ಕೆರಳಿಸಿ ಅದನ್ನು ತೋರಿಸಿ ಮುಸ್ಲಿಂ ಧ್ರುವೀಕರಣ ಮಾಡಿ ವೋಟು ವೃದ್ಧಿಸಿಕೊಂಡು ಸೀಟು ಗೆಲ್ಲುವ ಪ್ರಯತ್ನದ ಭಾಗವೇ ಈ ವಿವಾದ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.

ಓವೈಸಿ ಹೈದರಾಬಾದ್‌ನಿಂದ ಹೋಗಿ ಬಿಹಾರದಲ್ಲಿ 5 ಸೀಟು ಗೆಲ್ಲಬಹುದಾದರೆ ಇಂಥ ದ್ವಂದ್ವಗಳನ್ನು ಹೆಕ್ಕಿ ದೊಡ್ಡದು ಮಾಡಿ ಉಳ್ಳಾಲ, ಮೈಸೂರು, ಕಲಬುರ್ಗಿ, ವಿಜಯಪುರ, ಬೆಳಗಾವಿ, ಭಟ್ಕಳ, ಧಾರವಾಡ, ಬೆಂಗಳೂರುಗಳಲ್ಲಿ ಮುಸ್ಲಿಂ ಭಾವನೆಗಳನ್ನು ಕೆರಳಿಸಿ ಒಂದು ಕೈ ಏಕೆ ನೋಡಬಾರದು ಎನ್ನುವ ತಂತ್ರ ಇರುವಂತೆ ಕಾಣುತ್ತಿದೆಯೇ ಹೊರತು, ಹಿಜಾಬ್‌ ಮತ್ತು ಬುರ್ಖಾ ಬಗ್ಗೆ ನ್ಯಾಯಾಲಯದ ಟಿಪ್ಪಣಿ, ವ್ಯಾಖ್ಯಾನ ಏನಿರಬಹುದು ಎಂಬುದು ಗೊತ್ತಿಲ್ಲದ ವಿಷಯ ಏನಲ್ಲ. ಇನ್ನು ಮೊದಮೊದಲಿಗೆ ಇದರಿಂದ ರಾಜಕೀಯ ಲಾಭ ಇದೆ ಎಂದು ಅಧಿಕಾರದಲ್ಲಿರುವ ಬಿಜೆಪಿಗೆ ಅನಿಸಿದ್ದರೂ ಸಂಘರ್ಷ ಅತಿರೇಕಕ್ಕೆ ಹೋದಾಗ ಕಾನೂನು ಸುವ್ಯವಸ್ಥೆ ಕೈಬಿಟ್ಟು ಹೋಗಬಹುದು ಎಂದು ಒಂದು ಹೆಜ್ಜೆ ಹಿಂದೆ ಇಟ್ಟಿದೆ. ವಿಪಕ್ಷದಲ್ಲಿರುವ ಕಾಂಗ್ರೆಸ್ಸಿಗೆ ಏನು ಮಾಡಬೇಕು ಎಂದು ಅರ್ಥ ಆಗುತ್ತಿಲ್ಲ.

ಹುಬ್ಬಳ್ಳಿಯ ಈದ್ಗಾ ವಿಷಯದಲ್ಲಿ ಮಾಡಿದಂತೆ ಅತಿರೇಕಕ್ಕೆ ಹೋದರೆ ಹಿಂದೂ ಧ್ರುವೀಕರಣ ಆದೀತು, ಸುಮ್ಮನೆ ಕುಳಿತರೆ ಮುಸ್ಲಿಂ ವೋಟು ಕಮ್ಮಿ ಆಗಬಹುದು ಎಂಬ ಆತಂಕದಲ್ಲಿ ಸುಮ್ಮನೆ ಬಿಜೆಪಿ ವಿರುದ್ಧ ಒಂದಿಷ್ಟುಹೇಳಿಕೆಗಳಿಗೆ ಸೀಮಿತವಾಗಿದೆ. ಮೊದಲೆಲ್ಲಾ ಈ ಕೋಮು ಸ್ವರೂಪದ ಚರ್ಚೆಗಳು ನಗರ ಪ್ರದೇಶಗಳಲ್ಲಿ ಮಾತ್ರ ನಡೆದು ವೋಟಿನ ಸ್ವರೂಪ ತಾಳುತ್ತಿದ್ದವು. ಆದರೆ ಈಗ ಹಾಗಲ್ಲ ನೋಡಿ, ಮೊದಲು ಟೀವಿ ಮತ್ತು ಈಗ ಮೊಬೈಲ್‌ಗಳು ಎಲ್ಲವನ್ನು ಹಳ್ಳಿಗಳ ಪಡಸಾಲೆಗೆ ಒಯ್ದಿವೆ.

Presidential Election: ಸಂಭಾವ್ಯರ ರೇಸ್‌ನಲ್ಲಿ ಕನ್ನಡತಿ ಸುಧಾಮೂರ್ತಿ, ಸಚಿವೆ ನಿರ್ಮಲಾ ಸೀತಾರಾಮನ್?

ಗೌಡ-ವೆಂಕಯ್ಯ ವಿನಯ ವಿನಿಮಯ

ಲತಾ ಮಂಗೇಶ್ಕರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ರಾಜ್ಯಸಭಾ ಕಲಾಪ ಮುಂದೂಡಿಕೆ ಆದಾಗ ಚೀಟಿ ಒಂದನ್ನು ಕಳುಹಿಸಿದ ವೆಂಕಯ್ಯ ನಾಯ್ಡು, ‘ಮೊಮ್ಮಗಳ ಮದುವೆ ಆರತಕ್ಷತೆ ಆಮಂತ್ರಣ ಕೊಡಬೇಕಾಗಿದೆ’ ಎಂದಾಗ ದೇವೇಗೌಡರು, ‘ನಾನೇ ವೆಂಕಯ್ಯ ಕಚೇರಿಗೆ ಬರುತ್ತೇನೆ’ ಎಂದು ಹೊರಟರು. ಆದರೆ ವಯೋವೃದ್ಧ ಗೌಡರು ತಮ್ಮ ಕಚೇರಿಗೆ ಬರುವುದಾಗಿ ಹೇಳಿದ್ದರಿಂದ ಮುಜುಗರಕ್ಕೊಳಗಾದ ವೆಂಕಯ್ಯ ಅಲ್ಲಿದ್ದ ಅಧಿಕಾರಿಗಳಿಗೆ ‘ಸದನದ ಕಲಾಪ ನಡೆಯದೇ ಇದ್ದಾಗ ಸಭಾಪತಿಯು ಸದಸ್ಯರ ಬಳಿ ಹೋಗಬಹುದೇ’ ಎಂದು ಕೇಳಿ ತಿಳಿದುಕೊಂಡು ಕೆಳಗಡೆ ಹೋಗಿದ್ದಾರೆ. ಆದರೆ ದೇವೇಗೌಡರು ನಡೆಯಲು ಆರಂಭಿಸಿದ್ದರಿಂದ ವೆಂಕಯ್ಯ ಮತ್ತು ಗೌಡರು ಮೆಲ್ಲನೆ ಹೆಜ್ಜೆ ಹಾಕುತ್ತಾ ಸಭಾಪತಿಗಳ ಕಚೇರಿಗೆ ಹೋಗಿದ್ದಾರೆ. ಅಲ್ಲಿ ಮೊಮ್ಮಗಳ ಆರತಕ್ಷತೆ ಆಮಂತ್ರಣ ನೀಡಿದ ವೆಂಕಯ್ಯ, ಗೌಡರ ಜೊತೆ ಬಹಳಷ್ಟುಹರಟೆ ಹೊಡೆದರಂತೆ. ಅಧಿಕಾರ ಇರಲಿ ಬಿಡಲಿ ದೇವೇಗೌಡರಿಗೆ ದಿಲ್ಲಿಯಲ್ಲೊಂದು ಖದರ್‌ ಇದೆ ಬಿಡಿ.

ರಾಹುಲ್‌ ಏಕೆ ಸದನದಲ್ಲಿರೋದಿಲ್ಲ?

ಸಂಸತ್ತಿನಲ್ಲಿ ಯಾವಾಗಾದರೊಮ್ಮೆ ಮಾತನಾಡಿ ಸುಮ್ಮನಾಗುವ ರಾಹುಲ್‌ ಗಾಂಧಿ, ಮುಖ್ಯವಾದ ಏನಾದರೂ ವಿಷಯ ಇದ್ದಾಗ ಮಾತ್ರ ಕಾಣುವುದೇ ಇಲ್ಲ. ಮೊನ್ನೆ ಮೊನ್ನೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಅದಕ್ಕೆ ಉತ್ತರ ಕೊಡುವಾಗ ಮಾತ್ರ ಸದನಕ್ಕೆ ಬರಲಿಲ್ಲ. ರಾಹುಲ್‌ ಸದನಕ್ಕೆ ಬಂದು ಮೋದಿ ಭಾಷಣದ ವೇಳೆ ಇದ್ದರೆ ಕೆಲ ಪ್ರಶ್ನೆಗಳನ್ನು ಕೇಳಿ ಸರ್ಕಾರವನ್ನು ಪೇಚಿಗೆ ಸಿಲುಕಿಸಬಹುದು ಎಂದು ಕಾಂಗ್ರೆಸ್‌ ಸಂಸದರು ಹೋಗಿ ಹೇಳಿದರೂ ರಾಹುಲ್‌ ಮನೆಯಲ್ಲಿ ಕುಳಿತು ಟೀವಿಯಲ್ಲಿ ಮೋದಿ ಭಾಷಣ ಕೇಳಿದರೇ ಹೊರತು ಸದನಕ್ಕೆ ಬರಲಿಲ್ಲ. ಮೋದಿ ಇದನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸದೇ ಬಿಡಲಿಲ್ಲ. ‘ಕೆಲವರು ಏನೇನೋ ಮಾತನಾಡಿ ಹೋಗಿ ಬಿಡುತ್ತಾರೆ. ನಿಮ್ಮಂಥವರು ಅದರ ತಾಪ ಎದುರಿಸಬೇಕು’ ಎಂದು ಚುಚ್ಚಿಯೇ ಚುಚ್ಚಿದರು. ಆದರೆ ರಾಹುಲ್‌ ಮಾತನಾಡುವಾಗ ಬಿಜೆಪಿ ಸಂಸದರು ಅಡ್ಡಿಪಡಿಸುವುದಕ್ಕೆ ಮೋದಿಯವರು ಹಿರಿಯ ಸಚಿವರ ಎದುರು ಬೇಸರ ಸೂಚಿಸಿದರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!