ಮುಂದಿನ ದಿನಗಳಲ್ಲಾದರೂ ಮೇಕೆದಾಟು ಯೋಜನೆ ಸೇರಿ ನಮ್ಮ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಕುಮಾರಸ್ವಾಮಿಯವರು ಮುಂದಾಗಲಿ ಎಂದು ಒತ್ತಾಯಿಸುತ್ತೇನೆ: ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ
ರಾಮನಗರ(ಜು.26): ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯದ ಎನ್ ಡಿಎ ಮೈತ್ರಿಕೂಟದ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಸಫಲರಾಗಿದ್ದಾರೆ, ಆದರೆ, ನಮ್ಮ ರಾಜ್ಯದ ಜೆಡಿಎಸ್ ಪ್ರಾದೇಶಿಕ ಪಕ್ಷದ ಎಚ್.ಡಿ. ಕುಮಾರಸ್ವಾಮಿಯವರು ವಿಫಲರಾಗಿದ್ದಾರೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್ .ಸಿ.ಬಾಲಕೃಷ್ಣ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬಾಲಕೃಷ್ಣರವರು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಮ್ಮ ರಾಜ್ಯಕ್ಕೆ ನಿರಾಸೆ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರಲ್ಲದೇ ಕೇಂದ್ರ ಸಚಿವಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿ ಕಾಲೆಳೆದಿದ್ದಾರೆ.
ಡಿಕೆಶಿ ಭೇಟಿಗೆ ಸಮಯ ಕೇಳಿದ ವಿಜಯಲಕ್ಷ್ಮೀ; ದರ್ಶನ್‌ಗೆ ನ್ಯಾಯ ಕೊಡಿಸಲು ರೆಡಿ ಎಂದ ಡಿಕೆಶಿ!
ಎಚ್.ಸಿ.ಬಾಲಕೃಷ್ಣ ಅತಿ ಹೆಚ್ಚು ಸಂಸದರನ್ನು ರಾಜ್ಯದಿಂದ ಎನ್ ಡಿಎಗೆ ಜನತೆ ಆಯ್ಕೆ ಮಾಡಿದ್ದರು, ಆದರ ಜೊತೆಗೆ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ, ನಮ್ಮ ರಾಜ್ಯಕ್ಕೆ ಬಂಪರ್ ಕೊಡುಗೆ ಕೊಡಿಸಲು ಪ್ರಯತ್ನ ಮಾಡುತ್ತಾರೆ ಎಂದು ನಿರೀಕ್ಷೆ ಇತ್ತು. ಅದರಲ್ಲೂ ಬೆಂಗಳೂರು ಮಹಾನಗರ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಾರೆ. ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ 'ಮೇಕೆದಾಟು' ಜಾರಿಗೆ ಅನುಮತಿ ಸಿಗುತ್ತದೆ ಎಂದು ಆಸೆ ಇತ್ತು. ಈ ಎಲ್ಲಾ ವಿಚಾರದಲ್ಲೂ ನಿರಾಸೆ ಮೂಡಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ನೋವಾಗಿದೆ ಎಂದಿದ್ದಾರೆ.
ವಿನಾಕಾರಣ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದು ಬಿಟ್ಟು, ಈ ಹಿಂದೆ ಕೇಂದ್ರ ಮಂತ್ರಿಯಾಗಿದ್ದ ದಿವಂಗತ ಅನಂತ ಕುಮಾರ್ ಅವರು ತಮ್ಮ ಆಡಳಿತ ಅವಧಿಯಲ್ಲಿ ರಾಜಕೀಯವನ್ನು ಹೊರತುಪಡಿಸಿ, ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಮನ್ವಯ ಸಾಧಿಸಿ, ರಾಜ್ಯದ ಅನುದಾನ ಬಿಡುಗಡೆ ಮಾಡಲು ಶ್ರಮಿಸುತ್ತಿದ್ದರು. ಬಹುಶಃ ಮುಂದಿನ ದಿನಗಳಲ್ಲಾದರೂ ಆ ದಿಕ್ಕಿನಲ್ಲಿ ಮೇಕೆದಾಟು ಯೋಜನೆ ಸೇರಿ ನಮ್ಮ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಕುಮಾರಸ್ವಾಮಿಯವರು ಮುಂದಾಗಲಿ ಎಂದು ಒತ್ತಾಯಿಸುತ್ತೇನೆ ಎಂದು ಬಾಲಕೃಷ್ಣ ಬರೆದುಕೊಂಡಿದ್ದಾರೆ.