ಆರ್.ಆರ್..ನಗರ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರು ಜಾತಿ ಕಾರ್ಡ್ ಪ್ಲೇ ಮಾಡಿರುವುದಕ್ಕೆ ಮಾಜಿ ಪ್ರಧಾನಿ ದೇವೇಗೌಡ್ರು ಆಡಿದ ಮಾತುಗಳಿವು.
ಬೆಂಗಳೂರು (ಅ. 11): ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಆರ್.ಆರ್. ನಗರದಲ್ಲಿ ಡಿಕೆ ಶಿವಕುಮಾರ್ ಅವರಿಂದ ಜಾತಿ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿದರು.
ರಾಜರಾಜೇಶ್ವರಿ ನಗರ ಜೆಡಿಎಸ್ ಅಭ್ಯರ್ಥಿ ಯಾರು..?
ನನಗೂ ಸಾಕಷ್ಟು ಅನುಭವ ಇದೆ. ಆದರೆ, ನಾನು ಮಾತಾಡೋಕೆ ಹೋಗುವುದಿಲ್ಲ. ಅವರು ಹೇಳಲಿ, ಅವರಿಗೆ ಅಧಿಕಾರ ಇದೆ. ಆದರೆ, ಅಂತಿಮವಾಗಿ ಮತದಾರರು ತೀರ್ಮಾನ ಮಾಡ್ತಾರೆ. ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಇದನ್ನು ನಾನು ಸಾವಿರ ಬಾರಿ ಹೇಳಿದ್ದೇನೆ ಎಂದು ತಿಳಿಸಿದರು.
ನಮ್ಮ ಪಕ್ಷವನ್ನ ಯಾರಾದರೂ ಒಡೆಯುತ್ತಾರೆ ಎಂದರೆ ಅದು ಅವರ ಭ್ರಮೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷವನ್ನು ಒಡೆಯಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷವನ್ನು ಯಾರೇ ಬಂದರೂ ತುಳಿಯಲು ಆಗುವುದಿಲ್ಲ. ಯಾರು ಏನು ಬೇಕಾದರೂ ಹೇಳಲಿ. ನಮ್ಮ ಪಕ್ಷ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ ಎಂದು ಕಾಂಗ್ರೆಸ್-ಬಿಜೆಪಿಗೆ ದೇವೇಗೌಡ ತಿರುಗೇಟು ನೀಡಿದರು.
ದೇಶದಲ್ಲಿ ಮುಸ್ಲಿಂ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ನಮ್ಮ ಸರ್ಕಾರ. ಸಾಮಾಜಿಕ ನ್ಯಾಯ ಅನುಷ್ಠಾನ ಮಾಡಿದ್ದು ನಮ್ಮ ಸರ್ಕಾರ. ನನ್ನ ಹೆಸರಲ್ಲಿ ಗೌಡ ಅಂತ ಸೇರಿಕೊಂಡಿದೆ. ಹಾಗಂತ ನಿಂದನೆ ಮಾಡೋದು ಸರಿಯಾ? ನಿಂದಕರಿರಬೇಕಯ್ಯ ಅಂತ ಬಸವಣ್ಣನವರು ಹೇಳಿದ್ದಾರೆ. ನಿಂದನೆ ಮಾಡಿದ್ದಕ್ಕೆ ಅವರೇ ಅನುಭವಿಸುತ್ತಾರೆ ಬಿಡಿ. ಅವರು ಚುನಾವಣೆಯಲ್ಲಿ ಗೆಲ್ಲೋಕೆ, ಅವರ ಅಭ್ಯರ್ಥಿ ಗೆಲ್ಲಿಸೋಕೆ ಯಾವ ಪ್ರಯೋಗ ಮಾಡ್ತಾರೋ ಮಾಡಲಿ. ಅದಕ್ಕೆ ಅವರು ಸ್ವತಂತ್ರರು ಎಂದರು.