ನಾನಂತೂ ಸಚಿವನಾಗಿ ಸುರಕ್ಷಿತ: ಎಚ್.ಸಿ.ಮಹದೇವಪ್ಪ ಮಾರ್ಮಿಕ ಮಾತು

Published : Nov 02, 2025, 06:18 AM IST
HC Mahadevappa

ಸಾರಾಂಶ

ಸಚಿವ ಸ್ಥಾನ ಯಾವಾಗ ಏನು ಅನ್ನೋದನ್ನು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನಾನಂತೂ ಸೇಫ್ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ನೀವು ಸಚಿವರಾಗಿಯೇ ಇರುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮೈಸೂರು (ನ.02): ಸಚಿವ ಸ್ಥಾನ ಯಾವಾಗ ಏನು ಅನ್ನೋದನ್ನು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನಾನಂತೂ ಸೇಫ್ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ನೀವು ಸಚಿವರಾಗಿಯೇ ಇರುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನಂತೂ ಸೇಫ್ ಎಂದು ಮಾರ್ಮಿಕವಾಗಿ ಉತ್ತರ ನೀಡಿದರು. ನವೆಂಬರ್ ಕ್ರಾಂತಿ ಬಗ್ಗೆ ಚರ್ಚೆ ಬೇಡ ಅದಕ್ಕೆ ಫುಲ್‌ಸ್ಟಾಪ್ ಇಟ್ಟುಬಿಡಿ. ಕ್ರಾಂತಿ ಏನೂ ನಡೆಯೋದಿಲ್ಲ. ಕ್ರಾಂತಿ ಎನ್ನೋದು ಕೇವಲ ಬ್ರಾಂತಿ ಅಷ್ಟೇ. ಯಾವಾಗ ಏನು ಆಗಬೇಕು ಎಂಬುದನ್ನು ನಿರ್ಧಾರ ಮಾಡೋದು ಹೈಕಮಾಂಡ್. ಹೈಕಮಾಂಡ್ ಯಾವಾಗ ಏನು ಹೇಳುತ್ತೋ ಯಾರಿಗೆ ಗೊತ್ತು. ಹೈಕಮಾಂಡ್ ಇದುವರೆಗೂ ಏನನ್ನೂ ಹೇಳಿಲ್ಲ. ಹೀಗಾಗಿ ಯಾವ ಕ್ರಾಂತಿಯೂ ಇಲ್ಲ. ಯಾರ್ಯಾರು ಯಾಕೆ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.

ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು

ಕನ್ನಡ ನಾಡು, ನುಡಿ, ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೀಗಾಗಿ, ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ನಗರದ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 21ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡ ಭಾಷೆ ಆಧುನೀಕತೆಯೊಂದಿಗೆ ತನ್ನದೇ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ ಎಂದು ಬಣ್ಣಿಸಿದರು.

ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ, ಮದರಾಸ್ ಪ್ರಾಂತ್ಯ, ರಾಜಮನೆತನಗಳ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ ಮೈಸೂರು ರಾಜ್ಯ 1956ರಲ್ಲಿ ಉದಯವಾಯಿತು. ಮೈಸೂರು ರಾಜ್ಯವನ್ನು 1973 ರಲ್ಲಿ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿದ್ದರು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು. ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಗಳ ಉಳಿವು ಬೆಳವಣಿಗೆಗಾಗಿ ಶ್ರಮಿಸಿದ ಅಸಂಖ್ಯ ಜನರ ತ್ಯಾಗ ಬಲಿದಾನ ಸೇರಿವೆ. ಅವರೆಲ್ಲರ ಸೇವೆಯನ್ನು ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಕರ್ನಾಟಕ ರಾಜ್ಯದ ಏಕೀಕರಣಕ್ಕೆ ಹಲವಾರು ಮಹನೀಯರು ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು.

ಆದಿ ಕವಿ ಪಂಪನಿಂದ ಇಲ್ಲಿಯವರೆಗೂ ಅನೇಕ ಕವಿಗಳು, ಸಾಹಿತಿಗಳು ನಾಡು ನುಡಿ ಹಾಗೂ ಕನ್ನಡ ನಾಡಿನ ಕಲೆ, ಸಂಸ್ಕೃತಿಯ ಬಗೆಗೆ ಸಮೃದ್ಧ ಸಾಹಿತ್ಯ ರಚಿಸಿದ್ದಾರೆ. ಮೈಸೂರಿನ ಈ ನೆಲವು ಹಲವು ಕವಿ, ಸಾಹಿತಿಗಳು ಹಾಗೂ ಕಲಾವಿದರಿಗೆ ಜನ್ಮ ನೀಡಿದ್ದು, ಅವರ ಕನ್ನಡದ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು. ಭಾರತೀಯ ಭಾಷೆಗಳಲ್ಲಿಯೇ ಅತೀ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಭಾಷೆಯ ಸಾಹಿತಿಗಳಿಗೆ ಬಂದಿರುವುದು ಹೆಮ್ಮೆಯ ಸಂಗತಿ. ಕನ್ನಡ ಸಾರಸ್ವತ ಲೋಕವು 8 ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಕನ್ನಡ ಭಾಷೆಯ ಗರಿಮೆಯಾಗಿದೆ. ಸಾಹಿತ್ಯ, ಸಂಸ್ಕೃತಿ, ಸಂಗೀತ, ಸದಾಭಿರುಚಿ, ಸಂಪ್ರದಾಯ, ಸಂಸ್ಕಾರ ಹೀಗೆ ಯಾವುದೇ ಕ್ಷೇತ್ರದಲ್ಲೂ ನಾವು ಕಡಿಮೆಯಿಲ್ಲ. ಇಂತಹ ಪವಿತ್ರ ನೆಲದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!