Hassan ಕೆಡಿಪಿ ಸಭೆಯಲ್ಲಿ ರೇವಣ್ಣ - ಪ್ರೀತಂ ಗೌಡ ನಡುವೆ ವಾಕ್ಸಮರ: ಏಕ ವಚನದಲ್ಲೇ ಬೈಯ್ದಾಡಿಕೊಂಡ ಶಾಸಕರು..!

By BK AshwinFirst Published Nov 9, 2022, 6:33 PM IST
Highlights

ಹಾಸನದ ಕೆಡಿಪಿ ಸಭೆಯಲ್ಲಿ ಶಾಸಕ ಪ್ರೀತಂಗೌಡ ಹಾಗು ರೇವಣ್ಣ ಪರಸ್ಪರ ಏಕ ವಚನದಲ್ಲೇ ಬೈಯ್ದಾಡಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ಜಗಳ ಬಿಡಿಸಲು ಹೋದರೂ ಬಿಜೆಪಿ - ಜೆಡಿಎಸ್‌ ಶಾಸಕರು ಪರಸ್ಪರ ಆಕ್ರೋಶ ಹೊರ ಹಾಕಿದ್ದಾರೆ. 

ಹಾಸನದ ಕೆಡಿಪಿ ಸಭೆಯಲ್ಲಿ ಜೆಡಿಎಸ್‌ ನಾಯಕ ಹಾಗೂ ಹೊಳೆನರಸೀಪುರ ಶಾಸಕ ರೇವಣ್ಣ ಮತ್ತು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ನಡುವೆ ವಾಕ್ಸಮರ ನಡೆದಿದೆ. ಇಬ್ಬರು ಶಾಸಕರನ್ನು ಸಮಾಧಾನ ಮಾಡಲು ಬಂದ ಉಸ್ತುವಾರಿ ಸಚಿವ ಗೋಪಾಲಯ್ಯ ವಿರುದ್ಧವೂ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ನೀರಾವರಿ ಕೆಲಸ ಮಾಡಿಸ್ತೀನಿ ಅಂದಿದ್ರಿ, ಹತ್ತು ರುಪಾಯಿ ಕೆಲಸ ಮಾಡಿಸಿದ್ದೀರೇನ್ರಿ ಎಂದು ಕಿಡಿ ಕಾರಿದ್ದಾರೆ. ಕೆಡಿಪಿ ಸಭೆಯಲ್ಲಿ ಶಾಸಕ ಪ್ರೀತಂಗೌಡ ಹಾಗು ರೇವಣ್ಣ ಪರಸ್ಪರ ಏಕ ವಚನದಲ್ಲೇ ಬೈಯ್ದಾಡಿಕೊಂಡಿದ್ದಾರೆ. ಹಲವು ತಿಂಗಳುಗಳಿಂದ ಭವಾನಿ ರೇವಣ್ಣ, ಪ್ರೀತಂ ಗೌಡ ಹಾಗೂ ರೇವಣ್ಣ ನಡುವೆ ರಾಜಕೀಯ ಆರೋಪ - ಪ್ರತ್ಯಾರೋಪಗಳು ನಡೆಯುತ್ತಲೇ ಇದ್ದು, ಇಂದಿನ ಸಭೆಯಲ್ಲಿ ಇದು ಏಕವಚನದ ಸ್ವರೂಪ ಪಡೆದುಕೊಂಡಿದೆ. 

ಹಾಸನ- 2023 ರ ಚುನಾವಣೆ ಬರ್ಲಿ ನೋಡೋಣ ಎಂದು ರೇವಣ್ಣ ಹೇಳಿದ್ದಕ್ಕೆ, ನೀವೇ ಬನ್ನಿ ಅಂತಿದಿನಲ್ಲ, ಕೆಡಿಪಿ ಸಭೆಯಲ್ಲಿ ಯಾಕೆ ರಾಜಕಾರಣ..? ರಾಜಕಾರಣ ಹೊರಗೆ ಮಾತಾಡೊಣ ಎಂದು ಪ್ರೀತಂಗೌಡ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೆ, ಹಾಸನ ಜಿಲ್ಲಾ ಕೇಂದ್ರ ಅಂತಾ ಎಲ್ಲಾ ಇಲ್ಲಿ ಬಂದು ಎಂಎಲ್ಎ ಗಿರಿ ಮಾಡೋದಾದ್ರೆ ನಾನೇನು ಹೊಳೆನರಸೀಪುರಕ್ಕೆ ಹೋಗ್ಲಾ ಎಂದೂ ಪ್ರಶ್ನೆ ಮಾಡಿದ್ದಾರೆ. 

ಇದನ್ನು ಓದಿ: ನಮ್ಮ ಉಸಾಬರಿ ಅವರಿಗೆ ಬೇಡ, ಶಾಸಕ ಪ್ರೀತಂಗೌಡಗೆ ಟಾಂಗ್ ಕೊಟ್ಟ ಭವಾನಿ ರೇವಣ್ಣ

ಅವರು ಏನಾದ್ರು ಹೇಳಲಿ ಏನು ತನಿಖೆ ಆಗಬೇಕು ಅಂತಾ ಅರ್ಜಿ ತಗೊಳ್ಳಿ ಸಾರ್. ಏನು ಮಾಡಬೇಕು ಎಂದು ಸರ್ಕಾರದಲ್ಲಿ ತೀರ್ಮಾನ ಮಾಡಿ ಎಂದು ಉಸ್ತುವಾರಿ ಸಚಿವರಿಗೆ ಪ್ರೀತಂಗೌಡ ಸಲಹೆ ನೀಡಿದ್ದಾರೆ. ಇದಕ್ಕೆ ಉತ್ತರಿಸಿದ ರೇವಣ್ಣ ಅನ್ಯಾಯ ನಡಿತಿದೆ ಎಂದು ಸಚಿವರ ಗಮನಕ್ಕೆ ತರ್ತಾ ಇದೀನಿ, ತನಿಖೆ ಮಾಡೋದಾದ್ರೆ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಹೊಳೆನರಸೀಪುರ ಕ್ಷೇತ್ರದ ಕಾಮಗಾರಿಗಳು ಸರಿಯಾಗಿ ನಡೆದಿವೆಯಾ ರೇವಣ್ಣ ಅವರೇ ಎಂದು ಪ್ರೀತಂಗೌಡ ಪ್ರಶ್ನಿಸಿದ್ದಾರೆ. ಇದಕ್ಕೆ ಕೆಂಡಾಮಂಡಲರಾದ ರೇವಣ್ಣ ನಾಚಿಕೆಯಾಗಬೇಕು ನಿಮಗೆ ಅದಕ್ಕೆ 40% ಪರ್ಸೆಂಟ್ ಅಂತ ಜನ ಉಗಿತಿರೋದು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರೀತಂಗೌಡ, ಸಿಬಿಐಗೆ ಅಲ್ಲದಿದ್ದರೆ ಎಫ್‌ಬಿಐಗೆ ಪತ್ರ ಬರೆಯಲಿ ನಾನೇನು ಹೆದರಲ್ಲ ಎಂದಿದ್ದಾರೆ. ಹಾಗೂ, ಹಾಸನ ನಿಮಾನ ನಿಲ್ದಾಣ ಮಾಡಲು ಯಡಿಯೂರಪ್ಪ ಬರಬೇಕಾಯಿತು. ಹಾಸನ‌ ನಗರದ ಯುಜಿಡಿ ಕಾಮಗಾರಿ ಮಾಡಲು ಯಡಿಯೂರಪ್ಪ ಬರಬೇಕಾಯಿತು ಎಂದು ಪ್ರೀತಂಗೌಡ ಹರಿಹಾಯ್ದಿದ್ದಾರೆ. 

ಇದನ್ನೂ ಓದಿ: Hassan: ಮುಂದಿನ ಚುನಾವಣೆಯಲ್ಲಿ ಪರದೆ ಮೇಲೆ ಪಿಕ್ಚರ್ ತೋರಿಸ್ತೀನಿ: ಶಾಸಕ ಪ್ರೀತಂ ಗೌಡ ವಾಗ್ದಾಳಿ
 
ಇದಕ್ಕೆ ತಿರುಗೇಟು ನೀಡಿದ ರೇವಣ್ಣ, ಐಐಟಿ ಕೇಳಿದ್ದು ನಾವು, ಗಡ್ಕರಿ ಅವರನ್ನು ಕರೆದುಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿಸಿದ್ದು ದೇವೇಗೌಡರು ಎಂದಿದ್ದಾರೆ. ರೇವಣ್ಣ ಹೇಳೀಕೆಗೆ ವ್ಯಂಗ್ಯವಾಡಿದ ಪ್ರೀತಂ ಗೌಡ, ಮೋದಿಯವರ ಬಳಿ ಹೋಗಿ ಕೆಲಸ ಮಾಡಿಸಿಕೊಂಡಿಲ್ವಾ, ಗಡ್ಕರಿಯನ್ನು ಮಂತ್ರಿ ಮಾಡಿದ್ದು ಮೋದಿ ಎಂದು ಹೇಳಿದ್ದಾರೆ. ಇದಕ್ಕೆ ಮತ್ತೆ ಆಕ್ರೋಶ ಹೊರಹಾಕಿದ ರೇವಣ್ಣ ನಾನು ಮೋದಿ ಹತ್ರ ಬಿಕ್ಷೆ ಬೇಡಲು ಹೋಗಿರಲಿಲ್ಲ, ಜಿಲ್ಲೆಯ ಕೆಲಸದ ಬಗ್ಗೆ ಹೋಗಿದ್ದೆ ಎಂದು ಹೇಳಿದ್ದಾರೆ. 

ಅಲ್ಲದೆ,  ನನ್ನ ಕ್ಷೇತ್ರದಲ್ಲಿ ಕೆಲಸ ಸರಿಯಾಗಿ ಆಗಬಾರದು ಅಂತಾ ಹಿಂಗೆಲ್ಲಾ ಮಾತಾಡ್ತಾರೆ. ಒಂದು ಕಾಮಗಾರಿಗೆ ಅಪ್ರೂವಲ್ ಕೊಡು ಅಂದ್ರೆ ಎಂಜಿನಿಯರ್ ಹಾಸನದ ಎಂಎಲ್ಎ ಕೇಳ್ತೀನಿ ಅಂತಾನೆ ಎಂದು ರೇವಣ್ಣ ಹೇಳಿದ್ದಾರೆ. ಈ ಹೇಳಿಕೆಗೆ ತಿರುಗೇಟು ನೀಡಿದ ಪ್ರೀತಂ ಗೌಡ, ನೀನು ನನ್ ಕ್ಷೇತ್ರಕ್ಕೆ ಎಷ್ಟು ಕೈ ಹಾಕ್ತಿಯಾ ಅದ್ಕೆ ಕೇಳಿರ್ತಾರೆ ಬಿಡು. ನೀನು 144 ಕೋಟಿ ಯೋಜನೆ ಕೇಳ್ತಿಯಲ್ಲ ಹಂಗೆ ಕೇಳ್ತಾರೆ ಬಿಡು. ನಿನ್ ಕ್ಷೇತ್ರದ ಕೆಲಸಕ್ಕೂ ನನ್ನ ಕೇಳ್ತಾರಲ್ಲಾ ಖುಷಿ ಪಡು ಎಂದು ಇಬ್ಬರೂ ಪರಸ್ಪರ ಏಕವಚನದಲ್ಲೇ ಬೈಯ್ದಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸರ್ಕಾರದ ಸ್ಪಷ್ಟ ಆದೇಶ, ಮೇಲುಗೈ ಸಾಧಿಸಿದ ಪ್ರೀತಂ ಗೌಡ, ರೇವಣ್ಣಗೆ ಹಿನ್ನಡೆ

ಅಲ್ಲದೆ, ಜಿಲ್ಲಾ ಕೇಂದ್ರ ನನ್ ಕ್ಷೇತ್ರ ಅಣ್ಣ ಎಂದು ಪ್ರೀತಂಗೌಡ ಹೇಳಿದ್ದರೆ, ಅದಕ್ಕೆ ಇದು ಎಲ್ಲರಿಗೂ ಸೇರಿದ್ದು ಎಂದು ರೇವಣ್ಣ ಹೇಳಿದ್ದಾರೆ. ರೇವಣ್ಣ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರೀತಂಗೌಡ, ಬಾ ಹಾಗಿದ್ರೆ ಇಲ್ಲೇ ನಿಂತ್ಕೋಬಿಡು ಎಂದು ಸವಾಲು ಹಾಕಿದ್ದಾರೆ. ಹಾಗೆ, ತನಿಖೆ ಆಗಲಿ ಪ್ರಾಮಾಣಿಕವಾಗಿ ಇದ್ದರೆ ಯಾಕೆ ಹೆದರಬೇಕು ಎಂದು ರೇವಣ್ಣ ಹೇಳಿದರೆ, ಅಯ್ಯೋ ನೀನು ಬಹಳ ಪ್ರಾಮಾಣಿಕ ಬಿಡು ಎಂದು ಪ್ರೀತಂಗೌಡ ತಿರುಗೇಟು ಹೇಳಿದ್ದಾರೆ. 

ಈ ಹಿನ್ನೆಲೆ ಇಬ್ಬರ ಜಗಳ ಬಿಡಿಸಿ ಸಮಾಧಾನ ಮಾಡಲು ಉಸ್ತುವಾರಿ ಸಚಿವ ಗೋಪಾಲಯ್ಯ ಊಟದ ವಿರಾಮ ನೀಡಿದ್ದಾರೆ. ಆದರೂ, ಶಾಸಕರ ಆಕ್ರೋಶ ನಿಂತಿರಲಿಲ್ಲ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಗಾಲ್ಪ್‌ ಮೈದಾನದ ಹೆಸರಲ್ಲಿ ರೈತರ ಭೂಮಿ ಹೊಡೆಯುವ ಸಂಚು; ಶಾಸಕ ಪ್ರೀತಂ ಗೌಡ

click me!