'RSS ಬಗ್ಗೆ ಟೀಕೆ ಮಾಡಿದ್ದರಿಂದಲೇ ಜೆಡಿಎಸ್‌ಗೆ ಸೋಲು'

By Kannadaprabha NewsFirst Published Nov 5, 2021, 2:49 PM IST
Highlights

*  HDK ಆರ್‌ಎಸ್‌ಎಸ್‌ ಸಂಘಟನೆ ಬಗ್ಗೆ ಟೀಕಿಸುವುದಕ್ಕೆ ನನ್ನ ವಿರೋಧ
*  ಉಪಚುನಾವಣೆ ಸೋಲು- ಗೆಲುವಿನ ಬಗ್ಗೆ ಚರ್ಚೆ ಮಾಡಲ್ಲ
*  ಕಾಂಗ್ರೆಸ್‌, ಜೆಡಿಎಸ್‌ ಒಟ್ಟಾಗಿದ್ದರಿಂದ ಬಿಜೆಪಿಗೆ ಹಾನಗಲ್‌ ಸೋಲು
 

ಹಾಸನ(ನ.05):  ರಾಷ್ಟ್ರಸೇವೆಯಲ್ಲಿ ತೊಡಗಿಕೊಂಡಿರುವ ಆರೆಸ್ಸೆಸ್‌(RSS) ಬಗ್ಗೆ ಅವಹೇಳನಕಾರಿಯಾಗಿ, ತುಚ್ಛವಾಗಿ ಮಾತನಾಡಿದ್ದರಿಂದ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆಂದು ಶಾಸಕ ಪ್ರೀತಂ ಜೆ.ಗೌಡ(Preetham J Gowda) ಹೇಳಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರು ನಮಗೆ ಪೂಜ್ಯವಾದ ಆರ್‌ಎಸ್‌ಎಸ್‌ ಸಂಘಟನೆ ಬಗ್ಗೆ ಟೀಕಿಸುವುದಕ್ಕೆ ನನ್ನ ವಿರೋಧವಿದೆ. ಈಗ ಚುನಾವಣೆ ಮುಗಿದಿದೆ. ಈಗ ಬಂದು ಆರೆಸ್ಸೆಸ್‌ ಬಗ್ಗೆ ಚರ್ಚೆ ಮಾಡಿ ಸತ್ಯ ತಿಳಿದುಕೊಳ್ಳಲಿ. ರಾಷ್ಟ್ರ ಸೇವೆಯಲ್ಲಿ ತೊಡಗಿರುವ ಸಂಘಟನೆ ಬಗ್ಗೆ ಅಪಪ್ರಚಾರ ಮಾಡುವುದನ್ನು ಮತದಾರರು ಒಪ್ಪುವುದಿಲ್ಲವೆಂದರು. ಇನ್ನು 2023ಕ್ಕೆ ರಾಜ್ಯದಲ್ಲಿ ಜೆಡಿಎಸ್‌ ಅ​ಧಿಕಾರಕ್ಕೆ ಬರುತ್ತದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು 2018ರ ಬಳಿಕ 2023ಕ್ಕೆ ಎಂದವರು 2023ರ ಬಳಿಕ 2028 ಎನ್ನುತ್ತಾರೆ . ಅವರ ಸಂಘಟನೆಗೆ ಶುಭವಾಗಲಿ ಎಂದರು.

Karnataka By election: ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ರೂ ಸಾವಿರ ಮತ ಗಳಿಸಲಿಲ್ಲ JDS

ಕಾಂಗ್ರೆಸ್‌, ಜೆಡಿಎಸ್‌ ಒಟ್ಟಾಗಿದ್ದರಿಂದ ಬಿಜೆಪಿಗೆ ಹಾನಗಲ್‌ ಸೋಲು

ಉಪ ಚುನಾವಣೆಯ ಕೊನೆಯ ಕ್ಷಣದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಟ್ಟಾಗಿದ್ದರಿಂದ ಮತ ವಿಭಜನೆ ಆಗದೆ ಬಿಜೆಪಿಗೆ ಹಾನಗಲ್‌ನಲ್ಲಿ ಸೋಲಾಯಿತು ಎಂದು ಮೀನುಗಾರಿಕಾ ಸಚಿವ ಎಸ್‌.ಅಂಗಾರ(S Angara) ಅಭಿಪ್ರಾಯಪಟ್ಟಿದ್ದಾರೆ. 
ನಗರದಲ್ಲಿ ಗುರುವಾರ ಹಾಸನಾಂಬ ದೇವಿಯ(Hasanambe Devi) ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲನ್ನು ಸ್ವೀಕರಿಸಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸುವುದು ಗೆಲ್ಲುವುದಕ್ಕೆ. ಗೆಲ್ಲುವ ಸಮಯದಲ್ಲಿ ಕೆಲವು ಕುತಂತ್ರಗಳಾಗುತ್ತವೆ. ಹೀಗಾಗಿ ದಳಕ್ಕೆ ಮತಗಳೇ ಬೀಳಲಿಲ್ಲ. ಎಲ್ಲ ಕಾಂಗ್ರೆಸ್‌ ಪಾಲಾಗಿದ್ದರಿಂದ ಹಾನಗಲ್‌ನಲ್ಲಿ ನಮಗೆ ಸೋಲಾಯಿತು ಎಂದು ಹೇಳಿದರು.
ಬಿಜೆಪಿ ಮತ್ತು ಸಂಘ ಪರಿವಾರದ ಉದ್ದೇಶ ಒಂದೇ. ನಮ್ಮಲ್ಲೇನೂ ಒಡಕಿಲ್ಲ. ರಾಜಕೀಯವಾಗಿ ಹೇಳುವವರು ಹೇಳಬಹುದು. ಕೆಲವು ಸಮಯದಲ್ಲಿ ಮಾತಿನ ವ್ಯತ್ಯಾಸಗಳಿರಬಹುದು. ಅದು ಸಂಘಟನೆ ಒಳಗೆ ಯಾವುದೇ ರೀತಿಯ ಒಡಕನ್ನು ಉಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

40 ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

ಉಪಚುನಾವಣೆ ಸೋಲು- ಗೆಲುವಿನ ಬಗ್ಗೆ ಚರ್ಚೆ ಮಾಡಲ್ಲ

ಉಪಚುನಾವಣೆಯಲ್ಲಿ(Byelection) ಸೋಲು-ಗೆಲುವಿನ ಕುರಿತು ಚರ್ಚೆ ಮಾಡುವ ಬದಲು 2023ರ ಸಾರ್ವತ್ರಿಕ ಚುನಾವಣೆಗೆ(General Election) ಸಕ್ರಿಯವಾಗಿ ಕೆಲಸ ಮಾಡಬೇಕು ಎಂಬ ತೀರ್ಮಾನ ಕೈಗೊಂಡಿದ್ದೇನೆ ಎಂದು ಜೆಡಿಎಸ್‌(JDS) ವರಿಷ್ಠ ಎಚ್‌.ಡಿ.ದೇವೇಗೌಡ(HD Devegowda) ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ದೊಡ್ಡಗೌಡರು, ಉಪಚುನಾವಣೆಯಲ್ಲಿ ನಮಗೆ ಬಂದಿರುವ ಫಲಿತಾಂಶವನ್ನು ಸ್ವೀಕಾರ ಮಾಡುತ್ತೇವೆ. ಜನತೆಯ ತೀರ್ಮಾನಕ್ಕೆ ತಲೆಬಾಗುತ್ತೇವೆ. ಪ್ರಾದೇಶಿಕ ಪಕ್ಷವನ್ನು(Regional Party) ಉಳಿಸಲು ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಕ್ರಿಯವಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಹಲವು ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy), ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ(HK Kumaraswamy), ವಿಧಾನಪರಿಷತ್‌ ಸದಸ್ಯ ತಿಪ್ಪೇಸ್ವಾಮಿ ಜತೆ ಸಭೆ ನಡೆಸಿದ್ದೇನೆ. ಸುಮಾರು ಮೂರು ತಾಸುಗಳ ಕಾಲ ಪಕ್ಷದ ಸಂಘಟನೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಯಾವುದೇ ಪಕ್ಷ ಕಟ್ಟಲು ಆರ್ಥಿಕ ಶಕ್ತಿ ಮುಖ್ಯವಾಗಿದೆ. ಕಾಂಗ್ರೆಸ್‌(Congress), ಬಿಜೆಪಿ(BJP) ಹಣ ಎಷ್ಟಿದೆ ಎಂಬುದರ ಬಗ್ಗೆ ಹೇಳುವುದಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಅದನ್ನು ಉಳಿಸಬೇಕಾಗಿದೆ. ಆರ್ಥಿಕತೆಯು ಅಗತ್ಯ ಇದ್ದು, ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದರು.
 

click me!