ಬಿಜೆಪಿ ಬ್ರಾಂಡ್‌ ಬೆಂಗಳೂರು ಮಾಡಿದ್ದಾರೆಯೇ?: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Dec 7, 2023, 12:30 AM IST

ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದು ಗುಂಡಿ ಮುಚ್ಚಲಾಗಲಿಲ್ಲ. ನಾವು ಅಧಿಕಾರಕ್ಕೆ ಬಂದು 6 ತಿಂಗಳಾಯಿತು. ಬಿಜೆಪಿ ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 


ಬೆಳಗಾವಿ (ಡಿ.07): ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದು ಗುಂಡಿ ಮುಚ್ಚಲಾಗಲಿಲ್ಲ. ನಾವು ಅಧಿಕಾರಕ್ಕೆ ಬಂದು 6 ತಿಂಗಳಾಯಿತು. ಬಿಜೆಪಿ ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ಕುರಿತಂತೆ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಉಚ್ಚ ನ್ಯಾಯಾಲಯ ಬಿಜೆಪಿಯವರಿಗೆ ಗುಂಡಿ ಮುಚ್ಚಿಲ್ಲ ಎಂದು ಛೀಮಾರಿ ಹಾಕಿದೆ. ಅವರಿಗೆ ಬೆಂಗಳೂರಿನ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದು ಕಿಡಿಕಾರಿದರು.

ಉತ್ತರ ಕರ್ನಾಟಕದಲ್ಲಿ ಸದನ ನಡೆಯುತ್ತಿದ್ದು, ಸಚಿವರು ತೆಲಂಗಾಣದಲ್ಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಂತ್ರಿಗಳು ಎಲ್ಲರೂ ಅಲ್ಲಿಲ್ಲ, ಒಂದಿಬ್ಬರು ಹೋಗಿದ್ದಾರೆ. ರಾಜಕೀಯವನ್ನೂ ಮಾಡಬೇಕಲ್ಲ. ಜಮೀರ್ ಅಹ್ಮದ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಬರಬೇಕಷ್ಟೆ. ಬಹುತೇಕ ಜನ ವಾಪಸ್‌ ಬಂದಿದ್ದಾರೆ ಎಂದು ತಿಳಿಸಿದರು. ಅಭಿವೃದ್ಧಿ ಭಾಷಣವಿಲ್ಲ ಸಿದ್ದರಾಮಯ್ಯ ಕೇವಲ ಓಲೈಕೆ ಭಾಷಣ ಮಾಡುತ್ತಾರೆಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದೆಲ್ಲ ನಿಮ್ಮಿಂದಲೇ ಆಗಿದೆ. ಎಲ್ಲ ಸಮುದಾಯಗಳು ಒಳಗೊಂಡಂತೆ ಮುಸ್ಲಿಮರನ್ನು ರಕ್ಷಣೆ ಮಾಡಲಾಗುವುದು ಎಂದರು.

Latest Videos

undefined

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲ: ಬಸವಜಯಮೃತ್ಯುಂಜಯ ಸ್ವಾಮೀಜಿ

ಮುಸ್ಲಿಂರಿಗೆ ಸಂಪತ್ತು ಕೊಡುವುದರಲ್ಲಿ ತಪ್ಪೇನು?: ಮುಸ್ಲಿಮರು ಈ ನಾಡಿನವರು. ಅವರಿಗೂ ನಮ್ಮಷ್ಟೇ ಹಕ್ಕಿದೆ. ನಾಡಿನ ಸಂಪತ್ತನ್ನು ಮುಸ್ಲಿಮರಿಗೆ ಕೊಡುವುದರಲ್ಲಿ ತಪ್ಪೇನು? ಎಂದು ಸಚಿವ ಆರ್‌.ಬಿ. ತಿಮ್ಮಾಪುರ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿರುವ ಮುಸ್ಲಿಮರು ನಮ್ಮವರಲ್ಲವಾ?. ಅವರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕಾ? ಬೆಳಗ್ಗೆ ಎದ್ದರೆ ಹಿಂದು- ಮುಸ್ಲಿಂ ಗಲಾಟೆ, ಗದ್ದಲ ಮಾಡಿಸುವುದು ಈ ದೇಶದ ಸಂಸ್ಕೃತಿಯಲ್ಲ. 

ಅವರಿಗೂ ಈ ನಾಡಿನ ಮೇಲೆ ಹಕ್ಕಿದೆ. ಎಲ್ಲ ಸಮಾಜಕ್ಕೆ ನೀಡುವಂತೆ ಮುಸ್ಲಿಮರಿಗೂ ಹಕ್ಕು ನೀಡುತ್ತೇವೆ. ಇದರಲ್ಲಿ ತಪ್ಪೇನು? ಎಂದರು. ಮುಸ್ಲಿಂ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ತಿಮ್ಮಾಪುರ, ಮತ್ತೆ ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಅವರು ಹಿಂದುಗಳನ್ನು ಓಲೈಕೆ ಮಾಡುತ್ತಿಲ್ಲವಾ? ಎಲ್ಲೆಂದರಲ್ಲಿ ಮುಸ್ಲಿಮರ ಮೇಲೆ ಗಲಾಟೆ ಮಾಡಿಸುತ್ತಿದ್ದಾರೆ. ನಾವೇನು ಹಿಂದೂಗಳಲ್ಲವಾ? ಮುಖ್ಯಮಂತ್ರಿಗಳು ಹಿಂದೂಗಳಲ್ಲವಾ? 

ಮುಸ್ಲಿಮರೂ ಸೇರಿ ಎಲ್ಲರಿಗೂ ರಕ್ಷಣೆ ಕೊಡ್ತೇವೆ ಅನ್ನೋದು ತಪ್ಪಾ: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಹಿಂದೂ ಇವರ ಮನೆಯ ಆಸ್ತಿಯಂತೆ ಮಾತನಾಡುತ್ತಿದ್ದಾರೆ. ಅಸಹಾಯಕರಿಗೆ ಸಹಾಯ ಮಾಡುತ್ತಿರುವಾಗ ಈ ರೀತಿಯ ಹಿಂದುತ್ವ ಪದ ತರುವುದು ಸರಿಯಲ್ಲ. ಇದು ಈ ದೇಶದ ಸಂಸ್ಕೃತಿಯಲ್ಲ. ಎಲ್ಲರನ್ನೂ ಸಮಾನವಾಗಿ ದೇಶದ ಅಭಿವೃದ್ಧಿಯ ಕಡೆ ಒಯ್ಯುವ ಭಾವನೆ ಒಬ್ಬ ರಾಜಕಾರಣಿಗೆ ಬರಬೇಕು ಎಂದು ಪ್ರತಿಪಾದಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಈ ದೇಶದ ಸಂಪತ್ತು ಹಂಚುತ್ತೇವೆ ಎಂದು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಎಲ್ಲರಂತೆ ಮುಸ್ಲಿಮರಿಗೂ ಈ ನೆಲದ‌ ಮೇಲೆ ಹಕ್ಕಿದೆ. ಅವರಿಗಿರುವ ಹಕ್ಕು ಕೊಡುವುದರಲ್ಲಿ ತಪ್ಪೇನಿದೆ? ಎಂದರು.

click me!