ಹುಬ್ಬಳ್ಳಿಯ ಮುಸ್ಲಿಂ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಹಲವು ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುವರ್ಣಸೌಧ (ಡಿ.06): ‘ದೇಶದ ಸಂಪತ್ತಲ್ಲಿ ಮುಸ್ಲಿಮರಿಗೂ ಪಾಲು ಸಿಗಬೇಕು. ಅವರಿಗೆ ಅನ್ಯಾಯ ಮಾಡೋಕೆ ನಾನು ಬಿಡುವುದಿಲ್ಲ. ಅವರಿಗೆ ನಾನು ರಕ್ಷಣೆ ನೀಡುತ್ತೇನೆ’ ಎಂದು ಹುಬ್ಬಳ್ಳಿಯ ಮುಸ್ಲಿಂ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಹಲವು ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯ ಅವರನ್ನು ಬಿಟ್ಟರೆ ದೇಶ ಅಷ್ಟೇ ಅಲ್ಲ, ಪ್ರಪಂಚದ ಸಂಪತ್ತನ್ನೂ ಮುಸ್ಲಿಮರಿಗೆ ಹಂಚುತ್ತಾರೆ. ಇವರ ಮುಸ್ಲಿಂ ಓಲೈಕೆ ರಾಜಕಾರಣ ಹೊಸದಲ್ಲ.
ಒಬ್ಬ ಮುಖ್ಯಮಂತ್ರಿ ಆದವರು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಒಂದು ಸಮುದಾಯದ ರಕ್ಷಣೆ ಮಾಡುತ್ತೇನೆ ಎನ್ನುವುದು ಖಂಡನೀಯ. ಸಚಿವ ಜಮೀರ್ ಅಹಮದ್ ಅವರು ಸ್ಪೀಕರ್ ಸ್ಥಾನದ ಬಗ್ಗೆಯೇ ವಿವಾದಾತ್ಮಕವಾಗಿ ಮಾತನಾಡಿದರು. ಇದರಿಂದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಬುದ್ದಿ ಕಲಿತಿದೆ ಎಂದುಕೊಂಡಿದ್ದೆವು. ಅವರಿಗೆ ಇನ್ನೂ ಬುದ್ದಿ ಬಂದಿಲ್ಲ. ಅವರ ಹೇಳಿಕೆಯೇ ಅವರಿಗೆ ತಿರುಗುಬಾಣ ಆಗಲಿದೆ. ಇದರಂತ ದರಿದ್ರ ಸರ್ಕಾರ ಇನ್ನೊಂದಿಲ್ಲ. ಇವರಿಗೆ ಯಾರ ಬಗ್ಗೆಯೂ ಚಿಂತನೆ ಇಲ್ಲ. ಪರಿಶಿಷ್ಟರಿಗೆ ಮೀಸಲಿರುವ ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಬೇರೆ ಕಾರ್ಯಗಳಿಗೆ ಬಳಸುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ರೆ ಪರಿಹಾರ ಕೊಡಬಹುದಿತ್ತು ಎಂದರು.
ಮುಸ್ಲಿಮರೂ ಸೇರಿ ಎಲ್ಲರಿಗೂ ರಕ್ಷಣೆ ಕೊಡ್ತೇವೆ ಅನ್ನೋದು ತಪ್ಪಾ: ಸಿಎಂ ಸಿದ್ದರಾಮಯ್ಯ
ಅಧಿವೇಶನ ಬಂದಿದೆ ಅಂತ ಬೆಳೆ ನಷ್ಟವಾದ ರೈತರಿಗೆ ತಲಾ 2 ಸಾವಿರ ರು. ಕೊಡುವ ನಾಟಕ ಆಡುತ್ತಿದ್ದಾರೆ ಎಂದರು. ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಒಬ್ಬ ಮುಖ್ಯಮಂತ್ರಿಯಾದವರು ಒಂದು ಸಮುದಾಯಕ್ಕೆ ಓಲೈಕೆ ಮಾಡಬಾರದು. ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ರಕ್ಷಣೆ ಕೊಡುತ್ತೇನೆ ಎನ್ನುತ್ತಾರೆ. ಈ ದೇಶದಲ್ಲಿ ಮುಸ್ಲಿಮರಿಗೆ ಏನು ಭಯವಿದೆ ಎನ್ನುವುದನ್ನು ಹೇಳಲಿ. ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂತಹ ತುಷ್ಟೀಕರಣದಿಂದಲೇ ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯ ಕಳೆದುಕೊಂಡಿದ್ದಾರೆ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲ: ಬಸವಜಯಮೃತ್ಯುಂಜಯ ಸ್ವಾಮೀಜಿ
ಮುಸ್ಲಿಮರಿಗೆ ನ್ಯಾಯ ಕೊಡಿಸುತ್ತೇನೆ ಅಂದರೆ ಅವರಿಗೆ ಏನು ಅನ್ಯಾಯ ಆಗಿದೆ ಎಂಬುದನ್ನು ಸಿದ್ದರಾಮಯ್ಯನವರು ಹೇಳಲಿ. ಭಾರತದಲ್ಲಿನ ಮುಸ್ಲಿಮರಿಗೆ ಯಾವುದೇ ಅನ್ಯಾಯ ಆಗಿಲ್ಲ. ಮುಸಲ್ಮಾನರು ಕಾಂಗ್ರೆಸ್‌ನಲ್ಲಿ ಮಾತ್ರ ಇಲ್ಲ ಬಿಜೆಪಿಯಲ್ಲೂ ಇದ್ದಾರೆ. ಬಿಜೆಪಿ ಸರ್ಕಾರಗಳೂ ಆ ಸಮುದಾಯದ ಅಭಿವೃದ್ದಿಗೆ ಸಹಾಯ ಮಾಡಿವೆ. ಸಿದ್ದರಾಮಯ್ಯ ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಮುಸ್ಲಿಮರ ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೋಗಲಿ ಕಾಂಗ್ರೆಸ್‌ನಲ್ಲಿ ಮುಸ್ಲಿಮರನ್ನ ಮುಖ್ಯಮಂತ್ರಿ ಮಾಡಿದ್ದಾರಾ? ಇಲ್ಲ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದ್ದಾರಾ?
- ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಬಿಜೆಪಿ ಸದಸ್ಯ