Hangal, Sindagi By Poll Result:ಸಿಎಂ ಕ್ಷೇತ್ರದಲ್ಲಿ ತಂತ್ರ ಸಫಲ, ಕಾಂಗ್ರೆಸ್‌ಗೆ ಟಾನಿಕ್‌

By Kannadaprabha News  |  First Published Nov 3, 2021, 12:58 AM IST

* ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ
* ಉಪಸಮರ ಫಲಿತಾಂಶ ಕಾಂಗ್ರೆಸ್‌ಗೆ ಟಾನಿಕ್‌
* ಪಂಚಮಸಾಲಿಗಳ ಮತ ಸೆಳೆಯುವ ಕಾಂಗ್ರೆಸ್‌ ತಂತ್ರ ಸಫಲ
* ಸಿಎಂ ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಭರ್ಜರಿ ಉತ್ಸಾಹ


ಬೆಂಗಳೂರು, (ನ.03): ಸಿಂದಗಿ ಹಾಗೂ ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ (By Election Result) ಕಾಂಗ್ರೆಸ್‌(Congress) ಪಾಲಿಗೆ ಹೊಸ ಚೈತನ್ಯ ನೀಡಿದೆ. ಏರಿಕೆಯ ಗತಿಯಲ್ಲೇ ಇದ್ದ ಬಿಜೆಪಿಯ (BJP) ವರ್ಚಸ್ಸಿಗೆ ತಡೆ ಬೀಳುವ ಲಕ್ಷಣ ಈ ಫಲಿತಾಂಶದಿಂದ ಗೋಚರಿಸಿದೆ ಎಂದೇ ಕಾಂಗ್ರೆಸ್‌ ನಾಯಕರು ಬಿಂಬಿಸುತ್ತಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ದೊರೆತ ಟಾನಿಕ್‌ ಈ ಫಲಿತಾಂಶ ಎಂದೇ ಭಾವಿಸಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಸಿಂದಗಿ(Sindagi) ಹಾಗೂ ಹಾನಗಲ್‌ (Hangal) ಎರಡು ಕ್ಷೇತ್ರಗಳು ಕಾಂಗ್ರೆಸ್‌ನದ್ದಲ್ಲ. ಜೆಡಿಎಸ್‌ (JDS) ಹಾಗೂ ಬಿಜೆಪಿಗೆ ಸೇರಿದ್ದ ಈ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವಾದ ಹಾನಗಲ್‌ ಅನ್ನು ಬುಟ್ಟಿಗೆ ಹಾಕಿಕೊಂಡಿರುವುದು ಹಾಗೂ ಅಸ್ತಿತ್ವವೇ ಇರದಿದ್ದ ಸಿಂದಗಿ ಕ್ಷೇತ್ರದಲ್ಲಿ ತನ್ನ ಬೇರುಗಳನ್ನು ಭದ್ರವಾಗಿ ನೆಲೆಯೂರಿಸಿರುವುದು ಹರುಷ ತಂದಿದೆ. ಮುಖ್ಯವಾಗಿ ಮುಖ್ಯಮಂತ್ರಿಯವರ ತವರು ಜಿಲ್ಲೆ ಹಾಗೂ ಸ್ವಕ್ಷೇತ್ರ ಶಿಗ್ಗಾಂವ್‌ಗೆ ಆತುಕೊಂಡಿರುವ ಹಾನಗಲ್‌ ಕ್ಷೇತ್ರದ ಗೆಲುವು ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದೆ.

Tap to resize

Latest Videos

undefined

'ಬಿಜೆಪಿ 1 ಕ್ಷೇತ್ರದಲ್ಲಿ ಗೆದ್ದು ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದರೂ ಮತಗಳಿಕೆ ಹೆಚ್ಚಳ'

ಏಕೆಂದರೆ, ತವರು ಜಿಲ್ಲೆಯಲ್ಲಿ ಸೋಲು ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಎಲ್ಲ ರೀತಿಯ ರಾಜಕೀಯ ಪಟ್ಟುಗಳನ್ನು ಬಳಸಿದ್ದರು. ಎಂಟಕ್ಕೂ ಹೆಚ್ಚು ಸಚಿವರು ಕ್ಷೇತ್ರಕ್ಕೆ ಮುಡಿಪಾಗಿದ್ದರು. ಖುದ್ದು ಬೊಮ್ಮಾಯಿ ಎಂಟು ದಿನ ಕ್ಷೇತ್ರದಲ್ಲೇ ಬೀಡು ಬಿಟ್ಟು, ಹಳ್ಳಿ-ಹಳ್ಳಿ ತಿರುಗಿದ್ದರು. ಕ್ಷೇತ್ರದ ಅಳಿಯ ತಾನು ಎಂದು ಮತದಾರನ್ನು ಕಟ್ಟಿಹಾಕಲು ಯತ್ನಿಸಿದ್ದರು. 

ದೊಡ್ಡ ಪ್ರಮಾಣದಲ್ಲಿ ಸಂಪನ್ಮೂಲ ಕೂಡ ಬಳಕೆಯಾಗಿತ್ತು ಎಂಬ ಗುಲ್ಲು ಇತ್ತು. ಇಷ್ಟಾಗಿಯೂ ಸಮಾಧಾನಕರ ಲೀಡ್‌ನೊಂದಿಗೆ ಕಾಂಗ್ರೆಸ್‌ನ ಶ್ರೀನಿವಾಸ್‌ ಮಾನೆ (Srinivas Mane) ಜಯಭೇರಿ ಬಾರಿಸಿದ್ದಾರೆ. ಇದು ಬದಲಾವಣೆ ಬೇಕು ಎಂಬ ಬಯಕೆಯ ಸಣ್ಣ ಅಲೆ ಸಮೂಹದಲ್ಲಿ ರೂಪುಗೊಳ್ಳತೊಡಗಿರುವುದರ ಸಂಕೇತ ಎಂದೇ ಬಿಂಬಿಸಲಾಗುತ್ತಿದೆ.

ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ

ಗೆಲುವಿನ ಶ್ರೇಯಸ್ಸು ಮಾನೆಗೆ:
ಇಷ್ಟಾಗಿಯೂ ಈ ಗೆಲುವಿನ ಹೆಚ್ಚು ಶ್ರೇಯಸ್ಸು ಖಚಿತವಾಗಿ ಸ್ವತಃ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಸೇರುತ್ತದೆ. ಕಳೆದ ಚುನಾವಣೆಯಲ್ಲಿ ಸುಮಾರು ಆರು ಸಾವಿರ ಮತಗಳಿಂದ ಸೋತ ನಂತರ ಮಾನೆ ಕ್ಷೇತ್ರದ ಜನರ ಸಂಪರ್ಕ ಕಳೆದುಕೊಳ್ಳಲಿಲ್ಲ. ಅದರಲ್ಲೂ ಕರೋನಾ ಅವಧಿಯಲ್ಲಿ ಜನರ ಸಂಕಷ್ಟಕ್ಕೆ ಮಿಡಿದ ಮಾನೆ ಅವರ ನಡವಳಿಕೆ ಹಾಗೂ ಇದೇ ಅವಧಿಯಲ್ಲಿ ಬಿಜೆಪಿಯ ಉದಾಸಿ ಕುಟುಂಬದ ಧೋರಣೆ ಜನರ ಮೇಲೆ ಪ್ರಭಾವ ಬೀರಿತ್ತು.ಇದಕ್ಕೆ ಸಂವಾದಿಯಾಗಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಆರಂಭವಾಗಿದ್ದ ಗೊಂದಲವನ್ನು ಪಕ್ಷದ ನಾಯಕರು ಯಶಸ್ವಿಯಾಗಿ ನಿಭಾಯಿಸಿದರು. ಮನೋಹರ್‌ ತಹಶೀಲ್ದಾರ್‌ ಹಾಗೂ ಅವರ ತಂಡ ಬಂಡಾಯದ ಧ್ವನಿಯೆತ್ತುವ ಮುನ್ನವೇ ಸಮಾಧಾನ ಪಡಿಸಿ ಜತೆಗೂಡಿ ಕೆಲಸ ಮಾಡುವಂತೆ ನಾಯಕತ್ವ ನೋಡಿಕೊಂಡಿತು.

ಬಣ ರಾಜಕಾರಣ ಮುಚ್ಚಿಟ್ಟಕಾಂಗ್ರೆಸ್‌:
ಪ್ರಚಾರದ ಅವಧಿಯಲ್ಲೂ ಪಕ್ಷದೊಳಗಿನ ಬಣ ರಾಜಕಾರಣ ಬಹಿರಂಗವಾಗಿ ಕಾಣಿಸದಂತೆ ಪ್ರಜ್ಞಾಪೂರ್ವಕವಾಗಿ ನಿಭಾಯಿಸಲಾಯಿತು. ಈ ಅವಧಿಯಲ್ಲಿ ಒಟ್ಟು 24 ಸಾರ್ವಜನಿಕ ಸಭೆಗಳನ್ನು ನಡೆಸಲಾಗಿದ್ದು, ಈ ಸಭೆಗಳಲ್ಲಿ ಪಕ್ಷದ ಎಲ್ಲಾ ನಾಯಕರು ಸರದಿಯಲ್ಲಿ ಭಾಗವಹಿಸಿದರು. ಬೂತ್‌ಗೊಂದು ತಂಡ ರೂಪಿಸಿ ಆ ತಂಡದಲ್ಲಿ ಹೊರಗಿಂದ ಬಂದ 10 ಮಂದಿ ಹಾಗೂ ಸ್ಥಳೀಯ 5 ಮಂದಿ ಇರುವಂತೆ ನೋಡಿಕೊಳ್ಳಲಾಯಿತು. 

ಆ ತಂಡ ಮನೆ ಮನೆಗೆ ಭೇಟಿ ನೀಡಿ ಜನ ಮನವೊಲಿಸುವ ಪ್ರಯತ್ನ ಮಾಡಿದರು. ಬಿಜೆಪಿಯ ದುರಾಡಳಿತ, ಬೆಲೆಯೇರಿಕೆಯನ್ನು ಪ್ರಚಾರದ ಮುಖ್ಯ ಅಂಶ ಮಾಡಿಕೊಂಡಿದ್ದರೂ ಸೂಕ್ಷ್ಮವಾಗಿ ಜಾತಿ ಸಮೀಕರಣವನ್ನು ಮಾಡಲಾಯಿತು. ಜೆಡಿಎಸ್‌ ಎಷ್ಟೇ ಪ್ರಯತ್ನ ಮಾಡಿದರೂ ಅಲ್ಪಸಂಖ್ಯಾತರ ಮೇಲೆ ಕಾಂಗ್ರೆಸ್‌ ಬಿಗಿ ಹಿಡಿತ ಸಡಿಲವಾಗದಂತೆ ನೋಡಿಕೊಳ್ಳಲಾಯಿತು ಹಾಗೂ ಅದಕ್ಕಿಂತ ಮುಖ್ಯವಾಗಿ ಲಿಂಗಾಯತ ಸಮುದಾಯವೆಂಬ ಬಿಜೆಪಿಯ ಮತಬ್ಯಾಂಕ್‌ನಲ್ಲಿ ಬಿರುಕು ಮೂಡಿಸಿ ಪಂಚಮಸಾಲಿಗಳು ಕೊಂಚವಾದರೂ ತನ್ನತ್ತ ವಾಲುವಂತೆ ಮಾಡಿದ್ದು ಕಾಂಗ್ರೆಸ್‌ ತಂತ್ರಗಾರಿಕೆಗೆ ದೊರೆತ ದೊಡ್ಡ ಯಶಸ್ಸು.

ಸಿಂದಗಿಯಲ್ಲಿ ನೆಲೆಯೂರಿದ ಸಮಾಧಾನ:
ಸಿಂದಗಿಯಲ್ಲಿ ಸೋಲುಂಡರೂ ತನ್ನದಲ್ಲದ ಕ್ಷೇತ್ರದಲ್ಲಿ ಭದ್ರವಾಗಿ ಬೇರೂರಿದ ಸಮಾಧಾನ ಕಾಂಗ್ರೆಸ್‌ಗೆ ಇದೆ. ಕಳೆದ 20 ವರ್ಷಗಳಿಂದ ಮೂರನೇ ಸ್ಥಾನದಲ್ಲಿದ್ದ ಹಾಗೂ ಕಳೆದ ಚುನಾವಣೆಯಲ್ಲಿ 22 ಸಾವಿರ ಆಸುಪಾಸು ಇದ್ದ ಮತಗಳಿಕೆ ಮೂರು ಪಟ್ಟು ಹೆಚ್ಚಳಗೊಂಡಿರುವುದು ಕಡಿಮೆ ಸಾಧನೆಯಲ್ಲ.

ಜೆಡಿಎಸ್‌ನಲ್ಲಿದ್ದ ಅಶೋಕ್‌ ಮನಗೂಳಿ(Ashok Managuli) ಕಡೆ ಕಾಂಗ್ರೆಸ್‌ಗೆ ಸೆಳೆಯುವ ಮೂಲಕ ಜೆಡಿಎಸ್‌ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದು ಮಾತ್ರವಲ್ಲ ಆ ಪಕ್ಷ ಠೇವಣಿ ಉಳಿಯದಂತೆ ಆಗಿದೆ. ತನ್ನ ಅಸ್ತಿತ್ವವೇ ಇಲ್ಲದ ಈ ಕ್ಷೇತ್ರದಲ್ಲಿ ಭದ್ರವಾಗಿ ತಳವೂರುವ ಸಾಧ್ಯತೆ ಗೋಚರಿಸಿರುವುದು ಕಾಂಗ್ರೆಸ್‌ ಹರ್ಷಕ್ಕೆ ಕಾರಣ.

ಆದರೆ, ಬಿಜೆಪಿಯ ಗೆಲುವಿನ ಅಂತರ ಮಾತ್ರ ಕಾಂಗ್ರೆಸ್‌ ಅನ್ನು ಕಂಗೆಡಿಸಿದೆ. ಅಶೋಕ್‌ ಮನಗೂಳಿ ಪಕ್ಷಕ್ಕೆ ಬಂದರೂ ಅವರೊಂದಿಗಿದ್ದ ಕಾರ್ಯಕರ್ತರನ್ನು ತಡೆಯುವಲ್ಲಿ ಜೆಡಿಎಸ್‌ ನಾಯಕತ್ವ ಯಶಸ್ವಿಯಾಗಿದೆ ಎಂದೇ ಹೇಳಲಾಗುತ್ತಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ತಳವೂರಿ ಪಕ್ಷಕ್ಕೆ ಕೈಕೊಟ್ಟಅಶೋಕ್‌ ಮನಗೂಳಿಗೆ ಬುದ್ಧಿ ಕಲಿಸಲು ನಡೆಸಿದ ಪ್ರಯತ್ನದ ಫಲ ಬಿಜೆಪಿಯ ಗೆಲುವಿನ ಅಂತರದಲ್ಲಿ ಕಾಣುತ್ತಿದೆ ಎಂದೇ ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ಪಕ್ಷಕ್ಕೆ ಬಂದ ಜೆಡಿಎಸ್‌ ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕೊರತೆಯೂ ಈ ಬೃಹತ್‌ ಅಂತರದ ಸೋಲಿನಲ್ಲಿ ಪಾತ್ರ ನಿರ್ವಹಿಸಿದೆ ಎನ್ನಲಾಗುತ್ತಿದೆ.

click me!