ಅವಹೇಳನಕಾರಿ ಟ್ವೀಟ್: ಸಿಟಿ ರವಿ ವಿರುದ್ಧ ಸಿಡಿದೆದ್ದ ಕುರುಬ ಸಮುದಾಯ

By Suvarna News  |  First Published Nov 2, 2021, 11:28 PM IST

* ಅವಹೇಳಕಾರಿ ಟ್ವೀಟ್ ಮಾಡಿರುವ ಸಿಟಿ ರವಿ ವಿರುದ್ಧ ಭಗಿಲೆದ್ದ ಆಕ್ರೋಶ
* ಚಿಕ್ಕಮಗಳೂರಿನಲ್ಲಿ ಸಿಟಿ ರವಿ ವಿರುದ್ಧ ಬೃಹತ್ ಪ್ರತಿಭಟನೆ
* ಅವಹೇಳನಕಾರಿಯಾಗಿ ಮಾತನಾಡುವುದನ್ನು ಕುರುಬ ಸಮುದಾಯ ಸಹಿಸುವುದಿಲ್ಲ ಎಂದು ಎಚ್ಚರಿಕೆ


ಚಿಕ್ಕಮಗಳೂರು, (ನ.02): ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕು ಎಂಬ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ?'' ಎನ್ನುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi)  ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕುರುಬರ ಸಂಘ (kuruba community) ಮತ್ತು ತಾಲ್ಲೂಕು ಕುರುಬರ ಸಂಘದ ಮುಖಂಡರು ಮತ್ತು ಕಾರ್ಯಕರ್ತರು ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೂ ಬೃಹತ್ ಪ್ರತಿಭಟನೆ ನಡೆಸಿ ಶಾಸಕ ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ಕಂಬಳಿಗೆ ಹಾಕಲು ಜಾತಿಯವರೇ ಆಗ್ಬೇಕು ಅಂದ್ರೆ ಟೋಪಿ ಹಾಕಲು?ಸಿಟಿ ರವಿ ವಿವಾದಾತ್ಮಕ ಟ್ವೀಟ್!

ಈ ವೇಳೆ ಮಾತನಾಡಿದ ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಶಾಸಕ ಸಿ.ಟಿ.ರವಿ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ಕುರುಬ ಸಮಾಜವನ್ನು ಅಪಮಾನ ಮಾಡಿದ್ದಾರೆ. ಸಿ.ಟಿ.ರವಿ ಸಮುದಾಯದ ಕ್ಷಮೆ ಕೆಳಬೇಕು ಇಲ್ಲದಿದ್ದರೇ ಮುಂಬರುವ ದಿನಗಳಲ್ಲಿ ಸಮುದಾಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಎಲ್ಲಾ ಸಮುದಾಯಕ್ಕೆ ಸೇರಿದವರು. ತಮ್ಮ ಅಧಿಕಾರದ ಅವಧಿಯಲ್ಲಿ ಬಡವರ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಂತವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ಕುರುಬ ಸಮುದಾಯ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿಗೆ ಮಹತ್ವವಿದೆ. ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿ.ಟಿ.ರವಿ ಸಂಸ್ಕಾರವನ್ನು ಮರೆತು ನಾಲಿಗೆ ಹರಿಬಿಟ್ಟಿದ್ದು, ಜಿಲ್ಲೆಯ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಸಿದ್ಧರಾಮಯ್ಯ ಅನ್ಯಧರ್ಮದ ಟೋಪಿ ಹಾಕಿದ್ದಕ್ಕೆ ಅವರ ಹುಟ್ಟಿನ ಬಗ್ಗೆ ಪ್ರಶ್ನಿಸಿದ್ದಾರೆ. ಅವರ ಪಕ್ಷದ (ಬಿಜೆಪಿ) ನಾಯಕರು ಅನ್ಯಧರ್ಮದ ಟೋಪಿ ಹಾಕಿದ್ದಾರಲ್ಲ ಸಿ.ಟಿ.ರವಿ ಅದರ ಬಗ್ಗೆ ಮಾತನಾಡಲಿ ಎಂದು ಟಾಂಗ್ ಕೊಟ್ಟರು.

ಸಿಟಿ ರವಿಗೆ ಎಚ್ಚರಿಕೆ
ತಮ್ಮ ತಪ್ಪು ಅರಿತು ಸಮುದಾಯದ ಕ್ಷಮೆ ಕೇಳುವ ಬದಲು ತಮ್ಮ ಹಿಂಬಾಲಕರನ್ನು ಬಿಟ್ಟು ಸಮರ್ಥಿಸಿಕೊಳ್ಳುತ್ತಿದ್ದು, ಇದು ಇಡೀ ಸಮಾಜವೇ ತಲೆತಗ್ಗಿಸುವಂತಹ ವಿಚಾರವಾಗಿದೆ. ಅವರು ಸಮುದಾಯದ ಕ್ಷಮೆ ಕೇಳಬೇಕು. ಮುಂದಿನ ದಿನಗಳಲ್ಲಿ ಇದೇ ರೀತಿ ತಮ್ಮ ನಾಲಿಗೆಯನ್ನು ಹರಿಬಿಟ್ಟರೇ, ಸಮುದಾಯದವರು ಸಹಿಸಲು ಸಾಧ್ಯವಿಲ್ಲ. ರಾಜಕೀಯವಾಗಿ ಅವನತಿ ಕಾಣಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಧೈರ್ಯವಿದ್ರೆ ಪ್ರಧಾನಮಂತ್ರಿಯನ್ನು ಪ್ರಶ್ನಿಸಲಿ
ಆರ್‌ಎಸ್‌ಎಸ್ ಹಿನ್ನೆಲೆ ಉಳ್ಳವರು ಮಾತು ಎತ್ತಿದರೆ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಮೊದಲು ಸಿ.ಟಿ.ರವಿಯವರನ್ನು ಕರೆದು ಬುದ್ಧಿಹೇಳಿ. ಹಣಬಲದಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಅಹಂಕಾರದಿಂದ ಈ ರೀತಿ ವರ್ತಿಸುತ್ತಿದ್ದು, ಜನರು ತಕ್ಕಪಾಠ ಕಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು. ದೇಶದಲ್ಲಿ ಉದ್ಯೋಗ ಸೃಷ್ಠಿ ಸೇರಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಅನೇಕ ಭರವಸೆಗಳು ಇದುವರೆಗೂ ಈಡೇರಿಲ್ಲ, ಸಿ.ಟಿ.ರವಿಯವರು ಧೈರ್ಯವಿದ್ದರೆ ಪ್ರಧಾನಮಂತ್ರಿಯವರನ್ನು ಪ್ರಶ್ನಿಸಲಿ ಎಂದು ಸವಾಲು ಹಾಕಿದರು.

ಹಾನಗಲ್ ಹಾಗೂ ಸಿಂದಗಿ ಬೈ ಎಲೆಕ್ಷನ್ ಪ್ರಚಾರದ ಮಧ್ಯೆ ಸಿದ್ದರಾಮಯ್ಯ ಹಾಗೂ ಸಿಎಂ ಬೊಮ್ಮಾಯಿ ನಡುವೆ ಕಂಬಳಿ ಗಲಾಟೆ ನಡೆದಿತ್ತು. ಇದರ ಮಧ್ಯೆ ಸಿಟಿ ರವಿ ಎಂಟ್ರಿ ಕೊಟ್ಟು ಸಿದ್ದರಾಮಯ್ಯನವರನ್ನು ಟೀಕಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದರು.

ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕು ಎಂಬ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ?'' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಟೊಪ್ಪಿ ಧರಿಸಿ, ಪುಸ್ತಕ ಓದುತ್ತಾ ಕುಳಿತಿರುವ ಫೋಟೋವೊಂದನ್ನು ಟ್ಯಾಗ್ ಮಾಡಿದ್ದರು.

click me!