* ಹಾನಗಲ್, ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್ ಪ್ರಕಟ
* ಕಾಂಗ್ರೆಸ್, ಬಿಜೆಪಿಗೆ ತಲಾ ಒಂದು ಕ್ಷೇತ್ರದಲ್ಲಿ ಗೆಲುವು
* ಬಿಜೆಪಿ ಮತಗಳಿಕೆ ಹೆಚ್ಚಳ ಎಂದ ರವಿಕುಮಾರ್
ಬೆಂಗಳೂರು, (ನ.03): ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪಚುನಾಣೆ ಫಲಿತಾಂಶ (By Election Result) ಇಂದು (ನ.2) ಪ್ರಕಟವಾಗಿದೆ. ಹಾನಗಲ್‌ನಲ್ಲಿ ಕಾಂಗ್ರೆಸ್ ಗೆದ್ದಿದ್ದು, ಸಿಂದಗಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದ್ರೆ, ಜೆಡಿಎಸ್ ಮಾತ್ರ ಎರಡೂ ಕ್ಷೇತ್ರಗಳಲ್ಲಿ ಹೀನಾಯಕ ಸೋಲುಕಂಡಿದೆ.
ಇನ್ನು ಹಾನಗಲ್‌ನಲ್ಲಿ ಬಿಜೆಪಿ (BJP) ಸೋತಿರುವುದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಭಾರೀ ಮುಖಭಂಗವಾಗಿದೆ. ಆದರೂ ಬಿಜೆಪಿ ಮತಗಳಿಕೆ ಹೆಚ್ಚಳವಾಗಿದೆ.
ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಶ್ರೀನಿವಾಸ್ ಮಾನೆ
ಇನ್ನು ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ (N Ravi Kumar) ಪ್ರತಿಕ್ರಿಯಿಸಿದ್ದು, ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆದ್ದು ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದರೂ ಒಟ್ಟಾರೆ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ ಎಂದರು.
ಸಿಂದಗಿ ಕ್ಷೇತ್ರದಲ್ಲಿ ರಮೇಶ ಭೂಸನೂರು ಅವರು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜನರು ಬಿಜೆಪಿ ಪರವಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
2019ರಲ್ಲಿ ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 2 ಹಾಗೂ ಪಕ್ಷೇತರರು ಒಂದು ಸ್ಥಾನ ಗೆದ್ದಿದ್ದರು. 2020ರಲ್ಲಿ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎರಡೂ ಸ್ಥಾನಗಳನ್ನೂ ಗೆದ್ದಿತ್ತು. ಅಂತೆಯೇ ವಿಧಾನಪರಿಷತ್ ಚುನಾವಣೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿತ್ತು. ಆಗ ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ನೀಡಿದ್ದರೇ ಎಂದು ಪ್ರಶ್ನಿಸಿದ್ದಾರೆ.
ರಾಜೀನಾಮೆ ಬೇಡಿಕೆ ಹಾಸ್ಯಾಸ್ಪದ:
ಕೇವಲ ಒಂದು ಚುನಾವಣೆಯಲ್ಲಿ ಗೆದ್ದೊಡನೆ ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಕೇಳುವುದು ಅತ್ಯಂತ ಹಾಸ್ಯಾಸ್ಪದ. ಪಂಚರಾಜ್ಯ ಚುನಾವಣೆಯಲ್ಲೂ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. ಇದನ್ನು ಮರೆತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಮ್ಮ ಪಕ್ಷ ಭಾರಿ ಸಾಧನೆ ಮಾಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
2019 ಹಾಗೂ ನಂತರ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿದಾಗ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆಯೇ ಎಂಬುದನ್ನು ಸಿದ್ದರಾಮಯ್ಯ ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.