ಡೆಮಾಕ್ರಟಿಕ್‌ ಆಜಾದ್‌ ಪಕ್ಷ; ಕಾಂಗ್ರೆಸ್‌ ಮಾಜಿ ನಾಯಕ ಗುಲಾಂ ನಬಿ ಆಜಾದ್‌ ಹೊಸ ಪಕ್ಷ ರಚನೆ

By Sharath Sharma KalagaruFirst Published Sep 26, 2022, 2:00 PM IST
Highlights

Democratic Azad Party: ಐದು ದಶಕಗಳ ಸುದೀರ್ಘ ಕಾಂಗ್ರೆಸ್‌ ನಂಟನ್ನು ಕಳಚಿ ರಾಜೀನಾಮೆ ನೀಡಿದ್ದ ಗುಲಾಂ ನಬಿ ಆಜಾದ್‌ ಇಂದು ತಮ್ಮ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ಡೆಮಾಕ್ರಟಿಕ್‌ ಆಜಾದ್‌ ಪಕ್ಷ ಎಂದು ಹೆಸರಿಸಲಾಗಿದ್ದು ತ್ರಿವರ್ಣದ ಬಾವುಟವನ್ನು ಸಹ ಇದೇ ಸಂದರ್ಭದಲ್ಲಿ ಆಜಾದ್‌ ಅನಾವರಣ ಗೊಳಿಸಿದರು. 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನಿಂದ ಇತ್ತೀಚೆಗಷ್ಟೇ ಹೊರಬಂದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಡೆಮಾಕ್ರಟಿಕ್‌ ಆಜಾದ್‌ ಪಕ್ಷ (Democratic Azad Party) ಎಂಬ ಹೊಸ ಪ್ರಾದೇಶಿಕ ಪಕ್ಷ ಆರಂಭಿಸಿದ್ದಾರೆ. ಸೋಮವಾರ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ ಆಜಾದ್‌, ತಮ್ಮ ಪಕ್ಷದ ಹೆಸರನ್ನು ಘೋಷಿಸಿದರು. ಕಳೆದ ತಿಂಗಳು ಐದು ದಶಕಗಳ ಕಾಂಗ್ರೆಸ್‌ ನಂಟನ್ನು ಕಳಚಿಕೊಂಡಿದ್ದ ಆಜಾದ್‌, ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಕೆಂಡಾಮಂಡಲವಾಗಿದ್ದರು. ಬಹಿರಂಗ ಪತ್ರ ಬರೆದು ರಾಹುಲ್‌ ಗಾಂಧಿ ನಡೆಯನ್ನು ಕಟುವಾಗಿ ಟೀಕಿಸಿ ರಾಜೀನಾಮೆ ನೀಡಿದ್ದರು. ಅದಾದ ನಂತರ ಸ್ವಂತ ಪಕ್ಷ ಕಟ್ಟುವುದಾಗಿ ಮಾಹಿತಿ ನೀಡಿದ್ದ ಅವರು ಇಂದು ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಹೊಸ ಪಕ್ಷದ ಹೆಸರನ್ನು ಇಡುವುದು ಕಷ್ಟದ ಕೆಲಸ, ಸುಮಾರು 1,500ಕ್ಕೂ ಹೆಚ್ಚು ಹೆಸರುಗಳನ್ನು ಜನ ಹೆಸರಿಸಿದ್ದರು ಎಂದು ಈ ವೇಳೆ ಅವರು ಹೇಳಿದರು. ಇದೇ ಸಂದರ್ಭದಲ್ಲಿ ಮೂರು ಬಣ್ಣಗಳಿರುವ ಪಕ್ಷದ ಬಾವುಟವನ್ನು ಸಹ ಅವರು ಬಿಡುಗಡೆ ಮಾಡಿದರು. ಸಾಸಿವೆ - ಬಿಳಿ - ನೀಲಿ ಬಣ್ಣಗಳನ್ನು ಈ ಬಾವುಟ ಹೊಂದಿದೆ. 

"ಸಾಸಿವೆ ಬಣ್ಣ ಕ್ರಿಯಾಶೀಲತೆ ಮತ್ತು ವಿವಿಧತೆಯಲ್ಲಿನ ಏಕತೆಯನ್ನು ಬಿಂಬಿಸುತ್ತದೆ, ಬಿಳಿ ಶಾಂತಿಯನ್ನು ಮತ್ತು ನೀಲಿ ಸ್ವತಂತ್ರದ ಧ್ಯೋತಕವಾಗಿದೆ. ಮುಕ್ತ ವೇದಿಕೆ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದಷ್ಟು ಸ್ವೇಚ್ಚೆಯನ್ನು ನೀಡುವುದೇ ಪಕ್ಷದ ಗುರಿ," ಎಂದು ಆಜಾದ್‌ ಹೇಳಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ತಾರಾ ಚಾಂದ್‌ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ನ ಹಲವಾರು ಹಿರಿಯ ನಾಯಕರು ಆಜಾದ್‌ ಅವರ ಬೆಂಬಲಕ್ಕಾಗಿ ಪಕ್ಷ ತೊರೆದು ಈಗಾಗಲೇ ಕೈಜೋಡಿಸಿದ್ದಾರೆ. 

ಇಬ್ಬರು ಮಾಜಿ ಶಾಸಕರು, ಪಿಡಿಪಿ ಪಕ್ಷದ ಒಬ್ಬ ಶಾಸಕ ಮತ್ತು ಅಪ್ನಿ ಪಕ್ಷದ ಒಬ್ಬ ಶಾಸಕ ಸಹ ಗುಲಾಂ ನಬಿ ಆಜಾದ್‌ರ ಪಕ್ಷ ಸೇರಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಅಧಿಕಾರ ಸಿಗುವಂತೆ ಮಾಡುವುದು ಮತ್ತು ಭೂಮಿ, ನೌಕರಿ ಸ್ಥಳೀಯರಿಗೆ ಮತ್ತೆ ಸಿಗುವಂತೆ ಮಾಡುವುದೇ ತಮ್ಮ ಪಕ್ಷದ ಗುರಿ ಎಂದು ಗುಲಾಂ ನಬಿ ಆಜಾದ್‌ ಈ ಹಿಂದೆಯೇ ಹೇಳಿದ್ದರು. 

ಇದನ್ನೂ ಓದಿ: ಯಾರೇ ಅಧ್ಯಕ್ಷರಾದರೂ ರಾಹುಲ್‌ಗೆ ಗುಲಾಮನಂತೆ ಇರಬೇಕು: ಆಜಾದ್‌ ಕಿಡಿ

ರಾಹುಲ್‌ ವಿರುದ್ಧ ಕೆಂಡಾಮಂಡಲರಾಗಿದ್ದ ಆಜಾದ್‌:

ಕಾಂಗ್ರೆಸ್‌ ನೂತನ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಘೋಷಣೆಯಾದ ಬೆನ್ನಲ್ಲೇ, ಯಾರೇ ಪಕ್ಷದ ಅಧ್ಯಕ್ಷರಾದರೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಗುಲಾಮನಂತೆ ಇದ್ದು, ಅವರ ಹಿಂದೆ ಫೈಲ್‌ ಹಿಡಿದು ಓಡಾಡಿಕೊಂಡಿರಬೇಕಾಗುತ್ತದೆ ಎಂದು ಪಕ್ಷ ತೊರೆದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ, ಕಾಂಗ್ರೆಸ್ಸಿಗೆ ಕಾಯಿಲೆ ಇದ್ದು, ಅದರ ಚಿಕಿತ್ಸೆಗೆ ಔಷಧ ಬೇಕಾಗಿದೆ. ಆದರೆ ವೈದ್ಯರ ಬದಲು ಅಲ್ಲಿ ಕಾಂಪೌಂಡರ್‌ ಔಷಧ ನೀಡುತ್ತಿದ್ದಾರೆ. ತಜ್ಞ ವೈದ್ಯರ ಅಗತ್ಯ ಆ ಪಕ್ಷಕ್ಕೆ ತೀರಾ ಅಗತ್ಯವಿದೆ ಎಂದು ಹರಿಹಾಯ್ದಿದ್ದರು. ರಾಜ್ಯ ಘಟಕಗಳಲ್ಲಿ ಪಕ್ಷವನ್ನು ಒಗ್ಗೂಡಿಸುವಂಥವರ ಬದಲು ಯಾರಿಗೆ ನಾಯಕತ್ವ ವಹಿಸಿದರೆ ಎಲ್ಲರೂ ಬಿಟ್ಟು ಹೋಗುತ್ತಾರೋ ಅಂಥವರಿಗೆ ಮಣೆ ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದರು. ಜೊತೆಗೆ ಕಾಂಗ್ರೆಸ್ಸಿನಲ್ಲಿರುವ 90% ಜನ ಕಾಂಗ್ರೆಸ್ಸಿ ಅಲ್ಲ ಎಂದು ಹೇಳಿಕೆ ನೀಡಿದ್ದಾರು. ಪಕ್ಷ ತೊರೆದ ಹಿನ್ನೆಲೆಯಲ್ಲಿ ಸುದ್ದಿಗಾರರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲಿ ಆಜಾದ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಕಾಂಗ್ರೆಸ್ಸಿನಲ್ಲಿರುವ ಶೇ.90 ಮಂದಿ ಕಾಂಗ್ರೆಸ್ಸಿ ಅಲ್ಲ. ಕಾಲೇಜಿನಲ್ಲಿರುವವರು, ಸಿಎಂಗಳ ಗುಮಾಸ್ತರನ್ನು ಆರಿಸಿ ಹುದ್ದೆ ನೀಡಲಾಗುತ್ತಿದೆ. ತಮ್ಮ ಇತಿಹಾಸವೇ ಗೊತ್ತಿಲ್ಲದ ವ್ಯಕ್ತಿಗಳ ಜತೆ ವಾದಕ್ಕಿಳಿಯಲು ನಾನು ಸಿದ್ಧನಿಲ್ಲ ಎಂದಿದ್ದರು.

ಪ್ರತಿಪಕ್ಷ ನಾಯಕನಾಗಿದ್ದಾಗಲೇ, ಜಿ-23ಗೂ ಮುನ್ನವೇ ಸೋನಿಯಾ ಗಾಂಧಿ (Sonia gandhi) ಅವರಿಗೆ ಪತ್ರ ಬರೆದಿದ್ದೆ. ಅವರು ಮಾಡಿದ್ದೇನು? ಕೆ.ಸಿ. ವೇಣುಗೋಪಾಲ್‌ ಜತೆ ಮಾತನಾಡಿ ಎಂದಿದ್ದರು. ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಆತ ಶಾಲೆಗೆ ಹೋಗುತ್ತಿದ್ದವ ಎಂದುಬಿಟ್ಟೆ. ರಣದೀಪ್‌ ಸುರ್ಜೇವಾಲಾ ಜತೆ ಚರ್ಚಿಸಿ ಎಂದು ಗಾಂಧಿ ಕುಟುಂಬದ ಒಬ್ಬರು ಹೇಳಿದ್ದರು. ನಾನು ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಸುರ್ಜೇವಾಲಾ ತಂದೆ ಪ್ರದೇಶ ಕಾಂಗ್ರೆಸ್‌ ಸಮಿತಿಯಲ್ಲಿದ್ದರು. ನನ್ನ ಅಡಿ ಕೆಲಸ ಮಾಡಿದವರು. ಅಂಥವರ ಪುತ್ರನ ಜತೆ ನಾನೇನು ಚರ್ಚೆ ಮಾಡಲಿ. ರಾಹುಲ್‌ ಗಾಂಧಿ ಏನು ಹೇಳುತ್ತಿದ್ದೀರಿ ಎಂದುಬಿಟ್ಟೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ; ಅವರು ಮಾನವೀಯತೆ ತೋರಿದ್ದಾರೆ: ಆಜಾದ್‌

ಮತ್ತೊಂದೆಡೆ, ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೂಕ್ತವಾಗಿ ಸಂಘಟನೆ ಮಾಡಲು ಕಾಂಗ್ರೆಸ್‌ (Congress) ನಾಯಕತ್ವಕ್ಕೆ ಸಮಯವೇ ಇಲ್ಲ. ರಾಹುಲ್‌ (Rahulgandhi) ಅವರಿಗೆ ರಾಜಕಾರಣದಲ್ಲಿ ಒಲವೂ ಇಲ್ಲ, ಆಸಕ್ತಿಯೂ ಇಲ್ಲ. ನಾನು ಬಿಜೆಪಿ ಸೇರುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ ರಾಜಕಾರಣ ಮಾಡಲು ಬಿಜೆಪಿ (BJP) ಸಹಾಯವನ್ನೂ ಪಡೆಯುವುದಿಲ್ಲ ಎಂದು ಹೇಳಿದ್ದರು.

click me!