ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರೇ AICC ಅಧ್ಯಕ್ಷರಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಲಬುರಗಿ (ಸೆ.26) : ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಬೇಕು ಎನ್ನುವುದು ತಮ್ಮ ಅನಿಸಿಕೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅಧ್ಯಕ್ಷರಾದರೆ ಪಕ್ಷಕ್ಕೆ ಲಾಭ ಆಗುತ್ತೆ. ರಾಹುಲ್ ಯುವಕ. ಹೆಚ್ಚೆಚ್ಚು ಓಡಾಡಿ ಪಕ್ಷ ಸಂಘಟಿಸಬಹುದು. ಅವರ ಬಳಿ ಹೋರಾಟದ ಸಾಮರ್ಥ್ಯವಿದೆ. ಯುವ ಶಕ್ತಿ ಅವರೊಂದಿಗಿದೆ. ಹೀಗಾಗಿ, ರಾಹುಲ್ ಗಾಂಧಿಯವರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದರು.
ಇದೇ ವೇಳೆ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಬಿಜೆಪಿಯವರಿಗೆ ದೇಶದ ಅಭಿವೃದ್ಧಿ ಮುಖ್ಯವಲ್ಲ, ಬೇರೆ ಪಕ್ಷವನ್ನು ದುರ್ಬಲಗೊಳಿಸುವುದು ಮುಖ್ಯ. ಗೋವಾದಲ್ಲಿ ಕಾಂಗ್ರೆಸ್‌ನ್ನು ಮುಗಿಸಬೇಕು ಎಂದು 8 ಜನರನ್ನು ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆ. ಡಾಲರ್ ಎದುರು ದಿನೇ ದಿನೇ ರುಪಾಯಿ ಮೌಲ್ಯ ಕಳೆದುಕೊಳ್ಳುತ್ತಿದೆ. ಜಿಡಿಪಿ ಕೂಡಾ ಇಳಿಯುವ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ನನ್ನ 51 ವರ್ಷದ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಆದರೀಗ ಹೊಟ್ಟೆಕಿಚ್ಚಿನ ರಾಜಕಾರಣ ನೋಡುತ್ತಿದ್ದೇನೆ ಎಂದರು.
ಕೋವಿಡ್‌ನಿಂದ ದೇಶದಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಅದೆಷ್ಟೋ ಜನ ಹಸಿವಿನಿಂದ ಈಗಲೂ ಸಾಯುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸೋ ಬದಲು ಚೀತಾ ತಂದಿದ್ದಾರೆ. ಚೀತಾ ತಂದಿದ್ದರಿಂದ ಏನೂ ಪ್ರಯೋಜನ ಇಲ್ಲ. ತರದೆ ಇದ್ದರೂ ಏನೂ ಲಾಸ್ ಆಗ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಲು ರಾಹುಲ್ ಗಾಂಧಿಯನ್ನೇ ಒತ್ತಾಯಿಸುತ್ತೇವೆ: ಖರ್ಗೆ