
ಬೆಂಗಳೂರು (ಡಿ.8): ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಸತತ 7ನೇ ಬಾರಿಗೆ ಗುಜರಾತ್‍ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಚುನಾವಣೆಯ ಫಲಿತಾಂಶ ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್.ಆರ್ ನಿರಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ಜನಪ್ರಿಯತೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರ ಸಂಘಟನಾ ಚಾತುರ್ಯ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ತಂತ್ರಗಾರಿಕೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸರಳತೆ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲುವಿಗೆ ಕಾರಣವಾಗಿದೆ ಎಂದು ನಿರಾಣಿ ವಿಶ್ಲೇಷಿಸಿದ್ದಾರೆ.
ಸರ್ವರ ವಿಕಾಸವೇ ಪಕ್ಷದ ಗೆಲುವಿಗೆ ಕಾರಣ: ವಿಶ್ವ ನಾಯಕ ನರೇಂದ್ರಮೋದಿ ಅವರ ಜನಪ್ರಿಯತೆಗೆ ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶವೇ ಸಾಕ್ಷಿ. ಸ್ವಚ್ಛ, ಪಾರದರ್ಶಕ ಹಾಗೂ ಸರ್ವರ ವಿಕಾಸವೇ ಪಕ್ಷದ ಗೆಲುವಿಗೆ ಕಾರಣವಾಗಿದೆ ಎಂದಿದ್ದಾರೆ. ಒಂದು ರಾಜ್ಯದಲ್ಲಿ ಸತತವಾಗಿ 7ನೇ ಬಾರಿ ಅಧಿಕಾರಕ್ಕೆ ಬರುವುದೆಂದರೆ ಸಾಮಾನ್ಯ ಮಾತಲ್ಲ. ಅಲ್ಲಿನ ಜನತೆ ಪಕ್ಷ ಮತ್ತು ನಾಯಕತ್ವದ ಮೇಲೆ ನಂಬಿಕೆ ಇಟ್ಟು ಹಿಂದಿನ ದಾಖಲೆಗಳನ್ನು ಮುರಿದು ಇಷ್ಟು ದೊಡ್ಡ ಮಟ್ಟದಲ್ಲಿ ಜನಾದೇಶ ನೀಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಯಾರು ಏನೇ ಹೇಳಲಿ ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಖಂಡಿತವಾಗಿ ಪರಿಣಾಮ ಬೀರಲಿದೆ. ಇಲ್ಲಿನ ಮತದಾರರು ಕೂಡ ಪ್ರಬುದ್ದರಾಗಿದ್ದು, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂದು ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲೂ ಶೇ.100 ಬಿಜೆಪಿ ಗೆಲುವು: ಕೇಂದ್ರ ಮತ್ತು ರಾಜ್ಯದಲ್ಲೂ ಡಬ್ಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಅಭಿವೃದ್ಧಿ ವೇಗ ಮತ್ತು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಾಯವಾಗಲಿದೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ 100ಕ್ಕೆ ನೂರರಷ್ಟು ಫಲಿತಾಂಶ ಬರಲಿದೆ. ಪ್ರಧಾನಿ ನರೇಂದ್ರಮೋದಿ ಅವರ ಜನಪ್ರಿಯತೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರಳತೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಕ್ಷ ನಾಯಕತ್ವ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಸಂಘಟನೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ನಿರ್ದೇಶನ, ಕೇಂದ್ರ ಮತ್ತು ರಾಜ್ಯ ನಾಯಕರ ಮಾರ್ಗದರ್ಶನ ಮತ್ತು ಸಂಘ ಪರಿವಾರದ ನಾಯಕರ ಸಲಹೆಯಂತೆ ಪಕ್ಷವನ್ನು ಮುನ್ನಡೆಸಲಿದ್ದೇವೆ ಎಂದರು.
ಹಿಮಾಚಲ ಪ್ರದೇಶದಲ್ಲಿ ಸಂಪ್ರದಾಯ ಮುಂದುವರಿಕೆ: ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಅಲ್ಲಿ ಒಂದು ಬಾರಿ ಆಡಳಿತ ನಡೆಸಿದ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ. ನಾವು ಅಲ್ಲಿಯೂ ಕೂಡ ಅಧಿಕಾರಕ್ಕೆ ಬರಬಹುದೆಂಬ ವಿಶ್ವಾಸ ಇಟ್ಟುಕೊಂಡಿದ್ದೆವು. ನಮಗೆ ಏಕೆ ಹಿನ್ನಡೆಯಾಗಿದೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದಾಗಿ ಸಚಿವ ನಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.