
ಅಹಮದಾಬಾದ್ (ಡಿ.1): ಬಹುನಿರೀಕ್ಷಿತ ಗುಜರಾತ್ ವಿಧಾನಸಭೆಗೆ ಗುರುವಾರ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ ಒಟ್ಟು 89 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಒಟ್ಟು ಶೇ.19ರಷ್ಟು ಮತದಾನವಾಗಿದೆ. ಅತ್ಯಂತ ಕನಿಷ್ಠ ಮತದಾನ ಸೂರತ್‌ನ ಕತರಾಗಾಮ್ ಕ್ಷೇತ್ರದಲ್ಲಿ ನಡೆದಿದೆ. ಈ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ಗೋಪಾಲ್ ಇಟಾಲಿಯಾ ಕಣದಲ್ಲಿದ್ದಾರೆ. 19 ಜಿಲ್ಲೆಗಳಲ್ಲಿ ಒಟ್ಟು ಮತದಾನ ನಡೆಯಲಿದ್ದು, 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 2 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಪ್ರಸ್ತುತ ವಿಧಾನಸಬೆಯಲ್ಲಿ ಈ 89 ಕ್ಷೇತ್ರಗಳಲ್ಲಿ ಬಿಜೆಪಿ ಗರಿಷ್ಠ 58, ಕಾಂಗ್ರೆಸ್ 26, ಬಿಟಿಪಿ 2 ಹಾಗೂ ಎನ್‌ಸಿಪಿ 1 ಸೀಟ್‌ಗಳನ್ನು ಹೊಂದಿದೆ. ಜಾಮ್‌ನಗರ, ಮೊರ್ಬಿ, ಕಛ್, ರಾಜ್‌ಕೋಟ್, ಪೋರ್‌ಬಂದರ್ ಹಾಗೂ ಜುನಾಗಢ್ ಕ್ಷೇತ್ರಗಳು ಮೊದಲ ಹಂತದ ಚುನಾವಣೆಯಲ್ಲಿ ಪ್ರಮುಖವಾಗಿದೆ. ಇನ್ನು ನವಸಾರಿ ಜಿಲ್ಲೆಯ ವಸಂದಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿ ನಡೆದಿದೆ. ಈ ತಿಕ್ಕಾಟದಲ್ಲಿ ಬಿಜೆಪಿ ಅಭ್ಯರ್ಥಿ ಪೀಯುಷ್ ಪಟೇಲ್ ಗಾಯಗೊಂಡಿದ್ದಾರೆ. ವಸಂದಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಬಲಿಷ್ಠ ಕೋಟೆಯಾಗಿದ್ದು, ಕಾಂಗ್ರೆಸ್‌ನಿಂದ ಅನಂತ್ ಪಟೇಲ್ ಕಣದಲ್ಲಿದ್ದಾರೆ.
ಜಾಮ್‌ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಟೀಮ್ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ರಾಜ್‌ಕೋಟ್‌ನಲ್ಲಿ ಮತದಾನ ಮಾಡಿದ್ದಾರೆ. ರಿವಾಬಾ ಹೆಸರು ರಾಜ್‌ಕೋಟ್‌ನ ವೋಟರ್ ಲಿಸ್ಟ್‌ನಲ್ಲಿರುವ ಕಾರಣಕ್ಕೆ ವಾರು ಅಲ್ಲಿಯೇ ಬದು ಮತ ಚಲಾವಣೆ ಮಾಡಿದ್ದಾರೆ. ಇದೇ ವೇಳೆ ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಕೂಡ ಸೂರತ್‌ನಲ್ಲಿ ಮತ ಚಲಾಯಿಸಿದ್ದಾರೆ. ಮತ ಚಲಾವಣೆ ಮಾಡಿದ ಬಳಿಕ ಗಾಂಧಿನಗರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ, ದೊಡ್ಡ ಪ್ರಮಾಣದಲ್ಲಿ ಜನರು ಮತಚಲಾವಣೆ ಮಾಡಬೇಕು ಎಂದು ಹೇಳಿದ್ದಾರೆ. ಗುಜರಾತ್‌ನ ಮಿನಿ ಆಫ್ರಿಕಾ ಎಂದು ಕರೆಯಲ್ಪಡುವ ಜಂಬೂರ್ ಗ್ರಾಮದಲ್ಲಿ ಜನರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಅವರಿಗಾಗಿಯೇ ಇಲ್ಲಿ ವಿಶೇಷ ಬುಡಕಟ್ಟು ಮತಗಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಗುಜರಾತ್ ಕಾಂಗ್ರೆಸ್‌ನ ಹಿರಿಯ ನಾಯಕ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರಿ ಮಮ್ತಾಜ್ ಕೂಡ ಮತ ಚಲಾಯಿಸಿದ್ದಾರೆ.
Gujarat assembly election: ಗುಜರಾತ್ ಗದ್ದುಗೆ ಯಾರಿಗೆ? ಏನ್ ಹೇಳುತ್ತೆ ಕೊನೆಯ ಸಮೀಕ್ಷೆ?
100 ವರ್ಷದ ಕುಮುಬೆನ್ ಮತದಾನ: ಶತಾಯುಷಿ ಕುಮುಬೆನ್ ಲೀಲಾಬಾಯಿ ಪಟೇಲ್, ಉಮರ್‌ಗಮ್‌ನಲ್ಲಿ ಮತಚಲಾವಣೆ ಮಾಡಿದರು. ಬಹಳಷ್ಟು ಹಿರಿಯರು ಮೊದಲ ಹಂತದ ಮತದಾನದಲ್ಲಿ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಗುಜರಾತ್‌ನಲ್ಲಿ ಒಟ್ಟು 9.8 ಲಕ್ಷ ಹಿರಿಯರು ಇದ್ದಾರೆ. ರಾಜ್‌ಕೋಟ್ ಮಾಂಧತಸಿನ್ಹ್ ಜಡೇಜಾ ಕುಟುಂಬ ವಿಂಟೇಜ್ ಕಾರಿನಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿತ್ತು.
Gujarat Election: ಮೊದಲ ಹಂತದ ಪ್ರಚಾರ ಮುಕ್ತಾಯ, 89 ಕ್ಷೇತ್ರಗಳಿಗೆ ಡಿ.1ಕ್ಕೆ ಚುನಾವಣೆ!
ಸಿಲಿಂಡರ್ ಕಟ್ಟಿಕೊಂಡು ಮತಗಟ್ಟೆಗೆ ಬಂದ ಕಾಂಗ್ರೆಸ್ ಶಾಸಕ: ಅಮ್ರೇಲಿಯ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ, ಸೈಕಲ್‌ಗೆ ಸಿಲಿಂಡರ್ ಕಟ್ಟಿಕೊಂಡು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾವಣೆ ಮಾಡಿದ್ದಾರೆ. 'ಹಣದುಬ್ಬರ ಹಾಗೂ ನಿರುದ್ಯೋಗ ಗುಜರಾತ್‌ನಲ್ಲಿ ತಾಂಡವವಾಡುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರ ನಿರ್ಧಾರಗಳೇ ಕಾರಣ. ಗ್ಯಾಸ್ ಹಾಗೂ ಇಂಧನ ದರ ಗಗನಕ್ಕೇರಿದೆ. ಶಿಕ್ಷಣವನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಗಳೂ ನಡೆಯುತ್ತಿವೆ. ಈ ಬಾರಿ ಅಧಿಕಾರ ವಿಮುಖವಾಗಲಿದೆ ಕಾಂಗ್ರೆಸ್ ಖಂಡಿತವಾಗಿ ಅಧಿಕಾರ ಪಡೆಯಲಿದೆ' ಎಂದು ಅವರು ಹೇಳಿದ್ದಾರೆ.
ಇಂಧನ ದರ ಹಾಗೂ ಅಡುಗೆ ಅನಿಲ ದರದ ಏರಿಕೆಯ ಕಾರಣದಿಂದಾಗಿ ಧನಾನಿ ತಮ್ಮ ಮನೆಯಿಂದಲೇ ಸೈಕಲ್‌ನ ಹಿಂಬದಿಗೆ ಸಿಲಿಂಡರ್ ಕಟ್ಟಿಕೊಂಡು ಮತಗಟ್ಟೆಗೆ ತೆರಳಿದ್ದರು. ಈ ವೇಳೆ ಅವರ ಕುಟುಂಬದವರು ಹಾಗೂ ಕಾರ್ಯಕರ್ತರು ಕೂಡ ಸಾಥ್ ನೀಡಿದರು. ಅವರೂ ಕೂಡ ಸೈಕಲ್‌ನಲ್ಲಿಯೇ ಮತಗಟ್ಟೆಗೆ ತೆರಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.