ನಾವು ರಾಜ್ಯದ ಹಿತದೃಷ್ಟಿಯಿಂದ ನೆರೆ ರಾಜ್ಯಗಳಲ್ಲಿನ ದರಕ್ಕೆ ಸರಿದೂಗಿಸಲು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಪ್ರಮಾಣದಲ್ಲಿ ಏರಿಕೆ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜೂ.23): ಬಿಜೆಪಿಯವರು ತಮ್ಮ ಆಡಳಿತಾವಧಿಯಲ್ಲಿ ಮಾಡಿದಂತೆ ನಾವು ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿಲ್ಲ. ಕಚ್ಚಾತೈಲ ಬೆಲೆ ಕುಸಿದಾಗಲೂ ಅವರು ಬೆಲೆ ಏರಿಕೆ ಮಾಡಿದ್ದರು. ನಾವು ರಾಜ್ಯದ ಹಿತದೃಷ್ಟಿಯಿಂದ ನೆರೆ ರಾಜ್ಯಗಳಲ್ಲಿನ ದರಕ್ಕೆ ಸರಿದೂಗಿಸಲು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಪ್ರಮಾಣದಲ್ಲಿ ಏರಿಕೆ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆಗೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಎನ್‌ಡಿಎ ಸಂಸದರು ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಯಾರು ಏನಾದರೂ ಆರೋಪ ಮಾಡಲಿ.
ಗ್ಯಾರಂಟಿ ಯೋಜನೆಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಕಾಲಕಾಲಕ್ಕೆ ಆಗಬೇಕಿರುವ ಬೆಲೆ ಏರಿಕೆ ನಾವು ಮಾಡಿದ್ದೇವೆ ಎಂದರು. ನಾವು ಬಹಳ ಕಡಿಮೆ ಪ್ರಮಾಣದಲ್ಲಿ ನೆರೆ ರಾಜ್ಯಗಳ ಬೆಲೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಇಂಧನ ತೈಲ ಬೆಲೆ ಏರಿಕೆ ಮಾಡಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಏನು ಮಾಡಬೇಕೋ ಆ ಕೆಲಸ ಮಾಡುತ್ತೇವೆ. ನಮ್ಮ ಗ್ಯಾರಂಟಿಗಳು ಮುಂದುವರಿಯಲಿದೆ ಎಂದರು. ಸೂರಜ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕುರಿತ ಪ್ರಶ್ನೆಗೆ, ಅವರ ಕುಟುಂಬದಲ್ಲಿ ದೊಡ್ಡವರಿದ್ದಾರೆ. ಅವರು ಉತ್ತರ ನೀಡುತ್ತಾರೆ. ನಮಗೆ ಆ ವಿಚಾರ ಬೇಡ ಎಂದರು.
ಸಿಎಂ ಜೊತೆ ಡಿಕೆಶಿ ಚರ್ಚೆ: ಚನ್ನಪಟ್ಟಣ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗುವುದಾಗಿ ಖುದ್ದು ತಾವೇ ಸುಳಿವು ನೀಡಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚನ್ನಪಟ್ಟಣ ಉಪ ಚುನಾವಣೆ ಉಸ್ತುವಾರಿ ಚೆಲುವರಾಯಸ್ವಾಮಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಶಿವಕುಮಾರ್ ಪರೋಕ್ಷವಾಗಿ ಇರಾದೆ ವ್ಯಕ್ತಪಡಿಸಿದ್ದಾರೆ. ನಾನು ಚನ್ನಪಟ್ಟಣದ ಋಣ ತೀರಿಸಬೇಕಾಗಿದೆ.
ಚನ್ನಪಟ್ಟಣದಲ್ಲಿ ಡಿಕೆಶಿ ಜತೆ ಇನ್ನೂ 4 ಜನ ಸ್ಪರ್ಧೆ ಮಾಡಲಿ: ಎಚ್.ಡಿ.ಕುಮಾರಸ್ವಾಮಿ
ಇಲ್ಲಿನ ಜನ ಒಲವು ತೋರಿದರೆ ನಾನು ಸ್ಪರ್ಧಿಸದೆ ವಿಧಿಯಿಲ್ಲ ಎಂದೆಲ್ಲಾ ಮಾತನಾಡಿರುವ ಅವರು ಕ್ಷೇತ್ರಾದ್ಯಂತ ಟೆಂಪಲ್ ರನ್ ನಡೆಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಪಕ್ಷ ಸೂಚಿಸಿದರೆ ಸ್ಪರ್ಧೆಸದೆ ವಿಧಿಯಿಲ್ಲ. ಹೀಗಾಗಿ ಪಕ್ಷ ಸೂಚಿಸಿದರೆ ನಾನೇ ನಿಲ್ಲುತ್ತೇನೆ. ಒಂದೊಮ್ಮೆ ಬೇರೆಯವರು ಯಾರೇ ನಿಂತರೂ ನನ್ನ ಹೆಸರಲ್ಲೇ ಮತ ಕೇಳುತ್ತಾರೆ. ಹೀಗಾಗಿ ಯಾರೇ ನಿಂತರೂ ನಾನೇ ಅಭ್ಯರ್ಥಿ ಎಂದು ಮಾರ್ಮಿಕವಾಗಿ ನುಡಿದರು.