
ನವದೆಹಲಿ (ಆ.30): ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್‌ಟಿ ಸ್ಲ್ಯಾಬ್‌ಗಳ ಸಂಖ್ಯೆ ಕಡಿತದಿಂದ ರಾಜ್ಯಗಳ ಆದಾಯಕ್ಕೆ ₹85,000 ಕೋಟಿಯಿಂದ ₹2.5 ಲಕ್ಷ ಕೋಟಿವರೆಗೆ ನಷ್ಟ ಉಂಟಾಗಲಿದೆ. ಹೀಗಾಗಿ, 5 ವರ್ಷಗಳ ಮಟ್ಟಿಗೆ ರಾಜ್ಯಗಳಿಗೆ ಜಿಎಸ್‌ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.
‘ಜಿಎಸ್‌ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆ’ಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು. ಜಿಎಸ್‌ಟಿ ಸುಧಾರಣೆ ವೇಳೆ ಆದಾಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಐಷಾರಾಮಿ ಸರಕು ಮತ್ತು ಸೇವೆಗಳು ಹಾಗೂ ತಂಬಾಕಿನಂಥ ವಸ್ತುಗಳ (ಸಿನ್ ಗೂಡ್ಸ್) ಮೇಲೆ ಶೇ.40ರಷ್ಟು ತೆರಿಗೆ ಹಾಕುವ ಪ್ರಸ್ತಾಪವಿದೆ. ಇದರಿಂದ ಬರುವ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಸಭೆಯಲ್ಲಿ ಒತ್ತಾಯಿಸಿವೆ.
ಭೂ ಸುರಕ್ಷಾ ಯೋಜನೆಗೆ ಸಚಿವ ಚಾಲನೆ: ಆಸ್ತಿ ದಾಖಲೆಗಳನ್ನು ಪಡೆಯಲು ನಾಗರಿಕರು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಾಗರಿಕರ ಬೆರಳ ತುದಿಗೆ ರೆಕಾರ್ಡ್ ರೂಮ್ ತಲುಪಿಸುವುದೇ ‘ಭೂ ಸುರಕ್ಷಾ’ ಅಭಿಯಾನದ ಮೂಲ ಧ್ಯೇಯ ಎಂದು ಹೇಳಿದರು. ಭೂ ಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಎಲ್ಲ ತಾಲೂಕು ಕಚೇರಿಗಳಲ್ಲಿರುವ ಪ್ರಮುಖ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಇದಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಲಭ್ಯವಿರುವ ಎಲ್ಲಾ ಹಳೆಯ ಭೂದಾಖಲೆಗಳನ್ನು ಈ ಮೂಲಕ ಡಿಜಿಟಲೀಕರಣ ಮಾಡಿ ರಕ್ಷಿಸಲಾಗುತ್ತದೆ.
ಇದರಿಂದ ರೈತರಿಗೆ ಮಧ್ಯವರ್ತಿಗಳು, ಸರ್ಕಾರಿ ಕಚೇರಿ ಹಾಗೂ ಕೋರ್ಟ್ ಕೇಸುಗಳೆಂದು ಅಲೆಯುವುದು ತಪ್ಪಲಿದ್ದು, ಸಿಗಬೇಕಾದ ಸೌಲಭ್ಯ ಸರಳ ಸುಲಲಿತವಾಗಿ ಸಿಗಲಿದೆ ಎಂದರು. ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಭೂ ದಾಖಲೆಗೆ ಸಂಬಂಧಿಸಿ 100 ಕೋಟಿಗೂ ಅಧಿಕ ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 35 ಕೋಟಿ ಪುಟಗಳು ಸ್ಕ್ಯಾನ್ ಮಾಡಲು ಬಾಕಿ ಇವೆ. ಈ ಕೆಲಸ ತಹಶೀಲ್ದಾರ್ ಕಚೇರಿಗಷ್ಟೇ ಸೀಮಿತವಾಗದೆ ಉಪ ವಿಭಾಗಾಧಿಕಾರಿಗಳು (ಎಸಿ), ಜಿಲ್ಲಾಧಿಕಾರಿಗಳ ಕಚೇರಿಯಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿದಿನ ಸರಾಸರಿಯಾಗಿ 10 ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಮತ್ತಷ್ಟು ವೇಗ ಪಡೆಯಲಿದ್ದು, ಮುಂದಿನ ಡಿಸೆಂಬರ್ ಒಳಗೆ ತಹಶೀಲ್ದಾರ್ ಕಚೇರಿಯ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವುದು. 2026 ಮಾರ್ಚ್ ವೇಳೆಗೆ ಎಸಿ (ಉಪ ವಿಭಾಗಾಧಿಕಾರಿ) ಕಚೇರಿ ರೆಕಾರ್ಡ್ ರೂಮ್ ಗಳಲ್ಲಿರುವ ದಾಖಲೆಗಳ ಸ್ಕ್ಯಾನಿಂಗ್ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.