ಸಭಾಪತಿ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದರೆ ಚಿಂತಿಸುವುದಿಲ್ಲ: ಬಸವರಾಜ ಹೊರಟ್ಟಿ

Published : Aug 30, 2025, 08:19 PM IST
Basavaraj Horatti

ಸಾರಾಂಶ

ಅಧಿಕಾರ ಶಾಶ್ವತವಲ್ಲ. ಅಧಿಕಾರ ಬಿಟ್ಟು ಹೋಗಲು ನಾನು ಯಾವಾಗಲೂ ಹಿಂಜರಿದವನಲ್ಲ. ನಾನು ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಅವರಂತೆ ಮೌಲ್ಯವನ್ನು ಇಟ್ಟುಕೊಂಡು ಬಂದವನು.

ಶಿರಸಿ (ಆ.30): ಅಧಿಕಾರ ಶಾಶ್ವತವಲ್ಲ. ಅಧಿಕಾರ ಬಿಟ್ಟು ಹೋಗಲು ನಾನು ಯಾವಾಗಲೂ ಹಿಂಜರಿದವನಲ್ಲ. ನಾನು ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಅವರಂತೆ ಮೌಲ್ಯವನ್ನು ಇಟ್ಟುಕೊಂಡು ಬಂದವನು. ಹೇಳುವುದೊಂದು ಮಾಡುವುದೊಂದು ನನ್ನ ಜಾಯಮಾನವಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಗರದ ಯಲ್ಲಾಪುರ ನಾಕಾದಲ್ಲಿ ಹೆಗಡೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರ ಪ್ರಶ್ನೆಗೆ ಅವರು ಉತ್ತರಿಸಿದರು.

ಒಂದೆರಡು ಬೆಳವಣಿಗೆ ಹೊರತುಪಡಿಸಿದರೆ ಸರ್ಕಾರ ಬದಲಾದರೂ ಸಭಾಪತಿ ಬದಲಾವಣೆ ಮಾಡಿದ ಉದಾಹರಣೆಗಳಿಲ್ಲ. ಹೀಗಿದ್ದರೂ ನನ್ನನ್ನು ಬದಲಾವಣೆ ಮಾಡುವುದಾದರೆ ಮಾಡಲಿ, ನಾನಂತೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಂಡವನಲ್ಲ. ಮೇಲ್ಮನೆ ಚುನಾವಣೆಯಲ್ಲೂ ಮೌಲ್ಯಗಳು ಕಡಿಮೆಯಾಗುತ್ತಿವೆ. ಅದರ ಗೌರವ ಉಳಿಸುವುದಕ್ಕೆ ಪ್ರಯತ್ನಿಸಿದ್ದೇವೆ ಎಂದರು.

ರಾಜ್ಯ ಇತಿಹಾಸದಲ್ಲಿ ರಾಮಕೃಷ್ಣ ಹೆಗಡೆ ಅವರಂಥ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ, ಎಂದೂ ತತ್ವ, ಆದರ್ಶ, ಮೌಲ್ಯಗಳನ್ನು ಬಿಟ್ಟವರಲ್ಲ. ನನ್ನ ಬದುಕಿನ ಬೆಳವಣಿಗೆಯಲ್ಲಿ ಅವರ ಕೊಡುಗೆಯಿದೆ. ಯಾವತ್ತೂ ನನ್ನ ಹೃದಯದಲ್ಲಿರುವವರು ಹೆಗಡೆಯವರು ಎಂದು ಹೇಳಿದರು. ಈಗ ಮೌಲ್ಯ ಇಲ್ಲದೇ ಕೇವಲ ರಾಜಕಾರಣ ಉಳಿದುಕೊಂಡಿದೆ. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದವರು ಹೆಗಡೆಯವರು ಎಂದರು. ಮುಖ್ಯಮಂತ್ರಿಯಾದವರು ಜನಸಾಮಾನ್ಯರೊಂದಿಗೆ ಹೇಗೆ ಸಂಬಂಧ ಹೊಂದಿರಬೇಕು ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಹೆಗಡೆಯವರು.

45 ವರ್ಷ ನನ್ನ ರಾಜಕಾರಣದಲ್ಲಿ ಹೆಗಡೆಯವರಂತಹ ಮುತ್ಸದ್ಧಿ ರಾಜಕಾರಣಿಯನ್ನು ನಾನು ನೋಡಿಲ್ಲ. ಹೆಗಡೆಯವರು ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ. ರಾಮಕೃಷ್ಣ ಹೆಗಡೆ ನಿಧರಾಗಿದ್ದರೂ ಇಂದಿಗೂ ಜೀವಂತವಾಗಿದ್ದಾರೆ ಎಂದರು. ಮುಖ್ಯ ಅಭ್ಯಾಗತರಾಗಿ ಭಾಗಿಯಾದ ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ರಾಜಕಾರಣ ಇಂದು ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ. ಮತದಾರರು ಸಹ ತಮ್ಮ ಮತಗಳ ಮಹತ್ವ ತಿಳಿದುಕೊಳ್ಳುತ್ತಿಲ್ಲ. ನಾವು ಪ್ರಜಾಪ್ರಭುತ್ವ ಎನ್ನುತ್ತೇವೆ. ಆದರೆ ನಿಜವಾದ ಪ್ರಜಾಭುತ್ವ ಇದೆಯೇ ಎಂಬ ಅನುಮಾನ ಕಾಡುತ್ತಿದೆ.

ಮತ ಮಾರಾಟವಾಗದೇ ಉತ್ತಮ ಅಭ್ಯರ್ಥಿಯ ಆಯ್ಕೆ ಆದರೆ ಅದು ನಿಜವಾದ ಪ್ರಜಾಪ್ರಭುತ್ವವಾಗಿರುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರ ಕಂಡ ಸಜ್ಜನ, ನಿಷ್ಠಾವಂತ ರಾಜಕಾರಣಿ ರಾಮಕೃಷ್ಣ ಹೆಗಡೆ ಮುಖ್ಯವೆನ್ನಿಸುತ್ತಾರೆ. ಕೇವಲ ಆರೋಪ ಮಾತ್ರಕ್ಕೆ ರಾಜೀನಾಮೆ ನೀಡಿದ ವ್ಯತ್ವಿತ್ವ ಅವರದು. ಹೆಗಡೆಯವರು ಪ್ರಧಾನಿಯಾಗಲು ಉತ್ತಮ ವ್ಯಕ್ತಿಯಾಗಿದ್ದರು. ಸಮಾಜದ ಸೇವೆಗೆ ದೇಶ ಸೇವೆಗೆ ಹೆಗಡೆಯವರ ಆದರ್ಶಗಳೊಂದಿಗೆ ಮುಂದೆ ಬರಬೇಕು ಎಂದು ಯುವಕರಿಗೆ ಮನವಿ ಮಾಡುತ್ತಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ