ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ: ಡಿಕೆ ಶಿವಕುಮಾರ್‌

Kannadaprabha News   | Kannada Prabha
Published : Nov 22, 2025, 07:33 AM IST
DK Shivakumar

ಸಾರಾಂಶ

ನನ್ನ ಬಳಿ ಯಾವ ಬಣವೂ ಇಲ್ಲ, ನಾನು ಯಾವುದೇ ಗುಂಪು ಮಾಡಲು ಇಷ್ಟಪಡುವುದಿಲ್ಲ. ಕಾಂಗ್ರೆಸ್‌ನ 140 ಶಾಸಕರಿಗೂ ನಾನು ಅಧ್ಯಕ್ಷ, ಎಲ್ಲ ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬೆಂಗಳೂರು : ನನ್ನ ಬಳಿ ಯಾವ ಬಣವೂ ಇಲ್ಲ, ನಾನು ಯಾವುದೇ ಗುಂಪು ಮಾಡಲು ಇಷ್ಟಪಡುವುದಿಲ್ಲ. ಕಾಂಗ್ರೆಸ್‌ನ 140 ಶಾಸಕರಿಗೂ ನಾನು ಅಧ್ಯಕ್ಷ, ಎಲ್ಲ ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಯಾವ ಗುಂಪನ್ನು ದೆಹಲಿಗೆ ಕರೆದುಕೊಂಡು ಹೋಗಲೂ ನನಗೆ ಇಚ್ಛೆಯಿಲ್ಲ. ನಾನು ಗುಂಪುಗಾರಿಕೆ ಮಾಡುವವನಲ್ಲ. ಮುಖ್ಯಮಂತ್ರಿಯವರು ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರಬಹುದು. ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುವ ಹಕ್ಕು ಅವರಿಗಿದೆ. ಹಿಂದಿನಿಂದಲೂ ಕೆಲವರು ತಾವಾಗೇ ಹೋದರೆ, ಇನ್ನು ಕೆಲವರು ಮುಖ್ಯಮಂತ್ರಿ ಅವರ ಜತೆಯೂ ಹೋಗಿದ್ದರು. ಅದರಲ್ಲಿ ತಪ್ಪೇನಿಲ್ಲ. ನಾವು ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದರು.

ಸಿಎಂಗೆ ಆಲ್‌ ದಿ ಬೆಸ್ಟ್‌:

ಸಿಎಂ ಸಿದ್ದರಾಮಯ್ಯ ಅವರು 5 ವರ್ಷ ತಾವೇ ಸಿಎಂ ಆಗಿರುವುದಾಗಿ ಹೇಳಿದ್ದಾರೆ. ‘ಐ ವಿಶ್‌ ಹಿಮ್‌ ಆಲ್‌ ದ ಬೆಸ್ಟ್‌’ ಎಂದು ಹೇಳುತ್ತೇನೆ. ಇನ್ನು, ಸಿಎಂ ಅವರು ತಮ್ಮ ವಿಚಾರಧಾರೆಯನ್ನು ಈಗಾಗಲೇ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಹೈಕಮಾಂಡ್‌ ಹೇಳಿದಂತೆ ಕೇಳುವುದಾಗಿ ಸಿಎಂ ಹೇಳಿದ್ದಾರೆ. ನಾನೂ ಅದನ್ನೇ ಹೇಳಿದ್ದೇನೆ. ನಾನು ಮತ್ತು ಸಿಎಂ ಅದಕ್ಕೆ ಬದ್ಧರಾಗಿದ್ದೇವೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎಂದು ಶಿವಕುಮಾರ್‌ ಹೇಳಿದರು.

ನಾವು ಮುಖ್ಯಮಂತ್ರಿ ಅವರ ಅಧಿಕಾರವನ್ನು ಪ್ರಶ್ನೆ ಮಾಡಿಲ್ಲ. ಸಚಿವ ಸಂಪುಟ ಪುನಾರಚನೆ ಮಾಡಿ ಎಂದೂ ಹೇಳಿಲ್ಲ. ಅವರ ಅಧಿಕಾರದಂತೆ ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗೆಯೇ, 5 ವರ್ಷ ಅವರು ಸಿಎಂ ಆಗಿರುವುದಿಲ್ಲ ಎಂದೂ ಹೇಳಿಲ್ಲ. ಅವರು 5 ವರ್ಷ ತಾವೇ ಇರುತ್ತೇವೆ ಎಂದಿದ್ದಾರೆ. ದೊಡ್ಡವರು ಹೇಳಿದ್ದನ್ನು ನಾವೆಲ್ಲ ಚಿಕ್ಕವರು ಕೇಳಿಸಿಕೊಂಡು, ಗೌರವದಿಂದ, ನಮ್ರತೆಯಿಂದ ಇರಬೇಕು ಎಂದರು.

ಸಿಎಂ ಮತ್ತು ಎಐಸಿಸಿ ಅಧ್ಯಕ್ಷರ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಅವರು ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಮಾತನಾಡುವುದರಲ್ಲಿ ತಪ್ಪೇನಿದೆ? ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ನನಗೂ ಗೊಂದಲವಿಲ್ಲ, ಸಿಎಂ ಅವರಿಗೂ ಗೊಂದಲವಿಲ್ಲ. ಗೊಂದಲ ಇರುವುದೆಲ್ಲ ಮಾಧ್ಯಮದವರಿಗೆ ಮಾತ್ರ ಎಂದು ತಿಳಿಸಿದರು.

ಸಚಿವ ಸತೀಶ್‌ ಜಾರಕಿಹೊಳಿ ಮನೆಯಲ್ಲಿ ಔತಣ ಕೂಟ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, ನನಗೆ ಯಾವುದೇ ಡಿನ್ನರ್‌ ಸಭೆಗಳ ಬಗ್ಗೆ ತಿಳಿದಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಈ ರೀತಿಯ ಸಭೆಗಳು ನಡೆಯುತ್ತಿದೆ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ, 4-5 ಡಿಸಿಎಂ ಹುದ್ದೆ ಸೃಷ್ಟಿಗೆ ಸಭೆಗಳನ್ನು ಮಾಡಿದ್ದು ನೋಡಿದ್ದೇನೆ. ಅದೇನು ಹೊಸತಲ್ಲ. ಅವರು ಮತ್ತಷ್ಟು ಸಭೆ ಮಾಡಲಿ ಎಂದು ಹೇಳಿದರು.

ಚುನಾವಣೆಗಾಗಿ ಎಂಎಲ್ಸಿಗಳ ಜತೆ ಸಭೆ:

ವಿಧಾನಪರಿಷತ್‌ ಸದಸ್ಯರೊಂದಿಗೆ ಸಭೆ ನಡೆಸಿದ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್‌, ಶಿಕ್ಷಕ ಮತ್ತು ಪದವೀಧರ ವಿಧಾನಪರಿಷತ್‌ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನಪರಿಷತ್‌ ಸದಸ್ಯರೊಂದಿಗೆ ಗುರುವಾರ ಸಭೆ ಮಾಡಿದ್ದೇನೆ. 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಬೇಕಿದೆ. ಹಾಗೆಯೇ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ಪಾಲಿಕೆಗಳಿಗೆ ಚುನಾವಣೆ ನಡೆಯಲಿದ್ದು, ಅದಕ್ಕೂ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ. ಆ ಪ್ರಕ್ರಿಯೆಗಳನ್ನು ತೊಡಗಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ