ಕೊಟ್ಟ ಭರವಸೆ ಈಡೇರಿಸದ ಸಂಪೂರ್ಣ ಶ್ರೇಯಸ್ಸು ಸಿಎಂ, ಡಿಸಿಎಂಗೆ ಸಲ್ಲುತ್ತದೆ.
-ಆರ್.ಅಶೋಕ, ವಿರೋಧಪಕ್ಷದ ನಾಯಕರು
‘ನವೆಂಬರ್ ಕ್ರಾಂತಿʼ ಎಂದು ಹೇಳಿಕೊಂಡು ಭ್ರಷ್ಟಾಚಾರ, ಹಿಂದೂ ವಿರೋಧಿ, ಮುಸ್ಲಿಂ ತುಷ್ಟೀಕರಣ, ಮಹಿಳಾ ವಿರೋಧಿ ದುರಾಡಳಿತ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಎರಡೂವರೆ ವರ್ಷ ಸಂದಿದೆ. ಇದೇ ಸಮಯದಲ್ಲಿ ಮುಖ್ಯಮಂತ್ರಿ ಬದಲಾಯಿಸುವ ಅಥವಾ ಸಿದ್ದರಾಮಯ್ಯನವರನ್ನೇ ಮುಂದುವರಿಸುವ ಕೆಲಸದಲ್ಲಿ ಕಾಂಗ್ರೆಸ್ ನಾಯಕರು ತೊಡಗಿದ್ದಾರೆ. ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಈ ಕಾದಾಟದ ನಡುವೆ ರಾಜ್ಯದ ಅಭಿವೃದ್ಧಿ ಮೂಲೆಗುಂಪಾಗಿದೆ.
ಈ ಎರಡೂವರೆ ವರ್ಷಗಳ ಅಭಿವೃದ್ಧಿಹೀನ ಆಡಳಿತವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ‘ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಜೊತೆ ಪ್ರಗತಿಪರ ಆಡಳಿತ’ ಎಂದು ಪತ್ರಿಕಾ ಜಾಹೀರಾತಿನಲ್ಲಿ ಬಣ್ಣಿಸಿಕೊಂಡಿದ್ದಾರೆ. ಇದನ್ನು ಗ್ಯಾರಂಟಿ ಸರ್ಕಾರ ಎಂದು ಹೇಳಿಕೊಂಡಿದ್ದಾರೆ. ಇದು ಕೂಡ ನಿಜ. ಏಕೆಂದರೆ ಈ ಸರ್ಕಾರ ಗ್ಯಾರಂಟಿಗಳನ್ನು ಬಿಟ್ಟು ಬೇರೇನೂ ನೀಡಿಲ್ಲ. ಆ ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ನೀಡಿಲ್ಲ. ‘ಮಾತಿಗೆ ಬದ್ಧ ಪ್ರಗತಿಗೆ ಸಿದ್ಧ’ ಎಂಬ ಕಾಂಗ್ರೆಸ್‌ನ ಘೋಷಣೆಯನ್ನು ‘ದುರಾಡಳಿತಕ್ಕೆ ಬದ್ಧ, ಲೂಟಿಗೆ ಸಿದ್ಧ’ ಎಂದು ಬದಲಿಸಿಕೊಳ್ಳಬಹುದು.
ಪ್ರಗತಿಪರ ಎಂಬುದರ ಅರ್ಥವೇನು ಎಂದು ಕಾಂಗ್ರೆಸ್ ನಾಯಕರೇ ಪ್ರಶ್ನೆ ಮಾಡಿಕೊಳ್ಳಬೇಕು. ಏಕೆಂದರೆ ಯಾವುದೇ ಇಲಾಖೆಯಲ್ಲಿ ಪ್ರಗತಿ ಉಂಟಾಗಿಲ್ಲ. ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ್ದ 134 ಭರವಸೆಗಳಲ್ಲಿ ಈಡೇರಿಸಿದ್ದು ಮಾತ್ರ ಕೇವಲ ಒಂಬತ್ತು. ಸುಮಾರು 50 ಭರವಸೆಗಳನ್ನು ಈಡೇರಿಸಲು ಕ್ರಮ ವಹಿಸಿದ್ದರೂ, ಇನ್ನೂ 73 ಭರವಸೆಗಳ ಬಗ್ಗೆ ಯಾವುದೇ ಕ್ರಮ ಜರುಗಿಲ್ಲ.
ಖಜಾನೆ ಸಂಪೂರ್ಣವಾಗಿ ಖಾಲಿಯಾಗಿರುವುದು ಇದರಿಂದಲೇ ಸ್ಪಷ್ಟವಾಗುತ್ತದೆ. 2025-26 ನೇ ಸಾಲಿನ ಬಜೆಟ್‌ನಲ್ಲಿ ಇಲಾಖೆಗಳಿಗೆ 3.53 ಲಕ್ಷ ಕೋಟಿ ರು. ಹಂಚಿಕೆ ಮಾಡಲಾಗಿದೆ. ಖರ್ಚಾಗಿರುವುದು ಮಾತ್ರ 1.06 ಲಕ್ಷ ಕೋಟಿ ರು. ಅಂದರೆ ಇನ್ನೂ ಶೇ.70ರಷ್ಟು ಮೊತ್ತವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. 2.46 ಲಕ್ಷ ಕೋಟಿ ರು. ಮೊತ್ತವನ್ನು ಉಳಿದ ಸಮಯದಲ್ಲಿ ಬಳಸಿಕೊಳ್ಳಬೇಕಿದೆ. ಈಗಾಗಲೇ 1.06 ಲಕ್ಷ ಕೋಟಿ ರು. ಬಳಕೆಯಾಗಿದೆ ಎನ್ನಲಾದರೂ ಅದರ ಪರಿಣಾಮ ಎಲ್ಲೂ ಕಾಣುತ್ತಿಲ್ಲ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಹತ್ತಿಕ್ಕಲು ಯತ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 2,964 ಕೋಟಿ ರು. (ಶೇ.11), ಐಟಿ ಬಿಟಿ, ವಿಜ್ಞಾನ-ತಂತ್ರಜ್ಞಾನ ಇಲಾಖೆಯಲ್ಲಿ 117 ಕೋಟಿ ರು. (ಶೇ.10) ಖರ್ಚಾಗಿದೆ. ಅಂದರೆ ಎಲ್ಲೆಲ್ಲೂ ಇವರ ಸಾಧನೆ ಪ್ರಗತಿಗೆ ವಿರುದ್ಧವಾಗಿ ಸಾಗುತ್ತಿದೆ. ಇದರ ಜೊತೆಗೆ ಶೇ.60 ಕಮಿಷನ್, ಅಬಕಾರಿ ಇಲಾಖೆಯಲ್ಲಿ ಹಗರಣ, ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಹೀಗೆ ಸಾಲು ಸಾಲು ಭ್ರಷ್ಟಾಚಾರದಿಂದಾಗಿ ಆರ್ಥಿಕ ಪ್ರಗತಿ ಹಾಗೂ ಪಾರದರ್ಶಕತೆ ಮಾಯವಾಗಿದೆ.
ಈ ಸರ್ಕಾರ ಮಾಡಿರುವ ದೊಡ್ಡ ಸಾಧನೆ ಎಂದರೆ ಅದು ತೆರಿಗೆಗಳ ಏರಿಕೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಿಎಸ್ಟಿಯನ್ನು ಇಳಿಕೆ ಮಾಡಿ ಕ್ರಾಂತಿಕಾರಿ ನಡೆ ಇರಿಸಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪ ಮಾಡಿಕೊಂಡೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ನಂತರ ಗ್ಯಾರಂಟಿಗಳ ಅನುಷ್ಠಾನದೊಂದಿಗೆ ತೆರಿಗೆಗಳ ಭಾರವೂ ಹೆಚ್ಚಾಗಿದೆ. ತೆರಿಗೆಯಲ್ಲಿ ಒಂದಷ್ಟು ಸುಧಾರಣೆಗಳನ್ನು ತಂದು ಜನಜೀವನಕ್ಕೆ ಅನುಕೂಲ ಮಾಡಿಕೊಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಕಾಂಗ್ರೆಸ್ ಸರ್ಕಾರದಿಂದ 3️ ಬಾರಿ ಹಾಲಿನ ದರ ಏರಿಕೆಯಾಗಿದೆ. ಪೆಟ್ರೋಲ್ 3 ರು., ಡೀಸೆಲ್ 3.50 ರು. ಹೆಚ್ಚಳವಾಗಿದೆ. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚುವರಿ ಸೆಸ್ ಸಂಗ್ರಹಿಸಲು ಪೆಟ್ರೋಲ್, ಡೀಸೆಲ್, ಎಥೆನಾಲ್ ಮೇಲೆ 1 ರು. ಸೆಸ್ ವಿಧಿಸಲು ಕಾರ್ಮಿಕರ ಇಲಾಖೆಯಿಂದ ಪ್ರಸ್ತಾವ ಸಿದ್ಧವಾಗಿದೆ. ಆಸ್ತಿ ನೋಂದಣಿ ದರ ಏರಿಕೆ, ಮುದ್ರಾಂಕ ಶುಲ್ಕ ಏರಿಕೆ ಜನನ-ಮರಣ ಪ್ರಮಾಣ ಪತ್ರದ ಶುಲ್ಕ ಏರಿಕೆಯಾಗಿದೆ. ಬೆಂಗಳೂರಿಗರಿಗೆ ಕಸ ಸೆಸ್ ವಿಧಿಸಲಾಗಿದೆ. ಹೋಟೆಲ್‌ಗಳಿಗೆ ಈ ಮೊದಲು ಒಂದು ಕೆ.ಜಿ ಕಸಕ್ಕೆ 5 ರು. ಇತ್ತು. ಈಗ 12 ರು.ಗೆ ಏರಿಕೆ ಮಾಡಲಾಗಿದೆ.
ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಶೇ.12 ರಿಂದ ಶೇ.5ಕ್ಕೆ ಇಳಿಸಲಾಗಿದೆ. ಇದನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಈ ಹಿಂದೆ ಒಂದು ಲೀಟರ್ ನಂದಿನಿ ತುಪ್ಪ 610 ರು.ಗೆ ಮಾರಾಟವಾಗುತ್ತಿತ್ತು. ಇತ್ತೀಚೆಗೆ 90 ರುಪಾಯಿಗಳ ಹೆಚ್ಚಳದೊಂದಿಗೆ, ಗ್ರಾಹಕರು ಒಂದು ಲೀಟರ್ ನಂದಿನಿ ತುಪ್ಪಕ್ಕಾಗಿ 700 ರು. ಪಾವತಿಸಬೇಕಾಗಿದೆ.
ರೈತ ವಿರೋಧಿ ಸರ್ಕಾರ:
ಕಬ್ಬು ಬೆಳೆಗಾರರ ಹೋರಾಟ ಈಗಲೂ ಮುಂದುವರಿದಿದ್ದು, ಅದನ್ನು ಬಗೆಹರಿಸಲು ಈ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. 2023-24 ರಲ್ಲಿ 11 ಜಿಲ್ಲೆಗಳಲ್ಲಿ ಸಾಲಬಾಧೆಯಿಂದಾಗಿ 32 ಕಬ್ಬು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮುಂಗಾರಿನಲ್ಲಿ 16 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. 2,998 ಕೋಟಿ ರು. ಪರಿಹಾರ ನೀಡಬೇಕಿದೆ. ಆದರೆ ಪರಿಹಾರ ಕೊಟ್ಟಿರುವುದು 2 ಜಿಲ್ಲೆಗಳಿಗೆ ಮಾತ್ರ.
ಒಟ್ಟು 3,447 ಕೋಟಿ ರು. ಮೌಲ್ಯದ ಆಸ್ತಿಹಾನಿಯಾಗಿದೆ. ಈ ವರ್ಷ ರಾಜ್ಯ ಸರ್ಕಾರದಿಂದ 2,998 ಕೋಟಿ ರು. ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ. ಸರಿ ಇದನ್ನು ಶ್ಲಾಘಿಸೋಣ ಎಂದರೆ ಅಲ್ಲೂ ಒಂದು ದೊಡ್ಡ ತಂತ್ರವನ್ನು ಹೆಣೆಯಲಾಗಿದೆ. ಅತಿವೃಷ್ಟಿಯಿಂದ ಮನೆ ಹಾನಿ, ಆಸ್ತಿ, ರಸ್ತೆ, ಸೇತುವೆ, ಶಾಲೆ ಹಾನಿಗೂ ಪರಿಹಾರ ಕೊಡಬೇಕಿದೆ. ಆದರೆ ನಾವು ಬೆಳೆ ಹಾನಿಗೆ ಮಾತ್ರ ಪರಿಹಾರ ಕೊಡುತ್ತೇವೆ. ಮನೆ ಹಾನಿ, ಆಸ್ತಿ ಹಾನಿಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ನಿಂದ ಪರಿಹಾರ ಕೊಡಲಿ ಎಂಬುದು ರಾಜ್ಯ ಸರ್ಕಾರ ಕುತಂತ್ರ. ಅದಕ್ಕಾಗಿ 1,545 ಕೋಟಿ ರು. ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಈ ರೀತಿಯ ರಾಜಕಾರಣದಿಂದಲೇ ರೈತರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಇದರ ಜೊತೆಗೆ ಹಿಂದೂ ಸಂಘಟನೆಗಳ ಮೇಲೆ ದಾಳಿ, ಮುಸ್ಲಿಂ ತುಷ್ಟೀಕರಣ, ಬ್ರ್ಯಾಂಡ್ ಬೆಂಗಳೂರು ಮಾಡಲು ಹೋಗಿ ಸುರಂಗ ಯೋಜನೆ ರೂಪಿಸಿ ಅದರಲ್ಲಿ ಲೂಟಿ, ಜಿಬಿಎ ಹೆಸರಿನಲ್ಲಿ ಬೆಂಗಳೂರು ವಿಭಜನೆ, ಹೀಗೆ ಈ ಸರ್ಕಾರ ಮಾಡಬಾ ರದ್ದನ್ನು ಮಾಡಿ ಜನರ ಜೀವನವನ್ನೇ ದಿಕ್ಕಾಪಾಲು ಮಾಡುತ್ತಿದೆ. ಇಷ್ಟೆಲ್ಲ ಅವಾಂತರಗಳಾದ ನಂತರವೂ ಪ್ರಗತಿಪರ, ಸಿದ್ಧ ಬದ್ಧ ಎಂಬೆಲ್ಲ ಪದಪುಂಜ ಪೋಣಿಸಿ ಸಾಧನೆಗಳನ್ನು ಹೇಳಿಕೊಳ್ಳಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಸರ್ಕಾರ ನಡುವೆಯೇ ಬಿದ್ದುಹೋಗಿ ಹೊಸದಾಗಿ ವಿಧಾನಸಭೆ ಚುನಾವಣೆ ನಡೆಯಬಹುದು. ಅಂತೂ ಕೊಟ್ಟ ಮಾತನ್ನು ಸಂಪೂರ್ಣವಾಗಿ ತಪ್ಪಿದ ಯಶಸ್ಸು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ಗೆ ಸಲ್ಲುತ್ತದೆ. ಇದೇ ಇವರ ನಿಜವಾದ ಪೊಳ್ಳು ಗ್ಯಾರಂಟಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.