ಕರ್ನಾಟಕಕ್ಕೆ ಅನುದಾನ ತಾರತಮ್ಯ: ಕೃಷ್ಣ ಬೈರೆ ಗೌಡ ಅಸಮಾಧಾನ

By Kannadaprabha NewsFirst Published Feb 7, 2024, 1:00 AM IST
Highlights

ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದಕ್ಕೆ ಲೆಹರ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿ, ಕೇಂದ್ರ, ರಾಜ್ಯ ಸರ್ಕಾರಗಳೆರಡರ ಬಜೆಟ್ ಜಾಸ್ತಿಯಾಗಿದೆ. ಆದರೆ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ಅಷ್ಟೇ ಉಳಿದಿದೆ ಎಂದ ಸಚಿವ ಕೃಷ್ಣ ಬೈರೆಗೌಡ 
 

ಮಡಿಕೇರಿ(ಫೆ.07): 2017 ರಲ್ಲಿ ಕೇಂದ್ರ ಬಜೆಟ್ 24 ಲಕ್ಷ ಕೋಟಿ ಇತ್ತು. ಅಂದು ಕರ್ನಾಟಕಕ್ಕೆ 52 ಸಾವಿರ ಕೋಟಿ ರು. ಅನುದಾನ ಬರುತ್ತಿತ್ತು. ಇಂದು ಕೇಂದ್ರದ ಬಜೆಟ್ 45 ಲಕ್ಷ ಕೋಟಿ ರು. ಇದೆ. ಆದರೆ ಇಂದಿಗೂ ರಾಜ್ಯಕ್ಕೆ ಅದೇ 52 ಸಾವಿರ ಕೋಟಿ ಅನುದಾನವಷ್ಟೇ ಬರುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದಕ್ಕೆ ಲೆಹರ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿ, ಕೇಂದ್ರ, ರಾಜ್ಯ ಸರ್ಕಾರಗಳೆರಡರ ಬಜೆಟ್ ಜಾಸ್ತಿಯಾಗಿದೆ. ಆದರೆ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ಅಷ್ಟೇ ಉಳಿದಿದೆ ಎಂದರು.

ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!

ರಾಜ್ಯಕ್ಕೆ ಬರಗಾಲ ಬಂದು ಪರಿಹಾರಕ್ಕಾಗಿ ಕಳೆದ ಸೆ.23 ರಂದೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಇದಾಗಿ ನಾಲ್ಕುವರೆ ತಿಂಗಳಾಯ್ತು. ನಮ್ಮ ಮನವಿ ಬಗ್ಗೆ ತೀರ್ಮಾನವನ್ನು ಮಾಡಿಲ್ಲ. ಕರ್ನಾಟಕದ ರೈತರು ಸಂಕಷ್ಟದಲ್ಲಿ ಇದ್ದಾರೆ. ಆದರೂ ಕೇಂದ್ರ ಸರ್ಕಾರ ರೈತರನ್ನು ಇಷ್ಟು ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.

ರಾಜ್ಯಕ್ಕೆ ಅನ್ಯಾಯ ಸ್ಪಷ್ಟ: ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಲು ಕ್ರಮ ತೆಗೆದುಕೊಂಡಿಲ್ಲ. ಭದ್ರ ಮೇಲ್ದಂಡೆ ಯೋಜನೆ ಕಳೆದ ಬಜೆಟ್ ನಲ್ಲಿ 5300 ಕೋಟಿ ರು. ಘೋಷಿಸಲಾಗಿತ್ತು. ಇದುವರೆಗೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಮಹದಾಯಿ ಯೋಜನೆಗೆ ಪರಿಸರ ಖಾತೆಯಿಂದ ಕ್ಲಿಯರೆನ್ಸ್ ಕೊಟ್ಟಿಲ್ಲ. ಇವೆಲ್ಲಾ ವಿಷಯಗಳನ್ನು ನೋಡಿದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವುದು ಸ್ಪಷ್ಟ. ಕರ್ನಾಟಕ ರಾಜ್ಯದ ಮಾತ್ರ ಅಭಿಪ್ರಾಯ ಅಲ್ಲ. ಕೇರಳ ಸರ್ಕಾರವೂ ದೆಹಲಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ.

ತಮಿಳುನಾಡಿನವರೂ ಫೆ.8ರಂದು ದೆಹಲಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಕೊಲ್ಕೊತ್ತಾದಲ್ಲಿ ಪ್ರತಿಭಟನೆ ಮಾಡಿದೆ. ಇವೆಲ್ಲವೂ ಕೇಂದ್ರದ ಮಲತಾಯಿ ಧೋರಣೆ ಅಲ್ಲವೆ. ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳಿಗೆ ಅದರಲ್ಲೂ ದಕ್ಷಿಣದ ರಾಜ್ಯಗಳಿಗೆ ಈ ರೀತಿ ಮಲತಾಯಿ ಧೋರಣೆ ಏಕೆ ಎಂದು ಅವರು ಪ್ರಶ್ನಿಸಿದರು.

click me!