
ಹುಬ್ಬಳ್ಳಿ (ಜು.18): ತಮ್ಮ ಕುರ್ಚಿಗೆ ಕಂಟಕ ಬಂದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗದವರು ನೆನಪಾಗುತ್ತಾರೆ. ಹಿಂದುಳಿದ ವರ್ಗದವರ ಜಾತಿಗಣತಿಗೆ 2013ರಲ್ಲಿ ಕಾಂತರಾಜ ಆಯೋಗ ರಚಿಸಿ, ಅದರ ವರದಿಯನ್ನು ಅನುಷ್ಠಾನಕ್ಕೆ ತರದೆ ಅನ್ಯಾಯ ಮಾಡಿದ್ದಾರೆ. ಅದನ್ನು ವರದಿ ಎಂದು ಹೇಳದೆ ಬಚ್ಚಿಟ್ಟಿರುವ ಮಹಾ ಮೋಸಗಾರ ಸಿದ್ದರಾಮಯ್ಯ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರ್ಚಿಗಾಗಿ ಕಾಂಗ್ರೆಸ್ಸಿಗರ ನಡುವೆ ಮೂರ್ನಾಲ್ಕು ಗುಂಪುಗಳು ರಚನೆಯಾಗಿದೆ. ಹೀಗಾಗಿ, ಸಿದ್ದರಾಮಯ್ಯ ಹಿಂದುಳಿದ ವರ್ಗ, ಅಹಿಂದ ಎನ್ನುವ ಮೋಸದಾಟಕ್ಕೆ ಚಾಲನೆ ನೀಡಿದ್ದಾರೆ ಎಂದು ದೂರಿದರು.
ರಾಹುಲ್ ಯಾವೂರ ದಾಸಯ್ಯ: ಎಐಸಿಸಿ ಸಭೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಹಿಂದುಳಿದ ವರ್ಗಗಳ ಬಿರುದು ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿ, ನರೇಂದ್ರ ಮೋದಿ 11ವರ್ಷ ದೇಶದ ಪ್ರಧಾನಿಯಾಗಿ, 12 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಕೆಲಸ ಮಾಡಿದವರು. ದೇಶದ ಪ್ರಧಾನಿ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಹೀಗಿರುವಾಗ ರಾಹುಲ್ ಗಾಂಧಿ ಯಾವೂರ ದಾಸಯ್ಯ ಎಂದು ವ್ಯಂಗ್ಯವಾಡಿದರು. ದೇಶದ ಹಿಂದುಳಿದ ವರ್ಗಗಳ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ವ್ಯಕ್ತಿ ರಾಹುಲ್ ಗಾಂಧಿ. ಅವರಿಗೂ ಹಿಂದುಳಿದ ವರ್ಗದವರಿಗೂ ಏನ್ ಸಂಬಂಧ?
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಿಂದುಳಿದವರು ಯಾವ ರೀತಿ ಬದುಕುತ್ತಿದ್ದಾರೆ ಎನ್ನುವ ಕಲ್ಪನೆಯೂ ಅವರಿಗಿಲ್ಲ ಎಂದರು. ಸುರ್ಜೆವಾಲಾ ನಡೆಸಿದ ಶಾಸಕರ ಸಭೆ ಕುರಿತು ಪ್ರತಿಕ್ರಿಯಿಸಿ, ಪಕ್ಷವೊಂದರ ಪದಾಧಿಕಾರಿಗೆ ಸಂವಿಧಾನ ಬದ್ಧವಾಗಿ ಚುನಾಯಿತ ಶಾಸಕರ ಜತೆ ಸಭೆ ನಡೆಸಲು ಯಾವುದೇ ಅಧಿಕಾರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
4 ಗುಂಪುಗಳ ಕಚ್ಚಾಟ: ಮುಖ್ಯಮಂತ್ರಿ ಆಗುವುದಕ್ಕೆಂದೇ ಕಾಂಗ್ರೆಸ್ ಪಕ್ಷದಲ್ಲಿ 4 ಗುಂಪುಗಳಾಗಿ ಶಾಸಕರು, ಸಂಸದರು ಪರಸ್ಪರ ಕಚ್ಚಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳು ಸಿದ್ದರಾಮಯ್ಯನ ವಸೂಲಿ ಕೇಂದ್ರಗಳಾಗಿವೆ ಎಂದು ಹರಿಹಾಯ್ದರು. ಜನರ ಸೇವೆ, ರಾಜ್ಯದ ಅಭಿವೃದ್ಧಿ ಮಾಡಬೇಕೆಂಬುದೇ ಕಾಂಗ್ರೆಸ್‌ನವರಲ್ಲಿ ಇಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನರಿಗೆ ಮೋಸ ಮಾಡಿ, ಜನರ ಮನಸ್ಸನ್ನು ಕದ್ದು ಅಧಿಕಾರಕ್ಕೆ ಬಂದವರು ಎಂದು ದೂರಿದರು.
ಸರ್ಕಾರಿ ಕಚೇರಿಗಳನ್ನೇ ವಸೂಲಿ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಹಣ ವಸೂಲಿಗೆ ರಿಟೇಲ್ ಶಾಪ್ ತರಹ ಅವುಗಳಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಭ್ರಷ್ಟಾಚಾರದ ರಿಟೇಲ್ ಶಾಪ್ ಇಟ್ಟಿರುವ ಸಿದ್ದರಾಮಯ್ಯ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಎಐಸಿಸಿ ಮುಖಂಡ ಸುರ್ಜೀವಾಲಾ ಕರ್ನಾಟಕಕ್ಕೆ ಬಂದು ಕಾಂಗ್ರೆಸ್‌ನ ಸಚಿವರು, ಶಾಸಕರು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ಎಐಸಿಸಿ ಒಬಿಸಿ ಕಮಿಟಿ ಅಧ್ಯಕ್ಷರಾಗಿ ಮಾಡಿರುವುದು ಪ್ರಮೋಷನ್ ಆಗಿ ಅಲ್ಲ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯಗೆ ಕಿತ್ತು ಹಾಕಲು ಅಂತಹ ಹುದ್ದೆ ನೀಡಿದ್ದಾರಷ್ಟೆ ಎಂದು ಗೋವಿಂದ ಕಾರಜೋಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.