
ಗದಗ (ಜು.18): ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಷಯದಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟವಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಪಕ್ಷ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಕರ್ನಾಟಕದಲ್ಲಿ ಪ್ರಕ್ರಿಯೆ ನಡೆದು ಬಳಿಕ ಘೋಷಣೆಯಾಗಲಿದೆ ಎಂದರು. ನಮ್ಮ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗುತ್ತದೆ ಅಂತಾ ಅನಿಸಲ್ಲ. ಸದ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ, ಹಾಲಿ ಅಧ್ಯಕ್ಷರ ಅವಧಿ ಮುಗಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಪಕ್ಷದಲ್ಲಿ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ವಾತಾವರಣ ಇದೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ದಲಿತರಿಗೆ ಸಿಗಬೇಕು ಎನ್ನುವ ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಾವು ಯಾವಾಗಲೂ ಪಕ್ಷಕ್ಕೆ ಬದ್ಧ: ನನ್ನ ಮತ್ತು ಜನಾರ್ದನ ರೆಡ್ಡಿ ನಡುವೆ ಸಚಿವ ವಿ. ಸೋಮಣ್ಣ ಸಂಧಾನ ನಡೆಸುತ್ತಿರುವ ವಿಷಯದ ಕುರಿತು ಮಾತನಾಡಿದ ಶ್ರೀರಾಮುಲು, ನನ್ನ ಹಾಗೂ ಜನಾರ್ದನ ರೆಡ್ಡಿ ನಡುವೆ ಗೊಂದಲವೇ ಇಲ್ಲ. ಅವತ್ತಿನ ಪರಿಸ್ಥಿತಿಯಲ್ಲಿ ಜನಾರ್ದನ ರೆಡ್ಡಿ ಒಂದು ಮಾತು ಆಡಿದರು. ನಾನೂ ಒಂದು ಮಾತಾಡಿದೆ. ಅಧಿಕಾರ ವಿಷಯವಾಗಿ ನಾವುಗಳು ಗೊಂದಲ ಮಾಡಿಕೊಂಡಿಲ್ಲ. ಸಂಧಾನ ಮಾಡುವ ಪರಿಸ್ಥಿತಿ ಎಲ್ಲಿ ಬಂದಿದೆ ಎಂದು ಪ್ರಶ್ನಿಸಿದರು. ನಮ್ಮದು ಸ್ವಾರ್ಥ ಇಲ್ಲದ ರಾಜಕೀಯ, ಪಾರ್ಟಿ ಹಿತದೃಷ್ಟಿಯಿಂದ ರಾಜಕೀಯವಾಗಿ ಒಂದಾಗುತ್ತೇವೆ.
ನಾವು ಯಾವತ್ತಿದ್ದರೂ ಪಾರ್ಟಿ ನೋಡುತ್ತೇವೆ. ನಾನು ಇರಲಿ, ರೆಡ್ಡಿ ಇರಲಿ ಬೇರೆ ಯಾರೇ ಇದ್ದರೂ ಪಾರ್ಟಿ ಹಿತದೃಷ್ಟಿಯಿಂದ ಒಂದಾಗಬೇಕು ಒಂದಾಗಿಯೇ ಇರುತ್ತೇವೆ ಎಂದರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದ ಅವರು, ಅಂದಿನ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಬಾಯಿ ಮಾಡಿಕೊಂಡಿದ್ದು ನಿಜ, ಆವತ್ತಿನ ದಿನ ನಾನು ಮಾತನಾಡಿದ್ದು ತಪ್ಪು, ಅವರು ಮಾತನಾಡಿದ್ದು ತಪ್ಪು. ಆವತ್ತಿನ ಬೆಳವಣಿಗೆ ಎಲ್ಲವೂ ಮರೆತು ಹೋಗಿದ್ದೇವೆ ಎಂದರು. ರಾಜ್ಯದಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲಾ ಒಂದಾಗಬೇಕಾಗಿದೆ ಎಂದರು.
ರಾಜ್ಯ ಸರ್ಕಾರ ಕೋಮಾದಲ್ಲಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಶ್ರೀರಾಮುಲು, ರಾಜ್ಯದ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ ಎನ್ನಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಥವಾ ಸುರ್ಜೇವಾಲಾ ಅವರಾ ಅಂತಾ ಸ್ಪಷ್ಟೀಕರಣ ಕೊಡಬೇಕು. ದೆಹಲಿಯಿಂದ ಬಂದ ಉಸ್ತುವಾರಿಗಳು ಶಾಸಕರನ್ನು ಕರೆದು ಸಭೆ ಮಾಡುತ್ತಾರೆ. ಸಚಿವರನ್ನು ಕರೆದು ಮೀಟಿಂಗ್ ಮಾಡುತ್ತಾರೆ. ಸಿಎಂಗೆ ಯಾವುದೇ ಕಿಮ್ಮತ್ತು ಇಲ್ಲದ ಪರಿಸ್ಥಿತಿಯನ್ನು ಸುರ್ಜೇವಾಲಾ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಬದಲಾವಣೆ, ಶಾಸಕರು ಹಾಗೂ ಸಚಿವರ ಗೌಪ್ಯ ಸಭೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಆಕ್ಸಿಜನ್ ತೆಗೆದರೆ ಸಾಕು ಸರ್ಕಾರ ಬಿದ್ದು ಹೋಗುತ್ತದೆ ಎಂದು ವ್ಯಂಗ್ಯ ಮಾಡಿದರು. ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಆಗಲು ಬಿಡಲ್ಲ. ಸಿದ್ದರಾಮಯ್ಯ ಅವರು ಸುಲಭವಾಗಿ ರಾಜಕಾರಣ ಬಿಟ್ಟುಕೊಡಲ್ಲ. ಬಿಟ್ಟು ಕೊಡುವ ಸಮಯ ಬಂದರೆ ದಲಿತರನ್ನ ಮುಂದೆ ಬಿಡಬಹುದು, ಮಲ್ಲಿಕಾರ್ಜುನ ಖರ್ಗೆಯವರನ್ನು ತಂದರೂ ತರಬಹುದು. ಅಲ್ಲದೆ, ಎಸ್.ಟಿ. ಸಮುದಾಯಲ್ಲಿ ಸತೀಶ್ ಜಾರಕಿಹೊಳಿಯವರನ್ನು ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಲಿಂಗಾಯತರಲ್ಲಿ ಎಂ.ಬಿ. ಪಾಟೀಲ, ಒಕ್ಕಲಿಗರಲ್ಲಿ ಕೃಷ್ಣ ಬೈರೇಗೌಡರನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದ್ದು ಇದರಿಂದಾಗಿ ಕಾಂಗ್ರೆಸ್ ಗೊಂದಲದ ಗೂಡಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.