ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ ಗವರ್ನರ್ ಶಹಬ್ಬಾಸ್: ಗಣರಾಜ್ಯೋತ್ಸವ ಭಾಷಣದಲ್ಲಿ ಮೆಚ್ಚುಗೆ

Published : Jan 27, 2025, 04:54 AM IST
ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ ಗವರ್ನರ್ ಶಹಬ್ಬಾಸ್: ಗಣರಾಜ್ಯೋತ್ಸವ ಭಾಷಣದಲ್ಲಿ ಮೆಚ್ಚುಗೆ

ಸಾರಾಂಶ

ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದೆ. ಮುಂದೆಯೂ ಸಂವಿಧಾನದಲ್ಲಿರುವ ಒಕ್ಕೂಟ ತತ್ವಗಳ ಅನುಸಾರ ರಾಜ್ಯ-ರಾಜ್ಯಗಳ ಸಂಬಂಧ ಮತ್ತು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಮುಂದುವರೆಯಬೇಕೆಂದು ಕರ್ನಾಟಕ ಬಯಸುತ್ತದೆ ಎಂದು ತಿಳಿಸಿದರು.

ಬೆಂಗಳೂರು (ಜ.27): ‘ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿದೆ ಎಂಬ ನಿರಾಶಾವಾದಿಗಳ ಭವಿಷ್ಯ ಸುಳ್ಳಾಗಿದ್ದು, ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ ನ್ಯಾಯ ಎರಡನ್ನೂ ಸಮನಾಗಿ ನಿಭಾಯಿಸಿ ದೇಶದಲ್ಲಿ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘76ನೇ ಗಣರಾಜ್ಯೋತ್ಸವ ದಿನಾಚರಣೆ’ಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಸಂವಿಧಾನದ ಮಹತ್ತರ ಆಶಯವಾದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ನೆಲೆಗೊಳಿಸಲು ಶಕ್ತಿಮೀರಿ ಶ್ರಮಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಆಶಯಗಳಿಗೆ ಆಗುತ್ತಿರುವ ಹಿನ್ನಡೆ ಮತ್ತು ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ಅರಿತು ಜಾರಿಗೆ ತಂದ ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ ಎಂದರು. ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಮೆಚ್ಚಿದರು. ರಾಜ್ಯವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಒಕ್ಕೂಟ ಧರ್ಮದ ರೀತಿ ರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. 

ಸಾಲಗಾರರಿಗೆ ಕಿರುಕುಳ ಕೊಟ್ಟರೆ ಕ್ರಿಮಿನಲ್‌ ಕೇಸ್‌: ಮೈಕ್ರೋಫೈನಾನ್ಸ್‌ಗಳ ವಿರುದ್ಧ ಸುಗ್ರೀವಾಜ್ಞೆ ಅಸ್ತ್ರ

ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದೆ. ಮುಂದೆಯೂ ಸಂವಿಧಾನದಲ್ಲಿರುವ ಒಕ್ಕೂಟ ತತ್ವಗಳ ಅನುಸಾರ ರಾಜ್ಯ-ರಾಜ್ಯಗಳ ಸಂಬಂಧ ಮತ್ತು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಮುಂದುವರೆಯಬೇಕೆಂದು ಕರ್ನಾಟಕ ಬಯಸುತ್ತದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಹಣಕಾಸು ವ್ಯವಸ್ಥೆ ಉತ್ತಮವಾಗಿ ನಿರ್ವಹಿಸುತ್ತಿದ್ದು, 2024ರ ಡಿಸೆಂಬರ್‌ ಅಂತ್ಯಕ್ಕೆ ರಾಜ್ಯದ ಆದಾಯ ಸಂಗ್ರಹವು 1.81 ಲಕ್ಷ ಕೋಟಿಯಷ್ಟಿದೆ. ವರ್ಷದಿಂದ ವರ್ಷಕ್ಕೆ ಶೇ.13 ರಷ್ಟು ಬೆಳವಣಿಗೆ ಸಾಧಿಸಿಕೊಂಡು ಬಂದಿದೆ. ಜಿಎಸ್‌ಟಿ ಆದಾಯದ ಸಂಗ್ರಹದಲ್ಲೂ ರಾಜ್ಯ 2ನೇ ಸ್ಥಾನದಲ್ಲಿದೆ. ಆರೋಗ್ಯ, ವಿದ್ಯುತ್‌, ಶಿಕ್ಷಣ ಹಾಗೂ ರಸ್ತೆ ಸೇರಿ ಮೂಲಸೌಕರ್ಯ ಒದಗಿಸುವಲ್ಲೂ ಮುಂದಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ 2,491 ಕಿ.ಮೀ. ರಾಜ್ಯ ಹೆದ್ದಾರಿ, 3,103 ಕಿ.ಮೀ. ಜಿಲ್ಲಾ ರಸ್ತೆ ಸುಧಾರಣೆ ಮತ್ತು ನವೀಕರಣ ಮಾಡಲಾಗಿದ್ದು, 190 ಸೇತುವೆ ನಿರ್ಮಿಸಲಾಗಿದೆ. ರಾಜ್ಯವು ರಫ್ತಿನಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.11.17 ರಷ್ಟು ಬೆಳವಣಿಗೆ ಸಾಧಿಸಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ರು. ನೀಡಲಾಗುತ್ತಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ವಿಶೇಷ ಸಂಪುಟ ಸಭೆ ನಡೆಸಿ 11 ಸಾವಿರ ಕೋಟಿ ರು. ಮೊತ್ತದ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ ಎಂದರು. ಪ್ರಸಕ್ತ ಹಣಕಾಸು ವರ್ಷದಲ್ಲಿ 18.51 ಲಕ್ಷ ರೈತರಿಗೆ 15 ಸಾವಿರ ಕೋಟಿ ಮೌಲ್ಯದ ಅಲ್ಪಾವಧಿ ಬೆಳೆಸಾಲ, 39 ಸಾವಿರ ರೈತರಿಗೆ 1,168 ಕೋಟಿ ರು. ಮಧ್ಯಮ ಮತ್ತು ದೀರ್ಘಾವಧಿ ಕೃಷಿ ಸಾಲ ನೀಡಲಾಗಿದೆ. 8.90 ಲಕ್ಷ ಹಾಲು ಉತ್ಪಾದಕರಿಗೆ 1,124 ಕೋಟಿ ರು. ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಹೇಳಿದರು.

ಜನಸ್ಪಂದನ ಯಶಸ್ವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸ್ಮರಣಾರ್ಥ ಸರ್ಕಾರ ‘ಗಾಂಧಿ ಭಾರತ’ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ರಾಜ್ಯ ಸರ್ಕಾರ ಏಕೀಕೃತ ಸಾರ್ವಜನಿಕ ಕುಂದು ಕೊರತೆ ನಿವಾರಣಾ ವ್ಯವಸ್ಥೆಯಾದ ‘ಜನ ಸ್ಪಂದನ’ ನಾಗರಿಕರಿಗೆ ಯಾವುದೇ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಯನ್ನು ಕಾಲಮಿತಿಯೊಳಗೆ, ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ಪರಿಹರಿಸಲು ಸಹಕಾರಿಯಾಗಿದೆ. ಆ ಮೂಲಕ ಶೇ.97 ರಷ್ಟು ಕುಂದು ಕೊರತೆಗಳನ್ನು ಪರಿಹರಿಸಲಾಗಿದೆ ಎಂದರು.

ಅರಮನೆ ವಿಚಾರದಲ್ಲಿ ಯಾರ ವಿರುದ್ಧವೂ ದ್ವೇಷವಿಲ್ಲ: ಸಿಎಂ ಸಿದ್ದರಾಮಯ್ಯ

ರಾಷ್ಟ್ರದ ಏಕತೆ, ಸಮಾನತೆ ಮತ್ತು ಸಮೃದ್ಧಿಯನ್ನು ಸಾರುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮ್ಮ ಹಾದಿಗೆ ಮಾರ್ಗದರ್ಶನ ನೀಡುತ್ತಲೇ ಇರಲಿ. ದೇಶಭಕ್ತಿ ಮತ್ತು ಏಕತೆಯ ಮನೋಭಾವ ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ. ಸುಭದ್ರ, ಸೌಹಾರ್ದ ಹಾಗೂ ಸಮೃದ್ಧ ಕರ್ನಾಟಕ, ಭಾರತ ನಿರ್ಮಿಸಲು ಸಂವಿಧಾನದ ಶಕ್ತಿ ಬಳಸಿಕೊಂಡು ಮುನ್ನಡೆಯೋಣ. ಮಾದರಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಗೊಳಿಸೋಣ ಎಂದು ಹೇಳಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಬೆಂಗಳೂರು ನಗರ ಜಿಲ್ಲಾಕಾರಿ ಜಿ.ಜಗದೀಶ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌